Asianet Suvarna News Asianet Suvarna News

ಕರಾವಳಿಯಲ್ಲಿ ಜನ್ನ ಕಂಬಳ ವೈಭವ: ಬಂಟ ಸಮುದಾಯದ ದೊಡ್ಡಮನೆಯಲ್ಲಿ ಸಂಭ್ರಮ

ಕಂಬಳವೆಂದರೆ ಕೇವಲ ಕೋಣಗಳ ಪೈಪೋಟಿಯಲ್ಲ. ಅದೊಂದು ನಂಬಿಕೆ ಮತ್ತು ಸಂಪ್ರದಾಯ. ಬೆಂಗಳೂರು ಕಂಬಳ ನೋಡಿ ಖುಷಿ‌ಪಟ್ಟವರು, ಕಂಬಳದ ಮೂಲ ಸ್ವರೂಪ ನೋಡಲು ಕರಾವಳಿಗೆ ಬರಬೇಕು. ಉಡುಪಿ ಜಿಲ್ಲೆ ಹೆರಂಜೆ ದೊಡ್ಮನೆಯಲ್ಲಿ ನಡೆದ ಸಾಂಪ್ರದಾಯಿಕ ಕಂಬಳದ ಸೊಬಗು ಇಲ್ಲಿದೆ..

ದೈವದ ಮನೆಯಲ್ಲಿ ವಾಲಗದ ಕಲರವ, ಕಂಬಳ(Kambala) ಗದ್ದೆಗೆ ದೈವದ ಮೆರವಣಿಗೆ, ಮಿಂಚುವ ಮೈಕಟ್ಟಿನ ಕೋಣಗಳು(Buffalo race), ಕಾಲು ಗಂಟಿನವರೆಗೆ ನೀರು ತುಂಬಿದ ಗದ್ದೆಗಳು. ಸಾಂಪ್ರದಾಯಿಕ ಕಂಬಳವನ್ನು ನೋಡುವುದೇ ಹಬ್ಬ. ತಲೆಮಾರುಗಳ ಹಿಂದೆ ಅಬ್ಬರವಿಲ್ಲದ ಸುಂದರ ಕಂಬಳ ಹೇಗೆ ನಡೆಯುತ್ತಿತ್ತು ಎಂಬ ಮೂಲ ಸ್ವರೂಪ‌ ಕಾಣಲು ಉಡುಪಿಯ(Udupi) ಹೆರಂಜೆಗೆ ಬರಬೇಕು. ಹೆರಂಜೆಯ(Heranje) ಕಂಬಳವನ್ನು ಜನ್ನ ಕಂಬಳ ಎಂದು ಕರೆಯುತ್ತಾರೆ. ಶತಮಾನಗಳ ಹಿಂದೆ ಜೈನ ಸಮುದಾಯದವರು ಈ ಕಂಬಳವನ್ನು ನಡೆಸಿದರೆ, ನಂತರದ ದಿನಗಳಲ್ಲಿ ಬಂಟ ಸಮುದಾಯ ದೊಡ್ಡಮನೆಯವರು ಕಂಬಳದ ವೈಭವವನ್ನು ಮುಂದುವರೆಸಿದ್ದಾರೆ. ಸುಮಾರು 450 ವರ್ಷಗಳ ಇತಿಹಾಸವಿರುವ ಜನ್ನ ಕಂಬಳ ಕರಾವಳಿ ಭಾಗದಲ್ಲಿ ಅತ್ಯಂತ ಜನಪ್ರಿಯವಾಗಿದೆ.

ಕೃಷಿ ಸಂಸ್ಕೃತಿ, ದೈವರಾದನೆ, ಜನರ ನಂಬಿಕೆಗಳು ಬೆರೆತಿರುವ ಈ ಸಾಂಪ್ರದಾಯಿಕ ಕಂಬಳಗಳನ್ನು ದೈವ ಕಂಬಳ ಎಂದೇ ಕರೆಯಲಾಗುತ್ತದೆ. ಕಂಬಳ ನಿಷೇಧದ ಭೀತಿ ಎದುರಾದಾಗ ನಂಬಿಕೆಯ ತಳಹದಿಯಲ್ಲಿ ಕಟ್ಟಲ್ಪಟ್ಟ ಇಂತಹ ಸಾಂಪ್ರದಾಯಿಕ ಕಂಬಳಗಳು ಪ್ರಮುಖ ಪಾತ್ರವಹಿಸಿದ್ದವು. ಗದ್ದೆಯ ಅಂಚಿನಲ್ಲಿ ಸಾಗಿ ಬರುವ ದೈವದ ಮೆರವಣಿಗೆ, ಮತ್ತು ಜನ್ನ ದೈವವನ್ನೇ ಮುಂದಿಟ್ಟುಕೊಂಡು ನಡೆಯುವ ಕೋಣಗಳ ಓಟ ರೋಮಾಂಚನ ಗೊಳಿಸುತ್ತದೆ. ಕಾಲು ಗಂಟೆನವರೆಗೂ ನೀರು ತುಂಬಿದ ಗದ್ದೆಗಳಲ್ಲಿ ಓಡುವುದೇ ಒಂದು ಹರಸಾಹಸ. ಸಾಂಪ್ರದಾಯಿಕ ಕಂಬಳಗಳಲ್ಲಿ ಕೋಣಗಳನ್ನು ಓಡಿಸುವುದೆಂದರೆ ಅದೊಂದು ಶ್ರದ್ಧೆ. ಹೆರಂಜೆ ದೊಡ್ಡ ಮನೆಯವರು ಪ್ರತಿಷ್ಠೆಯಾಗಿ ಈ ಕಂಬಳವನ್ನು ನಡೆಸುತ್ತಿದ್ದು, ಭಾಗವಹಿಸುವ ಕೋಣಗಳಿಗೆ ಗೌರವಧನ ಮತ್ತು ಬಹುಮಾನ ಕೊಟ್ಟು ಪುರಸ್ಕರಿಸುತ್ತಾರೆ. ದೈವ ಕಂಬಳಗಳಲ್ಲಿ ಹೆಚ್ಚಾಗಿ ಹರಕೆ ಹೊತ್ತು ಕೋಣಗಳನ್ನು ಓಡಿಸುವ ಪರಿಪಾಠವು ಇದೆ. ಕೋಣಗಳಿಗೆ ಕಾಯಿಲೆ ಬಾಧಿಸಿದಾಗ ಗದ್ದೆಗಳಲ್ಲಿ ಓಡಿಸುವ ಮೂಲಕ ದೇವರ ಹರಕೆ ತೀರಿಸುವ ಅಪೂರ್ವ ಪದ್ಧತಿ ಬೆಳೆದು ಬಂದಿದೆ. ಲಕ್ಷಾಂತರ ವೆಚ್ಚವನ್ನು ಕಂಬಳ ನಡೆಸುವ ಮನೆತನಗಳೇ ವ್ಯಯಿಸಬೇಕಾದ ಕಾರಣ, ಸರಕಾರ ನೆರವು ಕೊಟ್ಟರೆ ತುಳುನಾಡಿನ ಅಪರೂಪದ ಸಂಪ್ರದಾಯ ಉಳಿಸಬಹುದಾಗಿದೆ. ಉಡುಪಿ ಜಿಲ್ಲೆಯಲ್ಲಿ ಸುಮಾರು ಮೂವತ್ತಕ್ಕೂ ಅಧಿಕ ಸಾಂಪ್ರದಾಯಿಕ ಕಂಬಳಗಳು ನಡೆಯುತ್ತವೆ. 

ಇದನ್ನೂ ವೀಕ್ಷಿಸಿ:  ಇಂದು ಜೈಪುರಕ್ಕೆ ಆಗಮಿಸಲಿರುವ ಬಿಜೆಪಿ 3 ವೀಕ್ಷಕರು: ರಾಜಸ್ಥಾನದಲ್ಲೂ ಹೊಸಬರಿಗೆ ಸಿಎಂ ಪಟ್ಟ ಪಕ್ಕನಾ ?