ಸಿದ್ದಾಪುರ [ಅ.07]:  ಗ್ರಾಮ ಪಂಚಾಯತ್‌ ನೌಕರರ ಶ್ರೇಯೋಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ಪರಮೇಶ್ವರ ಜಿ. ಹಸ್ಲರ ನೇತೃತ್ವದಲ್ಲಿ ಗ್ರಾಮ ಪಂಚಾಯತ್‌ ನೌಕರರು ಬಿಪಿಎಲ್‌ ಪಡಿತರ ಚೀಟಿ ರದ್ದುಗೊಳಿಸದಂತೆ ತಹಸೀಲ್ದಾರ್‌ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ನೀಡಿದರು.

ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಗುಮಾಸ್ತ, ಕರವಸೂಲಿಗಾರ, ಕ್ಲರ್ಕ, ಡಾಟಾ ಎಂಟರಿ ಆಪರೇಟರ್‌, ಸ್ವಚ್ಛತಾಗಾರ, ಜವಾನ ಹಾಗೂ ನಿರಗಂಟಿ ಪಡೆದಿರುವ ಬಿಪಿಎಲ್‌ ಕಾರ್ಡ್‌ನ್ನು ರದ್ದು ಪಡಿಸುವಂತೆ ಹಾಗೂ ಹಿಂದಿರುಗಿಸುವಂತೆ ಸರ್ಕಾರದ ನಿರ್ದೇಶನದಲ್ಲಿ ಸೂಚಿಸಿದಂತೆ ಗ್ರಾಮ ಪಂಚಾಯಿತಿಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಾವುಗಳು ಕನಿಷ್ಠ ವೇತನ ಪಡೆಯುತ್ತಿದ್ದೇವೆ. ಪಂಚಾಯಿತಿಗೆ ಬರುವ ಎಲ್ಲ ಯೋಜನೆಗಳನ್ನು ಅನುಷ್ಠಾನ ಮಾಡುವ ಕಾರ್ಯ ಮಾಡುತ್ತಿದ್ದು ನಮಗೆ ಪ್ರತಿ ತಿಂಗಳು ವೇತನ ಸಿಗುವುದಿಲ್ಲ. ಮೊದಲಿನಂತೆ ತ್ರೈಮಾಸಿಕ ಕಂತು ಬಿಡುಗಡೆಯಾಗುವುದಿಲ್ಲ. ಹೀಗಿರುವಾಗ ಕನಿಷ್ಠ ವೇತನ ಕೂಡ ಪಡೆದು ಜೀವನ ನಿರ್ವಹಣೆ ಮಾಡುತ್ತಿರುವ ನಮ್ಮ ಬಿಪಿಎಲ್‌ ಪಡಿತರ ಚೀಟಿ ರದ್ದುಗೊಳಿಸಿದರೆ ಜೀವನ ನಡೆಸುವುದು ಕಷ್ಟವಾಗುತ್ತದೆ. ಯಾವುದೇ ಕಾರಣಕ್ಕೂ ಪಡಿತರ ಚೀಟಿ ರದ್ದುಗೊಳಿಸಬಾರದೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವೇಳೆ ಗ್ರಾಪಂ ನೌಕರರ ಶ್ರೇಯೋಭಿವೃದ್ಧಿ ಸಂಘದ ಉತ್ತರ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಗಂಗಾಧರ ನಾಯ್ಕ, ಜಿಲ್ಲಾ ಉಪಾಧ್ಯಕ್ಷರಾದ ನಾರಾಯಣ ನಾಯ್ಕ, ತಾಲೂಕು ಸಮಿತಿ ಉಪಾಧ್ಯಕ್ಷ ವಸಂತ ನಾಯ್ಕ, ಕಾರ್ಯದರ್ಶಿ ರಮೇಶ ನಾಯ್ಕ, ಕೋಶಾಧ್ಯಕ್ಷ ತೋಟಪ್ಪ ಮಡಿವಾಳ, ಸಂಘಟನಾ ಕಾರ್ಯದರ್ಶಿ ಕೇಶವ ನಾಯ್ಕ ಹಾಗೂ ಸಹ ಕಾರ್ಯದರ್ಶಿ ಸಂತೋಷ ನಾಯ್ಕ, ವಿವಿಧ ಪದಾಧಿಕಾರಿಗಳು, ಸಿದ್ದಾಪುರ ತಾಲೂಕಿನ ಎಲ್ಲ ಗ್ರಾಪಂ ಸಿಬ್ಬಂದಿ ಹಾಜರಿದ್ದರು.