ಕಾರವಾರ(ಅ.9): ಇಲ್ಲಿನ ರವೀಂದ್ರನಾಥ ಟ್ಯಾಗೋರ ಕಡಲ ತೀರದಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ಬಂದ್‌ ಆಗಿದೆ. ಇದರಿಂದಾಗಿ ಪ್ರವಾಸಿಗರಿಗೆ, ಕಾರ್ಮಿಕರಿಗೆ, ವಾಯುವಿಹಾರಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ. 

ನಗರಸಭೆ ಅನುದಾನದಲ್ಲಿ ಈ ಘಟಕ ನಿರ್ಮಾಣವಾಗಿದ್ದು, ತಿಂಗಳಿನಿಂದ ಬಂದ್‌ ಆಗಿದೆ. ಸಾರ್ವಜನಿಕರಿಗೆ ಉಚಿತವಾಗಿ ನೀರು ಸಿಗುತ್ತಿತ್ತು. ಈ ಘಟಕ ಕಾರ್ಯನಿರ್ವಹಿಸದೇ ಹಣ ಕೊಟ್ಟು ನೀರು ಕೊಂಡುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ನಗರದಲ್ಲಿ ಇರುವ ಏಕೈಕ ಶುದ್ಧ ಕುಡಿಯುವ ನೀರಿನ ಘಟಕವಾಗಿದ್ದು, ನಿರ್ವಹಣೆ ಇಲ್ಲದೇ ಸಾರ್ವಜನಿಕ ಉಪಯೋಗಕ್ಕೆ ಬರದಂತಾಗಿದೆ. ಘಟಕದ ಒಳಗೆ ಇರುವ ಯಂತ್ರೋಪಕರಣಗಳು ಹಾಗೆಯೇ ಇದ್ದು, ಮೇಲ್ನೋಟಕ್ಕೆ ಹಾಳಾದಂತಿಲ್ಲ. ಆದರೆ, ನೀರು ಬಿಡಲು ಇದ್ದ ಎರಡು ನಲ್ಲಿಗಳು ತುಂಡಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ನೂರಾರು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಜತೆಗೆ ಮೀನುಗಾರಿಕೆಗೆ ಹೊರ ರಾಜ್ಯದಿಂದ ಕಾರ್ಮಿಕರು ಸಾವಿರಾರು ಜನರು ಬರುತ್ತಾರೆ. ಇಂತಹವರಿಗೆಲ್ಲ ಶುದ್ಧ ಕುಡಿಯುವ ನೀರಿನ ಘಟಕ ಉಪಯೋಗವಿತ್ತು. ಪ್ರವಾಸಿಗರಿಗೆ, ವಾಯುವಿಹಾರಿಗಳಿಗೆ ಕೂಡಾ ಹಣಕೊಟ್ಟು ನೀರಿನ ಬಾಟಲಿ ಕೊಂಡುಕೊಳ್ಳುವ ಅನಿವಾರ್ಯತೆ ಎದುರಾಗಿದೆ.

ಕ್ಯಾನ್‌ ದುಬಾರಿ:

ನಗರದಲ್ಲಿ ವಿವಿಧ ಕಂಪನಿಗಳು 20 ಲೀಟರ್‌ ಕುಡಿಯುವ ನೀರಿನ ಕ್ಯಾನ್‌ ತಯಾರಿಸುತ್ತಾರೆ. ಆದರೆ ಇದು ದುಬಾರಿ. ಒಂದು ಕ್ಯಾನ್‌ಗೆ 70ರಿಂದ  80 ದರವಿದೆ. ಬೇಸಿಗೆ ಆರಂಭವಾದರೆ ವಾರಕ್ಕೆ ಒಂದು ಕ್ಯಾನ್‌ ಪ್ರತಿ ಕುಟುಂಬಕ್ಕೆ ಬೇಕಾಗುತ್ತದೆ. ಸಾಮಾನ್ಯ ಕುಟುಂಬಗಳಿಗೆ ನೀರಿನ ವೆಚ್ಚವೇ ಹೆಚ್ಚಾಗುತ್ತದೆ. ಮಲಿನ ನೀರು ಕುಡಿದರೆ ಅನಾರೋಗ್ಯದ ಸಮಸ್ಯೆ ಕಾಡುತ್ತದೆ. ಕ್ಯಾನ್‌ ಖರೀದಿಸಿದರೆ ಆರ್ಥಿಕವಾಗಿ ಹೊರೆ ಆಗುತ್ತದೆ.

ಶಿರಸಿಯಲ್ಲಿ ಬಸ್‌ ನಿಲ್ದಾಣದ ಸಮೀಪ ಹಾಗೂ ಎಪಿಎಂಸಿ ಬಳಿ ಶುದ್ಧ ಕುಡಿಯುವ ನೀರಿನ ಘಟಕವಿದ್ದು,  5 ರೂ. ಪಾವತಿಸಿದರೆ 20 ಲೀಟರ್ ನೀರು ಸಿಗುತ್ತದೆ. ಆದರೆ ಕಾರವಾರದಲ್ಲಿ ಈ ರೀತಿ ಯೋಜನೆಯೇ ಇಲ್ಲ. ಇದರಿಂದಾಗಿ ಮತ್ತಷ್ಟು ಸಮಸ್ಯೆ ಆಗುತ್ತಿದೆ. ಬೇಸಿಗೆ ಆರಂಭವಾದರೆ ನಗರದ ಬಹುತೇಕ ಮನೆಗಳ ಬಾವಿಗಳಲ್ಲಿ ನೀರು  ಬತ್ತಿ ಹೋಗುತ್ತದೆ. ನಗರಸಭೆ ನೀರಿನ ಲಭ್ಯತೆಯ ಮೇರೆಗೆ ಮನೆ ಮನೆಗೆ ನೀರು ಪೂರೈಕೆ ಮಾಡುತ್ತದೆ. ಬೇಸಿಗೆಯಲ್ಲಿ ನೀರು ಪೂರೈಕೆಗೆಯೇ ದೊಡ್ಡ ಸವಾಲಾಗಿದೆ. ಕುಡಿಯಲು ನೀರಿನ ಸಮಸ್ಯೆ ಆಗಿ ಕ್ಯಾನ್‌ಗಳನ್ನು ತರಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ಗ್ರಾಮೀಣದಲ್ಲೂ ಸಮಸ್ಯೆ:

ಪ್ರತಿ ಗ್ರಾಪಂಗೆ ಒಂದು ಶುದ್ಧ ಕುಡಿಯುವ ನೀರಿನ ಘಟವನ್ನು ಜಿಪಂ ಅನುದಾನದಲ್ಲಿ ನಿರ್ಮಿಸಲಾಗಿದೆ. ಆದರೆ ಬಹುತೇಕ ಕಡೆ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ನಿರ್ಮಿಸಲಾದ ಕುಡಿಯುವ ನೀರಿನ ಘಟಕಗಳು ಪ್ರಯೋಜನಕ್ಕೆ ಬಾರದಂತಾಗಿದೆ. ಗ್ರಾಮೀಣ ಭಾಗದಲ್ಲಿ ಇರುವ ಶುದ್ಧ ನೀರಿನ ಘಟಕ ದುರಸ್ತಿ ಜತೆಗೆ, ನಗರದಲ್ಲಿ 24*7 ಕಾರ್ಯನಿರ್ವಹಿಸುವ ಘಟಕವೂ ಬೇಕಾಗಿದೆ. ಅದಿಲ್ಲವಾದಲ್ಲಿ ಮುಂಬರುವ ಬೇಸಿಗೆಯಲ್ಲಿ ಗ್ರಾಮೀಣ ಹಾಗೂ ನಗರದ ಭಾಗದ ಜನರು ಶುದ್ಧ ಕುಡಿಯುವ ನೀರಿಗೆ ಜನರು ಪರಿತಪಿಸುವಂತಾಗಿದೆ.

ಈ ಬಗ್ಗೆ ನಾತನಾಡಿದ ಸ್ಥಳೀಯ ನಿವಾಸಿ ವಾಸುದೇವ ಗೌಡ ಅವರು, ಟ್ಯಾಗೋರ ಕಡಲ ತೀರದಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಪ್ರತಿನಿತ್ಯ ನೂರಾರು ಜನರಿಗೆ ನೀರು ಒದಗಿಸುತ್ತಿತ್ತು. ಆದರೆ ಈ ಘಟಕ ಕಾರ್ಯನಿರ್ವಹಿಸದೇ ಇರುವುದರಿಂದ ಜನರಿಗೆ ತೊಂದರೆ ಆಗಿದೆ. ನಗರಸಭೆ ಈ ಘಟಕ ದುರಸ್ತಿ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.