ಉಕ್ಕೇರುತ್ತಿರುವ ಸಮುದ್ರ : ಭಾರೀ ಮಳೆಗೆ ಹಲವು ಪ್ರದೇಶ ಜಲಾವೃತ
ಹಲವೆಡೆ ಕ್ಯಾರ್ ಚಂಡಮಾರುತ ಅಬ್ಬರ ಕಂಡು ಬಂದಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡು ಪ್ರದೇಶಗಳಲ್ಲಿ ಇದೀಗ ಮತ್ತೊಮ್ಮೆ ವರುಣ ಅಬ್ಬರಿಸುತ್ತಿದ್ದಾನೆ. ಇದರಿಂದ ಜನಜೀವನ ತತ್ತರಿಸಿದೆ.
ಬೆಂಗಳೂರು [ಅ.25]: ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಉತ್ತರ ಕನ್ನಡದ ಹಲವೆಡೆ ವರುಣ ಅಬ್ಬರಿಸುತ್ತಿದ್ದು, ಹಲವು ರಸ್ತೆಗಳು ನೀರಿನಲ್ಲಿ ಮುಳುಗಿ ಸಂಚಾರ ಸ್ಥಗಿತವಾಗಿದೆ.
ಕಾರವಾರ, ಅಂಕೋಲ ಬಳಿ ಹೆಚ್ಚಿನ ಮಳೆಯಾಗುತ್ತಿದೆ. ಹಲವು ಪ್ರದೇಶಗಳು ನೀರಿನಿಂದಾವೃತವಾಗಿವೆ. ಇನ್ನು ಹಲವೆಡೆ ಬೃಹತ್ ಮರಗಳು ಧರೆಗೆ ಉರುಳಿವೆ. ಭಾರಿ ಬಿರುಗಾಳಿ ಬೀಸುತ್ತಿದ್ದು, ಜನಜೀವನ ಸಂಪೂರ್ಣ ತತ್ತರಿಸಿದೆ.
ಅಂಕೋಲಾ ಬಳಿ ಅರಬ್ಬಿ ಸಮುದ್ರದಲ್ಲಿ ತಮಿಳುನಾಡಿನ ಎರಡು ಬೋಟ್ ಗಳು ಅಪಾಯದಲ್ಲಿ ಸಿಲುಕಿದ್ದು, ಬೋಟ್ ನಲ್ಲಿ 20 ಜನರು ಇದ್ದು, ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಮೀನುಗಾರರಿಗೆ ಬೋಟ್ ಅನ್ನು ಸಮುದ್ರಕ್ಕೆ ಇಳಿಸದಂತೆ ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸಮುದ್ರ ಉಕ್ಕೇರಿರುವುದರಿಂದ ಉತ್ತರ ಕನ್ನಡ ಜಿಲ್ಲೆ ಮುರ್ಡೇಶ್ವರದ ಕಡಲತೀರದಲ್ಲಿ ಬೃಹತ್ ಅಲೆಗಳ ಅಬ್ಬರದಿಂದ ಅಂಗಡಿ ಮಳಿಗೆಗಳಿಗೆ ಹಾನಿಯಾಗಿದೆ.
ಕಾರವಾರದಲ್ಲಿ ಮೂರು ಸಾಂಪ್ರದಾಯಿಕ ಮೀನುಗಾರಿಕೆ ಬೋಟ್‌ಗಳಿಗೆ ಹಾನಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ದಿನವಿಡೀ ಮಳೆ ಸುರಿದಿದೆ. ಉಳ್ಳಾಲದ ಕೈಕೋ, ಕಿಲಿರಿಯಾನಗರ, ಮೊಗವೀರಪಟ್ಣ ಸಮೀಪ ಕಡಲು ಬಿರುಸಾಗಿರುವುದರಿಂದ ಕಡಲ್ಕೊರೆತದ ಭೀತಿ ಆವರಿಸಿದೆ.