ಟವರ್‌ ಎಕ್ಸ್‌ಚೇಂಜ್‌  ಮಹಾಮೋಸ.. ಉತ್ತರ ಕನ್ನಡದ ಜನರಿಗೆ ದುಡ್ಡು ವಾಪಸ್ ಬರುತ್ತಾ?

* ಮತ್ತೊಂದು ಮಹಾವಂಚನೆ ಪ್ರಕರಣ
* ಟವರ್ ಎಕ್ಸ್‌ಚೇಂಜ್ ಅನ್ನೋ ಟ್ರೇಡಿಂಗ್ ಆ್ಯಪ್ ನಿಂದ ವಂಚನೆ
* ಕೋಟ್ಯಂತರ ರೂ ಕಳೆದುಕೊಂಡ ಉತ್ತರ ಕನ್ನಡದ ಜನ
* ಮೊದಲು ಸಾಕಷ್ಟು ಲಾಭಾಂಶ ನೀಡಿ ಈಗ ಎಸ್ಕೇಪ್

First Published Sep 23, 2021, 6:49 PM IST | Last Updated Sep 23, 2021, 6:49 PM IST

ಕಾರವಾರ(ಸೆ. 23)  ಟವರ್ ಎಕ್ಸ್‌ಚೇಂಜ್ ಅನ್ನೋ ಟ್ರೇಡಿಂಗ್ ಆ್ಯಪ್ ಮೂಲಕ ಜನರಿಗೆ ಕೋಟಿಗಟ್ಟಲೆ ಹಣ ಪಂಗನಾಮ ಹಾಕಲಾಗಿದೆ. ಕ್ರಿಪ್ಟೋ ಕರೆನ್ಸಿಗಳಾದ ಬಿಟ್ ಕಾಯಿನ್, ಎಕ್ಸ್ ಆರ್ ಪಿ, ಇಥಿರಿಯಂ, ಡಾಗಿ ಕಾಯಿನ್ ಸೇರಿದಂತೆ ವಿವಿಧ ಕರೆನ್ಸಿಗಳ ಖರೀದಿಗೆ ಟಾವರ್ ಎಕ್ಚೇಂಜ್ ಆ್ಯಪ್ ಬಳಕೆ ಆಗುತ್ತಿತ್ತು. ಗೂಗಲ್ ಪ್ಲೇ ಅಥವಾ ಬೇರೆಡೆ ಸಿಗದ ಟವರ್ ಎಕ್ಸ್‌ಚೇಂಜ್ ಆ್ಯಪ್, ಕೇವಲ ವಾಟ್ಸಾಪ್ ಗ್ರೂಪ್ ಗಳ ಮೂಲಕ ಮಾತ್ರ ಹರಿದಾಡ್ತಿತ್ತು. ಪ್ರತಿ ಗ್ರೂಪ್ ನಲ್ಲೂ 250ರಷ್ಟು ಸದಸ್ಯರಾದ ಬಳಿಕ ಟವರ್ ಎಕ್ಸ್‌ಚೇಂಜ್ ಆ್ಯಪ್ ಮೂಲಕ ಕೋಡ್ ಕಳಿಸಲಾಗ್ತಿತ್ತು.

ಆ್ಯಪ್‌ನಲ್ಲಿ  ಈ ಕೋಡ್ ಬಳಸಿಕೊಂಡು ಹಣ ಹೂಡಿಕೆ ಮಾಡುತ್ತಿದ್ದ ಜನರು, ಕ್ರಿಪ್ಟೋ ಕರೆನ್ಸಿಯ ಏರಿಳತಕ್ಕೆ ಸಂಬಂಧಿಸಿ ಮತ್ತು ಕ್ರಿಪ್ಟೊ  ಮಾರುಕಟ್ಟೆ ಆಧರಿಸಿ ಟ್ರೇಡಿಂಗ್ ಮಾಡುತ್ತಿದ್ದರು. ಇಲ್ಲಿ ಹಣ ಹೂಡಿಕೆಯನ್ನು ಲಾಭಾಂಶದೊಂದಿಗೆ ವಾಪಸ್ ಪಡೆಯಲು ಅವಕಾಶ ನೀಡಲಾಗುತ್ತಿತ್ತು. ಆಟ ಆಡುವವರು ಕನಿಷ್ಠ 5 ಸಾವಿರ ರೂ. ಹೂಡಿಕೆ ಮಾಡಬೇಕಾಗಿದ್ದು, ಹಣ ಹಿಂಪಡೆಯಲು 180 ರೂ. ಸರ್ವಿಸ್ ಚಾರ್ಜ್ ಮಾಡಲಾಗುತ್ತಿತ್ತು. ಹೊಸ ಬಳಕೆದಾರರಿಗೆ, ಹೊಸ ಹೂಡಿಕೆದಾರರಿಗೆ ಹೆಚ್ಚುವರಿ ಲಾಭಾಂಶ ಹಂಚಿಕೆ ಮಾಡುವುದಾಗಿಯೂ ಟವರ್ ಎಕ್ಸಚೇಂಜ್ ಆ್ಯಪ್ ನಲ್ಲಿ ತಿಳಿಸಲಾಗ್ತಿತ್ತು. ಯಾವುದಕ್ಕೆ ಹೂಡಿಕೆ ಮಾಡಬೇಕು, ಯಾವಾಗ ಹೂಡಿಕೆ ಮಾಡಬೇಕೆಂಬ ವಿಚಾರ ವಾಟ್ಸಪ್ ಮೂಲಕವೇ ಮೆಸೇಜ್ ಬರುತ್ತಿತ್ತು. ಹೀಗಾಗಿ ಜಿಲ್ಲೆಯ ಸಾಕಷ್ಟು ಜನರು ಈ ಟ್ರೇಡಿಂಗ್ ಆ್ಯಪ್‌ನಲ್ಲಿ ಹಣ ತೊಡಗಿಸಿಕೊಂಡಿದ್ದರು.

ಮಹಾದೋಖಾ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಆದರೆ, ಇತ್ತೀಚೆಗೆ ಇದೀಗ ಹಲವರ ಖಾತೆಯಲ್ಲಿ ಹೂಡಿಕೆಯ ಹಣ ನಾಪತ್ತೆಯಾಗಿದ್ದು, ಈ ಘಟನೆಯ ಬಳಿಕವೇ ಬೃಹತ್ ಸ್ಕ್ಯಾಮ್ ಬೆಳಕಿಗೆ ಬಂದಿದೆ. ಹಣ ವಾಪಸ್ ತೆಗೆದವರೂ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಲು ಸಾಧ್ಯವಾಗದೇ ಪೇಚಾಟ ನಡೆಸಿದ್ದು, ಕೊನೆಗೇ, ವಾಟ್ಸಾಪ್ ಗ್ರೂಪ್ ಗಳಲ್ಲಿಯೂ ಯಾವುದೇ ಉತ್ತರ ಬರುತ್ತಿಲ್ಲ ಎಂದು ಹೂಡಿಕೆದಾರರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಪ್ರಕರಣ ಸಂಬಂಧಿಸಿ ಸದ್ಯ ಪೊಲೀಸರಿಗೆ ಶಿರಸಿ ಹಾಗೂ ಮುಂಡಗೋಡ ಮೂಲದ 250 ಹಾಗೂ 200 ಸದಸ್ಯರಿರುವ ಎರಡು ವಾಟ್ಸಪ್ ಗ್ರೂಪ್ ಮಾಹಿತಿ ದೊರಕಿದ್ದು, ಈ ಎರಡು ಗ್ರೂಪ್‌ಗಳಲ್ಲಿ ಅಂದಾಜು ಒಂದೂವರೆ ಕೋಟಿಯಿಂದ 2 ಕೋಟಿ ರೂ. ಕಳೆದುಕೊಂಡಿರುವ ಮಾಹಿತಿ ಬಹಿರಂಗವಾಗಿದೆ‌. ಈ ಕಾರಣದಿಂದ ಉತ್ತರಕನ್ನಡ ಜಿಲ್ಲೆ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಈ ಬಗ್ಗೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಈಸ್ಟ್ ದೆಹಲಿ ಸುಭಾಷ್ ನಗರದಲ್ಲಿ ರಿಜಿಸ್ಟರ್ ಆಗಿರುವ ಈ ಟವರ್ ಎಕ್ಸ್‌ಚೇಂಜ್ ಕಂಪನಿ, ವೆಬ್‌ಸೈಟ್ ನಿರ್ಮಾಣ ಹಾಗೂ ಸರ್ವಿಸ್ ನೀಡುವ ಕೆಲಸವನ್ನು ಮಾಡುತ್ತಿತ್ತು.  ಕಳೆದ ಎಪ್ರಿಲ್ ತಿಂಗಳಲ್ಲಿ ಆ್ಯಪ್ ಪ್ರಾರಂಭಿಸಿದ್ದು, ಹಣ ಡಿಪಾಸಿಟ್ ಮಾಡಿದವರಿಗೆ ಶೇ‌. 75 ಲಾಭ ನೀಡ್ತಿತ್ತು. ಅಲ್ಲದೇ, 7 ದಿನದ ಬಳಿಕ ಡೆಪಾಸಿಟ್ ಹಣ ವಾಪಾಸ್ ಪಡೆಯಲು ಹಾಗೂ ಇತರ ವಸ್ತು ಖರೀದಿಸಲು ಅವಕಾಶ ನೀಡ್ತಿತ್ತು. ಆದರೆ, 14-09-2021ರಂದು ಸ್ಕ್ಯಾಮ್ ಆಗಿದ್ದು, ಇದರ ಬಳಿಕವೇ ನೈಜ ವಿಚಾರ ಹೊರಬಿದ್ದಿದೆ.‌ ಇನ್ನು ಧಾರವಾಡ, ಹಾವೇರಿ ಸೇರಿ ರಾಜ್ಯದ ವಿವಿಧೆಡೆ 50-60 ಗ್ರೂಪ್ ಇರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದು, ರಾಜ್ಯ ಮಟ್ಟದಲ್ಲೇ ದೊಡ್ಡ ಮಟ್ಟದ ಸ್ಕ್ಯಾಮ್ ನಡೆದಿರುವುದಾಗಿ ಮಾಹಿತಿ ನೀಡಿದ್ದಾರೆ. ಈ ಆ್ಯಪ್ ಎಲ್ಲೆಲ್ಲಿ ಸರ್ವಿಸ್ ನೀಡುತ್ತಿದೆ ಹಾಗೂ ಅವರ ಬ್ಯಾಂಕ್ ಅಕೌಂಟ್ ಬಗ್ಗೆ ಪೂರ್ಣ ಮಾಹಿತಿ ಸಂಗ್ರಹಿಸುತ್ತಿರುವ ಪೊಲೀಸರು, ಜನರು ಮುಂದೆ ಬಂದು ಮಾಹಿತಿ ನೀಡಿದಲ್ಲಿ ಮಾತ್ರ  ಎಷ್ಟು ಜನರು ಹಣ ಕಳೆದುಕೊಂಡಿದ್ದಾರೆಂದು ಎಂದು ಮಾಹಿತಿ ಸ್ಪಷ್ಟ ಮಾಹಿತಿ ಪಡೆಯಲು ಸಾಧ್ಯ ಎಂದಿದ್ದಾರೆ. 

ಒಟ್ಟಿನಲ್ಲಿ ಕೋಟಿಗಟ್ಟಲೆ ಸ್ಕ್ಯಾಮ್ ಮಾಡಿ ಜನರಿಗೆ ಪಂಗನಾಮ ಹಾಕಿರುವ ಟವರ್ ಎಕ್ಚ್ಸೇಂಜ್ ಆ್ಯಪ್ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ದೊಡ್ಡ ಬೇಟೆಯಾಡಲು ತಯಾರಿ ನಡೆಸುತ್ತಿದ್ದಾರೆ. ಆದರೆ, ಹಣ ಕಳೆದುಕೊಂಡು ಪೊಲೀಸರ ಮೊರೆ ಹೋದವರು ಮಾತ್ರ ಕೊನೆ ಪಕ್ಷ ತಮ್ಮ ಹಣ‌‌ ಮತ್ತೆ ಸಿಗಬಹುದಾ ಎಂದು ಕಾಯುತ್ತಿದ್ದಾರೆ.