ದಾಂಡೇಲಿ [ನ.05]:  ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಆದರೆ, ಜಿಲ್ಲೆಯ ಜನರ ಬಹುದಿನಗಳ ಕನಸು ಈಡೇರಿಸಲು ಸ್ಥಳೀಯ ಕೆಲ ಪರಿಸರವಾದಿಗಳ ಆಕ್ಷೇಪಗಳೇ ಕಾರಣವಾಗಿದ್ದು ಅವರು ನ್ಯಾಯಾಲಯದ ಹಸಿರು ಪೀಠಕ್ಕೆ ದೂರು ಕೊಂಡೊಯ್ದಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹುಬ್ಬಳ್ಳಿ -ಅಂಕೋಲಾ ರೈಲು ಸಂಚಾರ ಮಾರ್ಗ ಆರಂಭಿಸಲು ಸಿದ್ಧವಿದೆ. ಇದು ನಮ್ಮಿಂದಾಗುತ್ತಿರುವ ವಿಳಂಬವಲ್ಲ ಎಂದು ಸ್ವಷ್ಟಪಡಿಸಿದರು.

ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈಲ್ವೆ ಇಲಾಖೆಯ ಸುಧಾರಣೆಗಾಗಿ ಅನೇಕ ರಚನಾತ್ಮಕ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಕೈಗೊಳ್ಳುವ ಗುರಿಯೊಂದಿಗೆ ಮುಂದಿನ ಹತ್ತು ವರ್ಷಗಳಲ್ಲಿ . 50 ಲಕ್ಷ ಕೋಟಿ ರೈಲ್ವೆ ಇಲಾಖೆಯ ಅಭಿವೃದ್ಧಿಗಾಗಿ ಖರ್ಚು ಮಾಡುತ್ತಿದೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈಗಾಗಲೇ ದೇಶದಲ್ಲಿ ಆರು ಸಾವಿರ ರೈಲ್ವೆ ನಿಲ್ದಾಣಗಳಿಗೆ ವೈಫೈ ವ್ಯವಸ್ಥೆ ಕಲ್ಪಿಸಲಾಗಿದೆ. ಬರಲಿರುವ ದಿನಗಳಲ್ಲಿ ಎಲ್ಲ ರೈಲು ನಿಲ್ದಾಣಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು ಎಂದ ಅವರು, ಸಾಮಾನ್ಯ ವ್ಯಕ್ತಿಗೂ ರೈಲು ಸಂಚಾರ ವ್ಯವಸ್ಥೆ ಅನುಕೂಲವಾಗುವಂತೆ ಮಾಡಬೇಕೆಂಬುದು ಮೋದಿಯವರ ಆಶಯವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ರೈಲು ಟಿಕೆಟ್‌ ದರ ಕಡಿಮೆಗೊಳಿಸಲಾಗಿದೆ ಎಂದು ಹೇಳಿದರು.

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗದ ಬಗ್ಗೆ ಮುಖ್ಯಮಂತ್ರಿ ಜತೆ ಸ್ಥಳೀಯ ಶಾಸಕ ಆರ್‌.ವಿ. ದೇಶಪಾಂಡೆ, ಸಂಸದ ಅನಂತಕುಮಾರ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತಾಗಬೇಕು. ಈ ಕುರಿತು ನಾನು ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಅಂಗಡಿ ಭರವಸೆ ನೀಡಿದರು.