ಶಿರಸಿ [ಅ.07]:  ಬನವಾಸಿ ವಲಯವನ್ನು ಆನವಟ್ಟಿ ಹೋಬಳಿಗೆ ಸೇರಿಸುವ ಪ್ರಸ್ತಾಪವನ್ನು ವಿರೋಧಿಸಿ ಬನವಾಸಿ ತಾಲೂಕು ಹೋರಾಟ ಸಮಿತಿ ಅ. 10ರಂದು ಆಯೋಜಿಸಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಹೋರಾಟ ಸಮಿತಿ ನೇತೃತ್ವದದಲ್ಲಿ ಗ್ರಾಮಾಂತರ ಭಾಗದ ಪಂಚಾಯಿತಿಗಳಲ್ಲಿ ಭಾನುವಾರ ಪೂರ್ವಭಾವಿ ಸಭೆ ನಡೆಯಿತು.

ತಾಲೂಕಿನ ಪೂರ್ವ ಭಾಗದ ಅಂಡಗಿ, ಬಂಕನಾಳ, ಬಿಸಲಕೊಪ್ಪ, ದಾಸನಕೊಪ್ಪ, ಕೊರ್ಲಕಟ್ಟಾಹಾಗೂ ಸುಗಾವಿ ಗ್ರಾಮಗಳಲ್ಲಿ ನಡೆಸಿದ ಸಭೆಯಲ್ಲಿ ಉತ್ತಮ ಸ್ಪಂದನ ವ್ಯಕ್ತಗೊಂಡಿದೆ. ಹಾಗೂ ಹೋರಾಟದ ಕಿಚ್ಚು ಬನವಾಸಿ ವಲಯ ವ್ಯಾಪ್ತಿಯಲ್ಲಿ ಜೋರಾಗಿದ್ದು ಜನ ಹೆಚ್ಚೆಚ್ಚು ಸೇರುವ ನಿರೀಕ್ಷೆ ಇದೆ. ಅಂಡಗಿ ಗ್ರಾಪಂನಲ್ಲಿ ನಡೆದ ತುಂಬಿದ ಸಭೆಯಲ್ಲಿ ಮಾತನಾಡಿದ ಹೋರಾಟ ಸಮಿತಿ ಗೌರವಾಧ್ಯಕ್ಷ ಸಿ.ಎಫ್‌. ನಾಯ್ಕ, ಬನವಾಸಿ ಉಳಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಸೇರಬೇಕು ಹಾಗೂ ಯಾವ ಕಾರಣಕ್ಕೂ ಬನವಾಸಿ ನಮ್ಮದೇ ಎಂದರು.

ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ ಮಾತನಾಡಿ, ಬನವಾಸಿ ಉಳಿವಿಗಾಗಿ ಎಂತಹ ಹೋರಾಟಕ್ಕೂ ನಾವೆಲ್ಲರೂ ಸನ್ನದ್ಧರಾಗಬೇಕು. ಇಲ್ಲದೇ ಹೋದರೆ ತ್ರಿಶಂಕು ಸ್ಥಿತಿ ನಮ್ಮದು ಆದೀತು ಎಂದು ಜನರಲ್ಲಿ ಜಾಗೃತಿ ಮೂಡಿಸಿದರು. ಅಂಡಗಿ ಗ್ರಾಪಂ ಹಾಲಿ ಸದಸ್ಯ ಸಿ.ಬಿ. ಗೌಡರು ಮಾತನಾಡಿ, ಕೇವಲ ಅಂಡಗಿ ಪಂಚಾಯಿತಿ ವ್ಯಾಪ್ತಿಯಿಂದ ಒಂದು ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ 5 ಸಾವಿರಕ್ಕೂ ಹೆಚ್ಚು ಮಂದಿ 11 ಗ್ರಾಪಂ ವ್ಯಾಪ್ತಿಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ದೊಡ್ಮನಿ ಮಾತನಾಡಿ, ಬನವಾಸಿ ಹೋಬಳಿ ಉಳಿವಿಗಾಗಿ ನಮ್ಮೆಲ್ಲರ ಹೋರಾಟ ಬಲಗೊಳ್ಳಬೇಕು ಎಂದರು. ಎಪಿಎಂಸಿ ಅಧ್ಯಕ್ಷ ಸುನೀಲ ನಾಯ್ಕ ಮಾತನಾಡಿ, ಪಕ್ಷಾತೀತವಾದ ಈ ಹೋರಾಟಕ್ಕೆ ಎಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ದಾಸನಕೊಪ್ಪ ಗ್ರಾಪಂ ಅಧ್ಯಕ್ಷ ಬಸವರಾಜ ನಂದಿಕೇಶ್ವರ ಮಠ ಮಾತನಾಡಿ, ಬನವಾಸಿ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು. ಅಂಡಗಿ ಗ್ರಾಪಂ ಸದಸ್ಯ ದೇವರಾಜ ನಾಯ್ಕ ಮಾತನಾಡಿ, ಗ್ರಾಮಾಂತರದಲ್ಲಿ ಹೋರಾಟದ ಕಿಚ್ಚು ಹೆಚ್ಚಾಗಿದೆ ಎಂದರು. ಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಬಿ. ಶಿವಾಜಿ ಮಾತನಾಡಿ, ಬನವಾಸಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ನಾವೆಲ್ಲರೂ ಒಟ್ಟಾಗಿ ಹೋರಾಡೋಣವೆಂದರು. ಎಪಿಎಂಸಿ ಸದಸ್ಯ ಎಂ.ಸಿ. ನಾಯ್ಕ, ಸಮಿತಿ ಕಾರ್ಯದರ್ಶಿ ವಿಶ್ವನಾಥ ಒಡೆರ್ಯ ಉಪಸ್ಥಿತರಿದ್ದರು. ಸುದರ್ಶನ ನಾಯ್ಕ ವಂದಿಸಿದರು. ಅ. 7ರಂದು ಬನವಾಸಿ, ಭಾಶಿ, ಗುಡ್ನಾಪುರ, ಉಂಚಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಕೂಡಾ ಪೂರ್ವಭಾವಿ ಸಭೆ ನೆರವೇರಲಿದೆ.