ವಿಜಯಪುರ: ಶಾಸ್ತ್ರೀ- ಕುಂಟೋಜಿ ಕುಟುಂಬದ ಒಡನಾಟ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ!
ವಿಜಯಪುರ (Vijayapura) ಜಿಲ್ಲೆಯಲ್ಲಿ ಮುಸ್ಲಿಮ ವ್ಯಾಪಾರಸ್ಥರಿಗೆ ಜಾತ್ರೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು, ಹಿಂದೂ ಮುಸ್ಲಿಮರು ಸೇರಿ ಕತ್ನಳ್ಳಿ ಸದಾಶಿವ ಮುತ್ಯಾನ ಜಾತ್ರೆ ಮಾಡುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ರು. ಇದೀಗ ಮತ್ತೊಮ್ಮೆ ಭಾವೈಕ್ಯತೆಗೆ ವಿಜಯಪುರ ಜಿಲ್ಲೆ ಸಾಕ್ಷಿಯಾಗಿದೆ.
ವಿಜಯಪುರ (ಏ.21):ಜಿಲ್ಲೆಯಲ್ಲಿ ಮುಸ್ಲಿಮ ವ್ಯಾಪಾರಸ್ಥರಿಗೆ ಜಾತ್ರೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು, ಹಿಂದೂ ಮುಸ್ಲಿಮರು ಸೇರಿ ಕತ್ನಳ್ಳಿ ಸದಾಶಿವ ಮುತ್ಯಾನ ಜಾತ್ರೆ ಮಾಡುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ರು. ಇದೀಗ ಮತ್ತೊಮ್ಮೆ ಭಾವೈಕ್ಯತೆಗೆ ವಿಜಯಪುರ (Vijayapura) ಜಿಲ್ಲೆ ಸಾಕ್ಷಿಯಾಗಿದೆ.
ಹಿಂದೂ ಹಾಗೂ ಮುಸ್ಲಿಂ ಬಾಂಧವರು ಅಣ್ಣ ತಮ್ಮಂದಿರು ಅನ್ನೋ ಸಂದೇಶ ಸಾರಿದ್ದಾರೆ ಮುದ್ದೇಬಿಹಾಳ ಪಟ್ಟಣದ ಹಿಂದೂ ಹಾಗೂ ಮುಸ್ಲಿಂ ಕುಟುಂಬಗಳು. ಎರಡು ಕುಟುಂಬಗಳ ಒಡನಾಟ ಹೇಗಿದೆ ಅಂದ್ರೆ ಐವತ್ತು ವರ್ಷದ ಗೆಳೆತನವೇ ಇದಕ್ಕೆ ಸಾಕ್ಷಿ. ಮುದ್ದೇಬಿಹಾಳ ಪಟ್ಟಣದ ಹೊರಪೇಟಿಯಲ್ಲಿರೋ ಬ್ರಾಹ್ಮಣ ಸಮಾಜದ ವಾಸುದೇವ ನಾರಾಯಣರಾವ್ ಶಾಸ್ತ್ರೀ ಹಾಗೂ ಫೋಟೋಗ್ರಾಫರ್ ಆಗಿರೋ ಅಲ್ಲಿಸಾಬ ಕುಂಟೋಜಿ ಅವ್ರ ಸ್ನೇಹದ ಬಾಂಧವ್ಯ ಅಂತಹದ್ದು. ಅಲ್ಲಿಸಾಬ ಕುಂಟೋಜಿ ಅವರ ಮೊಮ್ಮಗಳಾಗಿರೋ ಆರು ವರ್ಷದ ಬಾಲಕಿ ಶಿಫನಾಜ್ ರಮ್ಜಾನ್ ತಿಂಗಳ ಉಪವಾಸ ಆಚರಿಸುತ್ತಿದ್ದಾಳೆ.
ಇಲ್ಲಿ ಮುಸ್ಲಿಂ ಕುಟುಂಬಕ್ಕೆ ಆಹ್ವಾನ ಕೊಟ್ಟ ಮೇಲೆ ನಡೆಯೋದು ಹನುಮಂತ ಜಾತ್ರೆ
ಬೆಳಗ್ಗಿನ ಜಾವ ಮೂರು ಗಂಟೆಗೆ ಎದ್ದು ಸಂಜೆ ಆರು ಗಂಟೆಯವರೆಗೆ ರೋಜಾ ಆಚರಿಸ್ತಿದ್ದಾಳೆ. ಈ ಬಾಲಕಿ ಹೆಚ್ಚಾಗಿ ಇರೋದೆ ವಾಸುದೇವ ಶಾಸ್ತ್ರೀ ಅವರ ಮನೆಯಲ್ಲಿ. ಉಪವಾಸ ಆಚರಿಸುವ ಬಾಲಕಿ ಶಿಫಾನಾಜ್‌ಗೆ ಸತ್ಕರಿಸಲು ನಿರ್ಧರಿಸಿದ ಶಾಸ್ತ್ರೀ ಕುಟುಂಬ, ಹಿಂದೂಗಳ ಸಂಪ್ರದಾಯದಂತೆ ದೀಪದ ಆರತಿ ಬೆಳಗಿ ಹೊಸ ಬಟ್ಟೆ ಕೊಟ್ಟು ಆಕೆಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ್ರು.
ನಮ್ಮ ನಮ್ಮಲ್ಲಿ ಹಿಂದೂ ಮುಸ್ಲಿಂ ಎಂಬ ಬೇಧಭಾವ ಏಕೆ ? ಕುಡಿವ ನೀರು,ಉಸಿರಾಡುವ ಗಾಳಿ, ಸುಡುವ ಅಗ್ನಿ ಒಂದೇ ಆಗಿದೆ. ನಾವೆಲ್ಲ ಒಂದೇ ತಾಯಿಯ ಮಕ್ಕಳಂತೆ ಬದುಕು ನಡೆಸಬೇಕು. ಆರು ವರ್ಷದ ಶಿಫಾನಾಜ್, ನಮ್ಮ ಮನೆಗೆ ಬಂದು ನೀವೇಕೆ ನಮಾಜ್ ಮಾಡುವುದಿಲ್ಲ? ದೇವರಿಗೆ ಏಕೆ ಕೈ ಮುಗಿಯುತ್ತೀರಿ? ನಮ್ಮ ಮನೆಯಲ್ಲಿ ಅಲ್ಲಾಹನಿಗೆ ಬೇಡಿಕೊಳ್ಳುವಂತೆ ಏಕೆ ಬೇಡಿಕೊಳ್ಳುವುದಿಲ್ಲ? ಎಂದೆಲ್ಲಾ ಪ್ರಶ್ನಿಸುತ್ತಾಳೆ. ಆಕೆಯ ಮುಗ್ಧತೆ, ಕೋಮು ಭಾವನೆ ಬಿತ್ತಿ ಅಶಾಂತಿ ಸೃಷ್ಟಿಸುವ ಮನಸ್ಸನ್ನೂ ಪರಿವರ್ತನೆ ಮಾಡುವಂತಿದೆ. ಸಹೋದರರಂತೆ ಇರುವ ನಾವೆಲ್ಲಾ ಒಂದೇ ಎಂಬ ಭಾವದಿಂದ ಸಾಗಬೇಕಾಗಿದೆ. ಆಕೆ ಹುಟ್ಟಿದ್ದು ಮುಸ್ಲಿಂ ಮನೆತನದಲ್ಲೇ ಆಗಿದ್ದರೂ ಆಚರಣೆಯಲ್ಲಿ ಹಿಂದೂಗಳ ಪದ್ಧತಿಯನ್ನೇ ನೋಡಿ ಅದನ್ನು ಕಲಿಯುತ್ತಾಳೆ. ಅವರಲ್ಲಿನ ಸಂಸ್ಕೃತಿಯನ್ನು ನಮಗೆ ಕಲಿಸುತ್ತಾಳೆ. ಇದರಲ್ಲಿ ನಾವ್ಯಾರೂ ಬೇಧಭಾವ ಮಾಡಿಲ್ಲ ಅಂತ ಹೇಳ್ತಿದ್ದಾರೆ.
ಇನ್ನು ವಿಶೇಷವೆಂದರೆ ಶಾಸ್ತ್ರೀಯವರ ಮಕ್ಕಳಾದ ಗೌರಿ ಹಾಗೂ ರಾಣಿ, ಬಾಲಕಿ ಶಿಫಾನಾಜ್‌ಗೆ ಮುಸ್ಲಿಂ ಧರ್ಮೀಯರು ಧರಿಸುವಂತೆ ವಸ್ತ್ರವನ್ನು ಸುತ್ತಿ ಮುದ್ದಿಸುವ ದೃಶ್ಯ ಎರಡೂ ಕುಟುಂಬಗಳ ಅನ್ಯೋನ್ಯತೆಗೆ ಸಾಕ್ಷಿಯಾಗಿತ್ತು. ಇನ್ನು ತಮ್ಮ ಮಗಳು ಮೊದಲನೇ ರೋಜಾ ಮಾಡಿದ್ದಕ್ಕೆ ಸಂಭ್ರಮಿಸಿದ ಶಾಸ್ತ್ರೀ ಕುಟುಂಬದವರ ಆತಿಥ್ಯ ಸ್ವೀಕರಿಸಲು ಅವರ ಮನೆಗೆ ಹೋದ ಮಹ್ಮದರಫೀಕ ಸಾತಖೇಡ ಹಾಗೂ ಅವರ ಪತ್ನಿ ಫಿರ್ದೋಷ್ ಅವರು ಮಗಳಿಗೆ ಆರತಿ ಎತ್ತಿ ಹೂ ಮುಡಿಸುವುದನ್ನು ಗೌರವ ಭಾವನೆಯಿಂದಲೇ ಸ್ವೀಕರಿಸಿದ್ರು.