ಗುಮ್ಮಟನಗರಿಯಲ್ಲಿ ಮೇಳೈಸಿದ ದೀಪಾವಳಿ ಸಂಭ್ರಮ: ಇಲ್ಲಿ ನೆರವೇರುತ್ತೆ ಸಗಣಿಯಿಂದ ತಯಾರಾದ ಗೊಂಬೆಗಳಿಗೆ ಪೂಜೆ

ದೀಪಾವಳಿ ಹಬ್ಬವನ್ನು ಎಲ್ಲಾ ಊರಿನಲ್ಲಿ ತಮ್ಮದೇ ಸಂಪ್ರಾದಾಯದಂತೆ ಆಚರಿಸುತ್ತಾರೆ. ಅದ್ರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ದೀಪಾವಳಿಯನ್ನ ಸಂಭ್ರಮಿಸುವ ಪರಿಯೇ ಬೇರೆ. ಮನೆಯಲ್ಲಿ ಹೆಣ್ಣು ಮಕ್ಕಳು ಸೆಗಣಿಯಲ್ಲಿ ಪಂಚ ಪಾಂಡವರ ಗೊಂಬೆಗಳ ನಿರ್ಮಿಸಿ ಮನೆ ಎದುರು ಪೂಜಿಸೋದು ದೀಪಾವಳಿಯ ಮತ್ತೊಂದು ವಿಶೇಷ.
 

First Published Nov 13, 2023, 11:00 AM IST | Last Updated Nov 13, 2023, 11:00 AM IST


ಒಂದೊಂದು ಊರಿನಲ್ಲಿ ವಿಭಿನ್ನವಾಗಿ, ಇಡೀ ದೇಶವೇ ಆಚರಿಸುವ ಹಬ್ಬವೆಂದರೆ ಅದು ದೀಪಾವಳಿ. ಅಂತೆಯೇ ಈ ದೀಪಾವಳಿ(Deepavali) ಹಬ್ಬವನ್ನು ಗೋವಿನ ಸೆಗಣಿಯಲ್ಲಿ (Cow Dung) ಗೊಂಬೆಗಳನ್ನು ಮಾಡಿ ಪೂಜೆ ಸಲ್ಲಿಸಿ ವಿಭಿನ್ನವಾಗಿ ಆಚರಿಸುವ ಪದ್ದತಿಯನ್ನು ನೀವು ಉತ್ತರಕರ್ನಾಟಕದ(North Karnataka) ಭಾಗದಲ್ಲಿ ನೋಡಬಹುದು. ದೀಪಾವಳಿ ದೀಪಗಳ ಹಬ್ಬ.. ಮನೆ ಮನೆಯಲ್ಲೂ ಮಣ್ಣಿನ ಹಣತೆಗಳನ್ನು ಬೆಳಗಿಸುತ್ತಾರೆ.. ಮತ್ತೆ ಕೆಲವರು ಪಟಾಕಿ ಹಚ್ಚಿ ಸಂಭ್ರಮಿಸುತ್ತಾರೆ... ಇನ್ನು ದೀಪಾವಳಿಯಲ್ಲಿ ಗೋ ಪೂಜೆಯೇ ವಿಶೇಷ.. ಆದ್ರೆ, ಉತ್ತರ ಕರ್ನಾಟಕ ಭಾಗದಲ್ಲಿ ದೀಪಾವಳಿ ಇನ್ನೂ ವಿಭಿನ್ನ.. ಇಲ್ಲಿ ಗೋವಿನ ಸಗಣಿಗಳಿಂದ ತಯಾರಿಸಿದ ಗೊಂಬೆಗಳಿಗೆ ಪೂಜಿಸುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಸಗಣಿ ಗೊಂಬೆಗಳ ಪೂಜೆಯ ಆಚರಣೆ ಹಿಂದಿನಿಂದಲೂ ಚಾಲ್ತಿಯಲ್ಲಿದೆ.. ನರಕ ಚತುರ್ದಶಿಯಿಂದ ಪಾಡ್ಯವರೆಗೂ 3 ದಿನಗಳ ಕಾಲ ಮನೆ ಎದುರು ಗೋವಿನ ಸಗಣಿಯಲ್ಲಿ ಪಂಚ ಪಾಂಡವರ ಆಕಾರದ ಗೊಂಬೆಗಳನ್ನು ರಚಿಸಿ ಅರಿಶಿಣ, ಕುಂಕುಮ, ಹಳದಿ ಹೂವುಗಳಿಂದ ಸಿಂಗರಿಸಿ ಪೂಜಿಸುತ್ತಾರೆ. ಕೊನೆಯ ದಿನ ಪಾಂಡವರು ವಧೆ ಮಾಡಿದ ದೈತ್ಯಾಸುರನನ್ನು ಸಗಣಿಯಲ್ಲಿ ತಯಾರಿಸಿ ಪೂಜಿಸುವ ಸಂಪ್ರಾದಯವಿದೆ. ವಿಭಿನ್ನ ಆಚರಣೆ ಹಿಂದೆಯೂ ಒಂದು ಧಾರ್ಮಿಕ ನಂಬಿಕೆ ಇದೆ. ಪಾಂಡವರು ವನವಾಸವಿದ್ದ ಸಂದರ್ಭದಲ್ಲಿ ದೈತ್ಯಾಸುರ ಎನ್ನುವ ರಾಕ್ಷಸನ ಕಾಟ ಹೆಚ್ಚಾಗಿತ್ತಂತೆ. ಪಾಂಡವರು ದೈತ್ಯಾಸುರನ ವಧೆ ಮಾಡಿದ ನೆನಪಲ್ಲಿ ಈ ಆಚರಣೆ ಮಾಡಲಾಗುತ್ತೆ. ಇನ್ನೊಂದು ನಂಬಿಕೆಯಂತೆ ಕೈಲಾಸದಲ್ಲಿರುವ ನಂದಾ, ಭದ್ರಾ, ಸುಗುಣಾ, ಶಶಿಲಾ, ಸುರಭಿ ಎನ್ನುವ ಗೋವುಗಳು ಶಿವನ ಬಳಿ ಭೂಮಿಯಲ್ಲಿ ತಮ್ಮ ಪೂಜೆ ಮಾಡಬೇಕೆಂದು ವರ ಕೇಳಿದ್ದವಂತೆ. ಹೀಗಾಗಿ ಶಿವ 5 ಗೋವುಗಳಿಗೆ ದೀಪಾವಳಿಯಂದು  ಪೂಜೆ ಮಾಡಲಾಗುತ್ತೆಂದು  ವರ ನೀಡಿದ್ರಂತೆ. ಅದರ ಪ್ರತೀಕವಾಗಿ ಪಂಚಪಾಂಡವರ ರೂಪದಲ್ಲಿ ಗೋ ಸಗಣಿ ಗೊಂಬೆಗೆ ಪೂಜೆ ಮಾಡಲಾಗುತ್ತೆ ಅನ್ನೋ ನಂಬಿಕೆ ಇದೆ. ದೀಪಾವಳಿಯಂದು 3 ಅಥವಾ 5 ದಿನಗಳ ಕಾಲ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದ ಎಲ್ಲ ಮನೆಗಳಲ್ಲೂ ಈ ಸೆಗಣಿಯಲ್ಲಿ ಮಾಡಲಾದ ಪಾಂಡವರ ಪೂಜೆ ನಡೆಯುತ್ತೆ. ಇನ್ನು ಹಬ್ಬದ ಕಡೆಯ ದಿನ ಪಾಂಡವರ ಸೆಗಣಿಯ ಆಕಾರಗಳನ್ನ ಮನೆ ಮಾಳಿಗೆ ಮೇಲೆ ಇಡೋದು ಇನ್ನೊಂದು ವಿಶೇಷವಾಗಿದೆ. 

ಇದನ್ನೂ ವೀಕ್ಷಿಸಿ:  ವಿಶೇಷವಾಗಿರುತ್ತೆ ಲಂಬಾಣಿ ತಾಂಡದ ಬೆಳಕಿನ ಹಬ್ಬ! ದೀಪಾವಳಿಯಲ್ಲಿ ಬಂಜಾರ ಯುವತಿಯರದ್ದೇ ಮೇಲುಗೈ!

Video Top Stories