ಕಾರವಾರ/ಧಾರವಾಡ, [ನ.03): ರೈಲ್ವೆ ಸಚಿವ ಸುರೇಶ್​ ಅಂಗಡಿ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್​ ಜೋಷಿ ಅಂಬೇವಾಡಿ-ಅಳ್ನಾವರ ಮಾರ್ಗದ ಮೂಲಕ ಧಾರವಾಡಕ್ಕೆ ಹೊಸ ಪ್ಯಾಸೆಂಜರ್​ ರೈಲು ಸಂಚಾರಕ್ಕೆ ಭಾನುವಾರ ಹಸಿರು ನಿಶಾನೆ ತೋರಿದರು. 

ಈ ಮೂಲಕ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಾಗರಿಕರ ಎರಡು ದಶಕಗಳ ಕನಸ ನನಸಾಗಿದೆ. ದಾಂಡೇಲಿ-ಧಾರವಾಡ ಪ್ಯಾಸೆಂಜರ್​ ರೈಲು ಪ್ರತಿನಿತ್ಯ ಸಂಚರಿಸಲಿದ್ದು, ಈ ಭಾಗದ ಜನರಿಗೆ ಅನುಕೂಲವಾಗಲಿದೆ ಅಷ್ಟೇ ಅಲ್ಲದೇ ಪ್ರವಾಸಿಗರ ನೆಚ್ಚಿನ ತಾಣ ದಾಂಡೇಲಿಗೆ ತೆರಳುವವರಿಗೂ ಸಹ ಅನುಕೂಲವಾಗಿದೆ.

ದಾಂಡೇಲಿಯ ರೈಲ್ವೆ ನಿಲ್ದಾಣದಲ್ಲಿ ನೈರುತ್ಯ ರೈಲ್ವೆ ಪ್ಯಾಸೆಂಜರ್ ರೈಲು ಉದ್ಘಾಟನೆಯಲ್ಲಿ ಕಾರ್ಯಕ್ರಮದಲ್ಲಿ ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕಾ, ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಚಿವ ಆರ್.ವಿ ದೇಶಪಾಂಡೆ ಸೇರಿದಂತೆ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

ವೇಳಾಪಟ್ಟಿ:
ಧಾರವಾಡ-ದಾಂಡೇಲಿ ರೈಲು ಸೋಮವಾರದಿಂದ ಆರಂಭವಾಗಲಿದೆ. ಈ ಮೂಲಕ ಪ್ರತಿದಿನ 11.30ಕ್ಕೆ ಧಾರವಾಡದಿಂದ ಹೊರಟು ಮಧ್ಯಾಹ್ನ 1.00 ಗಂಟೆಗೆ ದಾಂಡೇಲಿ ತಲುಪಲಿದೆ. ಬಳಿಕ ಮಧ್ಯಾಹ್ನ 3 ಗಂಟೆಗೆ ದಾಂಡೇಲಿಯಿಂದ ಮರಳಿ ಮಧ್ಯಾಹ್ನ 4.40ಕ್ಕೆ ಧಾರವಾಡ ತಲುಪಲಿದೆ. ಅಳ್ನಾವರ, ಕುಂಬಾರಗಣವಿ, ಮುಗದ, ಕ್ಯಾರಕೊಪ್ಪ ನಿಲ್ದಾಣದಲ್ಲಿ ರೈಲು ನಿಲುಗಡೆ ಆಗಲಿದೆ.