ಉತ್ತರಕನ್ನಡ: ಮಾಜಾಳಿ ಬಂದರು ನಿರ್ಮಾಣಕ್ಕೆ ಮೀನುಗಾರರ ವಿರೋಧ
ಸಾಗರ ಮಾಲಾ ಅಡಿಯಲ್ಲಿ ಬಂದರು ನಿರ್ಮಾಣ ಯೋಜನೆ, ಸ್ಥಳಿಯ ಮೀನುಗಾರರಿಗೆ ಮನೆ ಮಠ ಕಳೆದುಕೊಳ್ಳುವ ಆತಂಕ
ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಕಾರವಾರ(ಸೆ.08): ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯಲ್ಲಿ 250ಕೋಟಿ ರೂ. ವೆಚ್ಚದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ ಯೋಜನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ "ಸಾಗರ ಮಾಲಾ"ದ ಅಡಿಯಲ್ಲಿ ಈ ಬಂದರು ನಿರ್ಮಾಣವಾಗಲಿದೆ. ಆದರೆ, ಈ ಯೋಜನೆ ಸಂಬಂಧಿಸಿ ಸ್ಥಳೀಯ ಮೀನುಗಾರರು ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಬಂದರು ನಿರ್ಮಾಣಕ್ಕೆ ಅವಕಾಶ ನೀಡೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ...
ಹೌದು, ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ "ಸಾಗರಮಾಲಾದ ಅಡಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯಲ್ಲಿ 250ಕೋಟಿ ರೂ. ವೆಚ್ಚದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಅನುಮೋದನೆ ದೊರಕಿದೆ. ಕರ್ನಾಟಕ ಮೆರಿಟೈಮ್ ಬೋರ್ಡ್ ಮತ್ತು ಮೀನುಗಾರಿಕಾ ಇಲಾಖೆಯು ಈ ಯೋಜನೆಯನ್ನು ಜಂಟಿಯಾಗಿ ಜಾರಿಗೊಳಿಸಲಿವೆ. ಮಾಜಾಳಿ, ಮಧ್ಯ ದಾಂಡೇಭಾಗ್, ದೇವಭಾಗ್, ಬಾವಳ, ಹಿಪ್ಪಳ್ಳಿ, ಚಿತ್ತಾಕುಲಾ, ಗಾಭಿತವಾಡ ಮುಂತಾದ ಭಾಗದ ಮೀನುಗಾರರಿಗೆ ಅನುಕೂಲವಾಗಲೆಂದು ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಬಂದರಿನ ಕಾಮಗಾರಿ 3 ವರ್ಷಗಳ ಕಾಲ ನಡೆಯಲಿದ್ದು, ತೀರ ವ್ಯಾಪ್ತಿ ಪ್ರದೇಶವು 3 ಮೀಟರ್ ಆಳವಿರಲಿದೆ. ಇಲ್ಲಿ 80 ದೋಣಿಗಳನ್ನು ನಿಲ್ಲಿಸಬಹುದಾಗಿದ್ದು, 1,140 ಮೀಟರ್ ಉತ್ತರದ ಅಲೆ ತಡೆಗೋಡೆ, 595 ಮೀಟರ್ ದಕ್ಷಿಣದ ಅಲೆ ತಡೆಗೋಡೆ ನಿರ್ಮಾಣವಾಗಲಿದೆ. ಈ ಬಂದರಿನಲ್ಲಿ ವರ್ಷಕ್ಕೆ 15.50 ಟನ್ ವರ್ಷಕ್ಕೆ ಮೀನು ವಹಿವಾಟು ನಡೆಯಲಿದ್ದು, 4,716 ಮೀನುಗಾರರಿಗೆ ಸಹಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಮೀನುಗಾರಿಕಾ ಸಚಿವ ಎಸ್. ಅಂಗಾರ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯಕ್ಕೆ ಯೋಜನೆಯ ಟೆಂಡರ್ ನಡೆಯಲಷ್ಟೇ ಬಾಕಿಯಿದೆ. ಇಷ್ಟಾದರೂ ಸ್ಥಳೀಯ ಮೀನುಗಾರರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಯೋಜನೆ ಅನುಷ್ಠಾನಗೊಳಿಸಲು ಬಿಡುವುದಿಲ್ಲ. ಮೀನುಗಾರರ ಜತೆ ಚರ್ಚಿಸದೆ ಯೋಜನೆ ಅನುಷ್ಠಾನಕ್ಕೆ ಮುಂದಾದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಮೀನುಗಾರ ಮುಖಂಡ ಶ್ರೀಪಾದ್ ಮುರಾರಿ ಎಚ್ಚರಿಸಿದ್ದಾರೆ.
UTTARA KANNADA: ಸದ್ಯದಲ್ಲೇ ಪರಂಪರಾ ವಿಶ್ವವಿದ್ಯಾನಿಲಯ ಸ್ಥಾಪನೆ: ರಾಘವೇಶ್ವರ ಶ್ರೀ
ಮೀನುಗಾರ ಮುಖಂಡರು ಹೇಳುವಂತೆ ಮೀನುಗಾರರನ್ನು ಒಕ್ಕಲೆಬ್ಬಿಸಿ ಜಿಲ್ಲೆಯಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈ ಹಿಂದೆ ಸೀಬರ್ಡ್ ಯೋಜನೆ, ಹೊನ್ನಾವರ, ಕಾರವಾರದಲ್ಲಿ ಬಂದರು ನಿರ್ಮಾಣ ಯೋಜನೆಯಲ್ಲಿ ಮೀನುಗಾರರು ಎಲ್ಲವನ್ನೂ ಕಳೆದುಕೊಂಡಿದ್ದರು. ಮೀನುಗಾರರಿಗೆ ಉದ್ಯೋಗ ಒದಗಿಸುವುದಾಗಿ ಆಶ್ವಾಸನೆ ನೀಡಿ ಮನೆ-ಮಠಗಳನ್ನು ಕಳೆದುಕೊಳ್ಳುವಂತೆ ಮಾಡಲಾಗಿದೆ ಹೊರತು ಈವರೆಗೆ ಯಾವುದೇ ಉದ್ಯೋಗವಕಾಶ ನೀಡಲಾಗಿಲ್ಲ. ಮಾಜಾಳಿ ವ್ಯಾಪ್ತಿಯಲ್ಲಿ ಸಾವಿರಾರು ಮೀನುಗಾರರು ಮೀನುಗಾರಿಕೆ ನಡೆಸುತ್ತಾ ಜೀವನ ಸಾಗಿಸುತ್ತಿದ್ದು, ಸಾಗರಮಾಲಾದಡಿ ನಡೆಯುವ ಈ ಯೋಜನೆ ಜಾರಿಗೊಂಡಲ್ಲಿ ಮತ್ತೆ ಎಲ್ಲರೂ ಮನೆ ಮಠಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಬಾರಿಯೂ ಉದ್ಯೋಗ, ಪರಿಹಾರದ ಪೊಳ್ಳು ಭರವಸೆ ನೀಡಿ ಎಲ್ಲರನ್ನೂ ಒಕ್ಕಲೆಬ್ಬಿಸಲಾಗುತ್ತದೆ. ಒಂದು ವೇಳೆ ಹೀಗೆ ನಡೆದಲ್ಲಿ ಎಲ್ಲಾ ಮೀನುಗಾರರು ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ಮೀನುಗಾರ ಮುಖಂಡ ಪ್ರಕಾಶ್ ಮಾಜಾಳಿಕರ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಸರ್ವ ಋತು ಕಡಲತೀರ ಎಂದು ಖ್ಯಾತಿ ಪಡೆದಿರುವ ಮಾಜಾಳಿ ಕಡಲತೀರದ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ. ಇಲ್ಲಿ ಹೇಗಾದರೂ ಮಾಡಿ ಬಂದರು ನಿರ್ಮಾಣ ಮಾಡಬೇಕು ಅಂತಾ ಸರ್ಕಾರ ನಿರ್ಧಾರ ಮಾಡಿದೆ. ಆದರೆ, ಇಲ್ಲಿನ ಮೀನುಗಾರರು ಮಾತ್ರ ಯಾವುದೇ ಕಾರಣಕ್ಕೂ ಬಂದರು ನಿರ್ಮಾಣಕ್ಕೆ ಅವಕಾಶ ನೀಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ಕಡಲತೀರ ಕಡಲಾಮೆಗಳು ಮೊಟ್ಟೆ ಇಡಲು ಸೂಕ್ತವಾದ ಜಾಗವಾಗಿರೋದ್ರಿಂದ ಪ್ರತಿವರ್ಷ ಈ ಪ್ರದೇಶದಲ್ಲಿ ಆಲಿವ್ ರಿಡ್ಲೆ ಆಮೆಗಳು ಮೊಟ್ಟೆ ಇಟ್ಟು ತೆರಳುತ್ತವೆ. ಹೀಗಾಗಿ ಒಂದು ವೇಳೆ ಬಂದರು ನಿರ್ಮಾಣವಾದಲ್ಲಿ ಮೀನುಗಾರರಿಗೆ ಮಾತ್ರವಲ್ಲದೇ, ಆಮೆಗಳಿಗೆ ಮೊಟ್ಟೆ ಇಡುವುದಕ್ಕೂ ತೊಂದರೆಯಾಗುತ್ತೆ ಎನ್ನುವುದು ಮೀನುಗಾರರ ಅಭಿಪ್ರಾಯ.