Asianet Suvarna News Asianet Suvarna News

Karwar: ಹಿನ್ನೀರಿನ ಜತೆ ಮಿಶ್ರವಾಗುವ ಉಪ್ಪು ನೀರು, ಕಂಗಾಲಾದ ಜನತೆ

*  ನದಿಯಲ್ಲಿ‌ ಮಿಶ್ರಣವಾಗೋ‌ ಉಪ್ಪು ನೀರು ಬಾವಿಗಳಿಗೆ ಬಾರದಂತೆ ತಡೆಗೋಡೆ
*  ಉಪ್ಪು ನೀರು ಒಳಗೆ ಹರಿದು ಅಂತರ್ಜಲದೊಂದಿಗೆ ಸೇರಿ  ಬಾವಿಗಳ ನೀರು ಉಪ್ಪು 
*  ಕಳಪೆ ಕಾಮಗಾರಿಯಿಂದ ತುಂಡು ತುಂಡಾಗಿ ಉದುರಿ ಬೀಳುತ್ತಿರುವ ತಡೆಗೋಡೆ
 

First Published Apr 17, 2022, 12:51 PM IST | Last Updated Apr 17, 2022, 12:51 PM IST

ಕಾರವಾರ(ಏ.17): ಉತ್ತರಕನ್ನಡ ಜಿಲ್ಲೆಯ ಕಾರವಾರದ ಹೊರಭಾಗದಲ್ಲಿರುವ ಹಣಕೋಣ, ಹೊಟೆಗಾಳಿ, ಅಂಬಿಗವಾಡ, ಪಾಟ್ಲೋವಾಡಾ, ಬಾಬುನಾಯ್ಕವಾಡಾ ಮುಂತಾದೆಡೆ ಸುಮಾರು 35ಕ್ಕೂ ಅಧಿಕ ಮನೆಗಳಿದ್ದು, ಇಲ್ಲಿ ಸಾರ್ವಜನಿಕ ಬಾವಿ ಸೇರಿ ಸುಮಾರು 20ಕ್ಕೂ ಹೆಚ್ಚು ಕುಡಿಯುವ ನೀರಿನ ಬಾವಿಗಳಿವೆ. ಈ ಗ್ರಾಮ ಪಂಚಾಯತ್‌ಗಳ ನಡುವೆಯೇ ಕಾಳಿ ನದಿ ಹರಿದು ಸಮುದ್ರ ಸೇರುತ್ತಿದೆ. 

ಕಾರವಾರದಿಂದ ಕೊಂಚ ದೂರದಲ್ಲೇ ಕಾಳಿ ನದಿ ಹಾಗೂ ಸಮುದ್ರ ಸಂಗಮವಾಗುವುದರಿಂದ ಇಲ್ಲಿ ಹಿನ್ನೀರಿನ ಜತೆ ಮಿಶ್ರವಾಗುವ ಉಪ್ಪು ನೀರು ಈ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಹಿಂದಕ್ಕೆ ಹರಿಯುತ್ತಿದೆ. ಈ ಕಾರಣದಿಂದಾಗಿ ಕೋಟಿಗಟ್ಟಲೇ ರೂಪಾಯಿ ವೆಚ್ಚದಲ್ಲಿ ಸುಮಾರು 16 ಕಡೆಗಳಲ್ಲಿ ಸಿಮೆಂಟ್‌ನ‌ ತಡೆಗೋಡೆಗಳನ್ನು ನಿರ್ಮಿಸಲಾಗಿತ್ತು. ಆದರೆ, ಈ ತಡೆಗೋಡೆಗಳ ಕಾಮಗಾರಿ ಕಳಪೆಯಾಗಿದ್ದರಿಂದ ತಡೆಗೋಡೆಗಳೇ ತುಂಡು ತುಂಡಾಗಿ ಉದುರಿ ಬೀಳುತ್ತಿವೆ. ಅಲ್ಲದೇ, ತಡೆಗೋಡೆ ಭಾಗದಲ್ಲಿ ಗುಂಡಿಗಳೂ ಕಾಣಿಸತೊಡಗಿವೆ. ಇನ್ನು ತಡೆಗೋಡೆಯ ಅಡಿಭಾಗದಲ್ಲಿ ಗಟ್ಟಿ ಹಲಗೆಗಳನ್ನು ಅಳವಡಿಸಬೇಕಾಗಿತ್ತಾದರೂ ಸಪೂರ ಹಲಗೆಗಳನ್ನು ಅಳವಡಿಸಿ ಬೇಕಾಬಿಟ್ಟಿ ಕೆಲಸಗಳನ್ನು ನಡೆಸಲಾಗಿದೆ. ಇದರಿಂದಾಗಿ ಉಪ್ಪು ನೀರು ಒಳಗೆ ಹರಿದು ಅಂತರ್ಜಲದೊಂದಿಗೆ ಸೇರಿ  ಬಾವಿಗಳ ನೀರು ಉಪ್ಪಾಗತೊಡಗಿದೆ. ಅಲ್ಲದೇ, ಈ ಭಾಗದಲ್ಲಿ ರಾಶಿಯಾಗಿ ಪೊದೆಗಳು ನಿರ್ಮಾಣಗೊಂಡಿದ್ದು, ಇವುಗಳಡಿ ಹಾಗೂ ಬದಿಗಳಲ್ಲಿ ಸಂಗ್ರಹಗೊಂಡ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುತ್ತಿರುವುದರೊಂದಿಗೆ ನೀರು ಕೊಳೆತು ಇಡೀ ಊರಿಗೆ ಊರೇ ವಾಸನೆ ಬರುತ್ತಿದೆ. 

Hubli Riots: ಹುಬ್ಬಳ್ಳಿ ಗಲಾಟೆ ಹಿಂದೆ AIMIM ಕಾರ್ಪೋರೇಟರ್‌ ಕೈವಾಡ: ಪ್ರಮೋದ್ ಮುತಾಲಿಕ್ ಆರೋಪ

ಅಂದ ಹಾಗೆ, ಈ ತಡೆಗೋಡೆಯ ಅಡಿಭಾಗದಲ್ಲಿ ಉಪ್ಪು ನೀರು ಹಿನ್ನೀರಿನ ಜತೆ ಮಿಶ್ರಣವಾಗದಂತೆ ತಡೆಯಲು ಕಬ್ಬಿಣ ಅಥವಾ ಮರದ ದಪ್ಪ ಹಲಗೆಗಳನ್ನು ಅಳವಡಿಸಬೇಕಾಗಿತ್ತು. ಆದರೆ, ಸಾಕಷ್ಟು ಸಮಯಗಳಿಂದ ಸಪೂರ ಹಲಗೆಯನ್ನು ಅಳವಡಿಸಲಾಗುತ್ತಿರುವುದಿಂದ ಇವುಗಳು ಕೊಳೆತು ಪ್ರತೀ 3 ರಿಂದ 6 ತಿಂಗಳಿಗೊಮ್ಮೆ ಇವುಗಳು ತುಂಡಾಗಿ  ನೀರಿನಲ್ಲೇ ಕೊಚ್ಚಿ ಹೋಗುತ್ತಿವೆ. ಸಣ್ಣ ನೀರಾವರಿ ಇಲಾಖೆಗೆ ಸಾಕಷ್ಟು ಬಾರಿ ದೂರು ನೀಡಿದರೂ ಈವರೆಗೆ ಶಾಶ್ವತ ಪರಿಹಾರ ಒದಗಿಸದ್ದರಿಂದ ಸ್ಥಳೀಯರು ಕುಡಿಯುವ ನೀರಿಗಾಗಿ ಸಂಕಷ್ಟ ಎದುರಿಸುವುದು ಮುಂದುವರಿದಿದೆ. ಇನ್ನು ಈ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಒ ಪ್ರಿಯಾಂಗಾ ಅವರಿಗೆ ದೂರು ಸಲ್ಲಿಸಲಾಗಿದ್ದು, ಅವರ ಸೂಚನೆಯಂತೆ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಉಪ್ಪು ನೀರು ಸೇರ್ಪಡೆಗೊಳ್ಳುವ ಕೆಲವು ಸ್ಥಳಕ್ಕೆ ಮಾತ್ರ ತೆರಳಿ ವರದಿ ನೀಡಿದ್ದಾರೆ. ಆದರೆ, ಜನರಿಗೆ ಪ್ರಮುಖವಾಗಿ ಸಮಸ್ಯೆಯಾಗುತ್ತಿರುವ ಸ್ಥಳಕ್ಕೆ ಕೂಡಾ ಭೇಟಿ ನೀಡದೆ ಕೇವಲ ಸಾಮಾನ್ಯ ಮರದ ಹಲಗೆ ಹಾಕುವ ವ್ಯವಸ್ಥೆ ಮಾಡಿಸಿ ಹಿಂತಿರುಗಿದ್ದಾರೆ. ಜನರಿಗೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸದೆ ಕೇವಲ ನಾಮ್ ಕೇ ವಾಸ್ತೆ ಕೆಲಸ ಮಾಡಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.