ಭಟ್ಕಳ, [ನ.24]: ಉತ್ತರಕನ್ನಡ ಜಿಲ್ಲೆಯ ಭಟ್ಕಳ ಸಮುದರ ತೀರದಲ್ಲಿ ಮುಳುಗುತ್ತಿದ್ದ ಮಲ್ಪೆ ಬಂದರಿನ ಮೀನುಗಾರಿಕಾ ಬೋಟಿನಿಂದ 4 ಮೀನುಗಾರರನ್ನು ಕರಾವಳಿ ಕಾವಲು ಪೊಲೀಸರು ರಕ್ಷಿಸಿದ್ದಾರೆ.

ಭಾನುವಾರ ಮುಂಜಾನೆ 5.15ಕ್ಕೆ ಭಟ್ಕಳದ ನೇತ್ರಾಣಿ ದ್ವೀಪದ ಬಳಿ ಮಲ್ಪೆಯ ಶ್ರೀಲೀಲಾ ಎಂಬ ಹೆಸರಿನ ಬೋಟಿನ ಮೇಲ್ಭಾಗದಲ್ಲಿ ಇದ್ದ ಡಿಸೇಲ್ ತುಂಬಿದ್ದ ಟ್ಯಾಂಕ್ ಬೋಟಿನೊಳಗೆ ಬಿದ್ದು, ಬೋಟಿನ ತಳ ಭಾಗವು ಒಡೆದು, ನೀರು ಒಳಗೆ ನುಗ್ಗುತೊಡಗಿತು. ತಕ್ಷಣ ಬೋಟಿನಲ್ಲಿದ್ದ ಮೀನುಗಾರರು, ಕರಾವಳಿ ಕಾವಲು ಪೊಲೀಸರಿಗೆ ಮಾಹಿತಿ ನೀಡಿದರು.

ಭಟ್ಕಳ: 46 ಕಿಮೀ ಸಮುದ್ರ ಮಧ್ಯದಲ್ಲಿ ಸಿನಿಮೀಯ ಸಾಹಸ, 25 ಮೀನುಗಾರರ ರಕ್ಷಣೆ

ಮಾಹಿತಿ ಮೇರೆಗೆ ಕೂಡಲೇ ಭಟ್ಕಳ ಕರಾವಳಿ ಕಾವಲು ಪೊಲೀಸ್ ಠಾಣಾಧಿಕಾರಿ ನಾಗರಾಜ್, ಅಣ್ಣಪ್ಪಮೊಗೇರ, ತಾಂತ್ರಿಕ ಸಿಬ್ಬಂದಿಗಳಾದ ಕ್ಯಾಪ್ಟನ್ ಮಲ್ಲಪ್ಪ ಮುದಿಗೌಡರ್ ಮತ್ತು ಕಲಾಸಿ ಸಂಜೀವ ನಾಯಕ ಅವರು ಇಲಾಖೆಯ ಇಂಟರ್ ಸೆಪ್ಟರ್  ಬೋಟಿನಲ್ಲಿ ತೆರಳಿ ಮುಳುಗುತ್ತಿದ್ದ ಶ್ರೀಲೀಲಾ  ಬೋಟನಲ್ಲಿದ್ದವರನ್ನು ರಕ್ಷಿಸಿಸುವಲ್ಲಿ ಯಶಸ್ವಿಯಾದರು.

ಶ್ರೀಲೀಲಾ ಬೋಟ್ ನಲ್ಲಿದ್ದ  ಆನಂದ ಮೊಗೇರ, ಗುರು ಖಾರ್ವಿ, ಮಂಜುನಾಥ, ರಮೇಶ ಛಲವಾದಿ ಅವರನ್ನು ತಮ್ಮ ಬೋಟಿಗೆ ಹತ್ತಿಸಿ ರಕ್ಷಿಸಿದರು. ಶ್ರೀಲೀಲಾ ಬೋಟ್ ಸಮುದ್ರದಲ್ಲಿ ಮುಳುಗಿದೆ. 

ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿ ಹಾಗೂ ತಾಂತ್ರಿಕ ಸಿಬ್ಬಂದಿಗಳ  ಕರ್ತವ್ಯವನ್ನು ಶ್ಲಾಘಿಸಿ ಕರಾವಳಿ ಕಾವಲು ಪೊಲೀಸ್ ಎಸ್ಪಿ ಆರ್.ಚೇತನ್ ಬಹುಮಾನ ಘೋಷಿಸಿದ್ದಾರೆ. ಆದ್ರೆ ಏನು ಬಹುಮಾನ ಎನ್ನುವುದನ್ನು ಬಹಿರಂಗವಾಗಿ ತಿಳಿಸಿಲ್ಲ.