ಕಾರವಾರದಲ್ಲಿ ಯೋಧನ ಸ್ಮಾರಕಕ್ಕೆ ಹಾನಿ ಆರೋಪ: ಕುಟುಂಬಸ್ಥರ ಕಣ್ಣೀರು
ದೇಶಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಹೆಮ್ಮೆಯ ವೀರಯೋಧನ ಸ್ಮಾರಕಕ್ಕೆ ರಕ್ಷಣೆ ಇಲ್ಲದಂತಾಗಿದೆ. ಸ್ಮಾರಕವಿರುವ ಪ್ರದೇಶದ ಹತ್ತಿರವಿರುವ ಮನೆಯವರು ಸ್ಮಾರಕವಿರುವ ಭಾಗದಲ್ಲೇ ಗೇಟ್ ನಿರ್ಮಿಸಿದ್ದು, ಸ್ಮಾರಕಕ್ಕೆ ಹಾನಿ ಮಾಡಲು ಯತ್ನಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಕಾರವಾರ: ಕಾರವಾರ ನಗರದ ಸಾಯಿಕಟ್ಟಾ ನಿವಾಸಿ ಸುರೇಶ್ ನಾಯ್ಕ್ ಎಂಬವರ ಕಿರಿಯ ಮಗ ವಿಜಯಾನಂದ ನಾಯ್ಕ ಭಾರತೀಯ ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದರು. 2018ರ ಜುಲೈ 9 ರಂದು ಛತ್ತೀಸ್‌ಗಢದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ನಕ್ಸಲರ ಬಾಂಬ್ ದಾಳಿಗೆ ತುತ್ತಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮನಾಗಿದ್ದರು. ಅವರ ಹುಟ್ಟೂರಾದ ಕಾರವಾರದಲ್ಲಿ ಬೃಹತ್ ಮೆರವಣಿಗೆ ಮಾಡುವ ಮೂಲಕ ಹುತಾತ್ಮ ಯೋಧನ ಅಂತ್ಯಸಂಸ್ಕಾರ ನೆರವೇರಿಸಿದ್ದು, ಅದರಂತೆ ಅವರ ನೆನಪಿಗಾಗಿ ಮನೆಯ ಸಮೀಪದ ಖಾಸಗಿ ಜಮೀನಿನಲ್ಲಿ ರಸ್ತೆಗೆ ಹೊಂದಿಕೊಂಡು ಸ್ಮಾರಕವೊಂದನ್ನು ನಿರ್ಮಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಆಗಸ್ಟ್ 15ರಂದು, ಜನವರಿ 26ರಂದು ಇಲ್ಲಿ ಧ್ವಜಾರೋಹಣ ಕೂಡಾ ನಡೆಸಲಾಗುತ್ತದೆ. ಇದಾಗಿ ಎರಡು ವರ್ಷಗಳ ಬಳಿಕ 2020ರಲ್ಲಿ ಸ್ಮಾರಕವಿದ್ದ ಪ್ರದೇಶಕ್ಕೆ ಹೊಂದಿಕೊಂಡಿದ್ದ ಜಾಗವನ್ನು ವಾರ್ಡ್ ಸದಸ್ಯ ಮೋಹನ್ ಶಿವಾ ನಾಯ್ಕ್ ಹಾಗೂ ಶ್ಯಾಮ್ ಶಿವಾ ನಾಯ್ಕ್ ಎಂಬವರು ಖರೀದಿಸಿದ್ದು, ಸ್ಮಾರಕವಿರುವ ಪ್ರದೇಶದ ಬಳಿ ತಮ್ಮ ಕಾಂಪೌಂಡ್ ತೆರವುಗೊಳಿಸಿ ಗೇಟ್ ನಿರ್ಮಿಸಿಕೊಂಡಿದ್ದಾರೆ. ವಾರ್ಡ್ ಸದಸ್ಯ ಮೋಹನ್ ಶಿವಾ ನಾಯ್ಕ್ ಹಾಗೂ ಆತನ ಸಹೋದರ ಶ್ಯಾಮ್ ಶಿವಾ ನಾಯ್ಕ್ ದುರುದ್ದೇಶಪೂರ್ವಕವಾಗಿ ಸ್ಮಾರಕಕ್ಕೆ ಹಾನಿಯಾಗುವಂತೆ ವಾಹನವನ್ನು ಚಲಾಯಿಸುತ್ತಿದ್ದು, ಇದನ್ನು ಪ್ರಶ್ನಿಸಿದರೆ ವಿನಾಕಾರಣ ಜಗಳ ತೆಗೆದು ಸ್ಮಾರಕ ತೆರವುಗೊಳಿಸೋದಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಅಲ್ಲದೇ, ಪಾಲಿಕೆಯ ಆದೇಶವಿದೆ ಎಂದು ಸ್ಮಾರಕಕ್ಕೆ ಹಾನಿ ಮಾಡುತ್ತಿದ್ದಾರೆ ಎಂದು ಯೋಧನ ಕುಟುಂಬಸ್ಥರು ಆರೋಪಿಸಿದ್ದಾರೆ. ಹುತಾತ್ಮ ಮಗನ ಸ್ಮಾರಕಕ್ಕೆ ರಕ್ಷಣೆ ನೀಡಿ ಎಂದು ಯೋಧನ ಪೋಷಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಕಣ್ಣೀರಿಟ್ಟಿದ್ದಾರೆ.
Chikkamagaluru: ವಿಚಿತ್ರ ಕರು ಜನನ, ನೋಡಲು ಮುಗಿಬಿದ್ದ ಜನ..!