Asianet Suvarna News Asianet Suvarna News

ರಾಯಚೂರಲ್ಲಿ ಬಂಜಾರ ಸಮುದಾಯದ ದೀಪಾವಳಿ ಆಚರಣೆ ಸ್ಪೆಷಲ್: ಪೂಜೆ ಪುನಸ್ಕಾರ..ಮನೆಮನೆಗಳಲ್ಲೂ ಹಬ್ಬದ ಸಂಭ್ರಮ

ನಾಡಿನಾದ್ಯಂತ್ಯ ಬೆಳಕಿನ ಹಬ್ಬ ದೀಪವಳಿ ಸಂಭ್ರಮ ಕಳೆಗಟ್ಟಿದೆ. ಈ ದೀಪಾವಳಿ ಹಬ್ಬವನ್ನ ಒಂದು ಪ್ರದೇಶದಲ್ಲಿ ಒಂದೊಂದು ರೀತಿ ಆಚರಿಸುತ್ತಾರೆ. ಅದರಲ್ಲೂ ಬಿಸಿಲುನಾಡು ರಾಯಚೂರು ಜಿಲ್ಲೆಯ ಬಂಜಾರ ಸಮುದಾಯದ ದೀಪಾವಳಿ ಹಬ್ಬದ ಆಚರಣೆ ನೋಡಲು ಎರಡು ಕಣ್ಣು ಸಾಲದು. 
 

ಎಲ್ಲೆಲ್ಲೂ ಹಣತೆಗಳ ಸಾಲು..ಹೂವಿನ ಅಲಂಕಾರ..ವಿಶೇಷ ಪೂಜೆ ಪುನಸ್ಕಾರ.. ಮನೆಮನೆಗಳಲ್ಲೂ ದೀಪಾವಳಿ(Deepavali) ಹಬ್ಬದ ಸಂಭ್ರಮ..ಇದು ಬಂಜಾರ ಸಮುದಾಯದ ತಾಂಡಾಗಳಲ್ಲಿನ ದೀಪಾವಳಿ ಸಂಭ್ರಮದ ಝಲಕ್. ಬೆಳಕಿನ ಹಬ್ಬವನ್ನು ನಾಡಿನೆಲ್ಲೆಡೆ ಅವರವರ ಸಾಂಪ್ರಾದಾಯದಂತೆ ಆಚರಿಸುತ್ತಾರೆ. ರಾಯಚೂರು(Raichur) ಜಿಲ್ಲೆಯ ತಾಂಡಾಗಳಲ್ಲಿ ಬಂಜಾರ ಸಮುದಾಯವೂ(Banjara community) ದೀಪಾವಳಿ ಹಬ್ಬವನ್ನ ವಿಶೇಷ ಮತ್ತು ವಿಭಿನ್ನವಾಗಿ ಆಚರಿಸುತ್ತಾರೆ. ಮಹಿಳೆಯರು ಒಂದು ತಿಂಗಳುಗಳಿಂದ ಸಿದ್ಧತೆ ಮಾಡಿಕೊಂಡು ಹಬ್ಬ ಆಚರಿಸುತ್ತಾರೆ. ಮತ್ತೊಂದು ವಿಶೇಷವೆಂದರೆ ತಾಂಡಾ ಸದಸ್ಯರು ಅದೆಷ್ಟೇ ದೂರದ ಊರುಗಳಲ್ಲಿದ್ದರೂ ದೀಪಾವಳಿ ಹಬ್ಬಕ್ಕೆ ತಪ್ಪದೇ ಬಂದು ತಾಂಡಾ  ಸೇರಿಕೊಳ್ತಾರೆ. ಇನ್ನು ದೀಪಾವಳಿ ದಿನ ಗ್ರಾಮದ ಮುತ್ತೈದೆಯರೆಲ್ಲ ಭಾಜಾ ಭಜಂತ್ರಿಯೊಂದಿಗೆ ಗ್ರಾಮದ ಗಡಿವರೆಗೆ ಮೆರವಣಿಗೆ ಹೊರಡುತ್ತಾರೆ. ಈ ವೇಳೆ ಭಜನೆಗಳನ್ನು ಹಾಡುತ್ತಾ ಕುಣಿಯುತ್ತಾರೆ. ಈ ಮೆರವಣಿಗೆ ಗ್ರಾಮದ ಗಡಿ ತಲುಪುತ್ತಿದ್ದಂತೆ ಮದುವೆ ಆಗದ ಹುಡುಗಿಯರನ್ನು ಕಾಡಿಗೆ ಕಳುಹಿಸಿ ಉಳಿದವರು ಗ್ರಾಮಕ್ಕೆ ಹಿಂದಿರುಗುತ್ತಾರೆ. ಕಾಡಿಗೆ ತೆರಳಿದ ಹುಡುಗಿಯರು ದೇವರಿಗೆ ಪ್ರಿಯವಾದ ತಂಗಟಿ ಹೂವನ್ನು ಕೀಳುತ್ತಾರೆ. ಸಂಜೆವರೆಗೆ ಕಾಡಿನಲ್ಲಿ ಕಾಲ ಕಳೆಯುವ ಹುಡುಗಿಯರು ಕಳೆದ ವರ್ಷದ ನೋವು ನಲಿವುಗಳನ್ನು ಹಂಚಿಕೊಳ್ಳುತ್ತಾರೆ. ಆದ್ರೆ, ಕಾಡಿನಿಂದ ಗ್ರಾಮಕ್ಕೆ ಹಿಂದಿರುಗುವ ವೇಳೆ ಮಾತ್ರ ಅಕ್ಷರಶಃ ಕಣ್ಣೀರು ಹಾಕುತ್ತಾರೆ. ಆದ್ರೆ ಮುಂದಿನ ದೀಪಾವಳಿ ಒಳಗೆ ಮದುವೆ ಆಗುವ ಹುಡುಗಿಯರು ಮತ್ತೆ ಈ ತಂಗಟಿ ಹೂವು ಕೀಳುವ ಆಚರಣೆಯಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಗೆಳತಿಯರೊಡನೆ ಸೇರಿ ತಿಂಗಳ ದೀಪಾವಳಿ ಆಚರಿಸಲು ಆಗುವುದಿಲ್ಲ ಎಂಬ ನೋವಿನೊಂದಿಗೆ ಯುವತಿಯರು ಒಬ್ಬರಿಗೊಬ್ಬರು ತಬ್ಬಿಕೊಂಡು ಭಾವುಕರಾಗುತ್ತಾರೆ. ಇತ್ತ ಸಂಜೆಯ ವೇಳೆ ಗ್ರಾಮದ ಲಾಲ್ ಮಂದಿರದಲ್ಲಿ ಸೇರಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಗೋ ಪೂಜೆ ಮಾಡಿ ದೀಪ ಬೆಳಗಿ ಪ್ರಾರ್ಥಿಸುತ್ತಾರೆ. ಬಳಿಕ ಮನೆ ಮನೆಗೂ ತೆರಳಿ ದೀಪ ಬೆಳಗಿಸಿ ದೀಪಾವಳಿಯ ಶುಭಾಶಯ ಕೋರುತ್ತಾರೆ.

ಇದನ್ನೂ ವೀಕ್ಷಿಸಿ:  ಗುಮ್ಮಟನಗರಿಯಲ್ಲಿ ಮೇಳೈಸಿದ ದೀಪಾವಳಿ ಸಂಭ್ರಮ: ಇಲ್ಲಿ ನೆರವೇರುತ್ತೆ ಸಗಣಿಯಿಂದ ತಯಾರಾದ ಗೊಂಬೆಗಳಿಗೆ ಪೂಜೆ