ಆಹಾರ ಇಲಾಖೆಯಿಂದ ಬಿಪಿಎಲ್ ಕಾರ್ಡ್‌ಗಳು ರದ್ದು
ಬಿಪಿಎಲ್ ಕಾರ್ಡುದಾರರ ಮೇಲೆ ಹದ್ದಿನ ಕಣ್ಣಿಟ್ಟಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇದೀಗ ಕಠಿಣ ಕ್ರಮ ಕೈಗೊಳ್ಳುತ್ತಿದೆ.
ಜಿ.ಡಿ. ಹೆಗಡೆ
ಕಾರವಾರ [ನ.06]: ಬಡವರಿಗೆ ಸಿಗುವ ಸೌಲಭ್ಯವನ್ನು ಸರ್ಕಾರಿ ನೌಕರರೇ ಪಡೆದುಕೊಳ್ಳುತ್ತಿರುವುದು ಬೆಳಕಿಗೆ ಬಂದಿದ್ದು, ಜಿಲ್ಲೆಯಲ್ಲಿ 102 ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದನ್ನು ರದ್ದು ಮಾಡಲಾಗಿದೆ. ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಂದಾಗಿದೆ.
ಜಿಲ್ಲೆಯಾದ್ಯಂತ ಒಟ್ಟೂ470 ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಲಾಗಿದ್ದು, ಇನ್ನೂ ಹಲವಾರು ಕುಟುಂಬಗಳು ಬಿಪಿಎಲ್ ಚೀಟಿ ಹೊಂದಿದ ಬಗ್ಗೆ ಅನುಮಾನವಿದೆ. ಬಡತನ ರೇಖೆಗಿಂತ ಕೆಳಗೆ ಇರುವವರು ಈ ಕಾರ್ಡ್ ಹೊಂದಲು ಅವಕಾಶವಿದ್ದು, ವಿವಿಧ ಸರ್ಕಾರಿ ಸೌಲಭ್ಯಗಳು ಸಿಗುತ್ತವೆ. ಆದರೆ ಸರ್ಕಾರ ನಿಗದಿ ಪಡಿಸಿದ ಮಾನದಂಡಕ್ಕಿಂತ ಹೆಚ್ಚಿನ ಅನುಕೂಲಸ್ಥರು ಕೂಡಾ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ.
ಸರ್ಕಾರಕ್ಕೆ ಮೋಸ: ಕಾರವಾರ ಸರ್ಕಾರಿ ನೌಕರರು 24, ಇತರೆ 69, ಅಂಕೋಲಾ ಸರ್ಕಾರಿ ನೌಕರರು 5, ಇತರೆ 74, ಕುಮಟಾ ಸರ್ಕಾರಿ ನೌಕರರು 4, ಇತರೆ 30, ಹೊನ್ನಾವರ ಸರ್ಕಾರಿ ನೌಕರರು 18, ಇತರೆ 10, ಭಟ್ಕಳ ಸರ್ಕಾರಿ ನೌಕರರು 24, ಇತರೆ 17, ಶಿರಸಿ ಸರ್ಕಾರಿ ನೌಕರರು 4, ಇತರೆ 48, ಸಿದ್ದಾಪುರ ಸರ್ಕಾರಿ ನೌಕರರು 7, ಇತರೆ 6, ಯಲ್ಲಾಪುರ ಸರ್ಕಾರಿ ನೌಕರರು 8, ಇತರೆ 20, ಮುಂಡಗೋಡ ಸರ್ಕಾರಿ ನೌಕರರು ಸಿಕ್ಕಿಲ್ಲ. ಇತರೆ 34, ಹಳಿಯಾಳ ಸರ್ಕಾರಿ ನೌಕರರು 3, ಇತರೆ 50, ಜೋಯಿಡಾ ಸರ್ಕಾರಿ ನೌಕರರು 5, ಇತರೆ 10 ಕುಟುಂಬದವರು ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ.
ಬಿಪಿಎಲ್ ಕಾರ್ಡ್ ಹೊಂದಿದ ಸರ್ಕಾರಿ ನೌಕರರು ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಪರಿಗಣಿಸಿ ಬಿಪಿಎಲ್ ಕಾರ್ಡ್ ಪಡೆದಾಗಿನಿಂದ ಇರುವರೆಗೆ ಪಡೆದುಕೊಂಡ ಪಡಿತರ ಸಾಮಗ್ರಿಗಳ ಬೆಲೆಯನ್ನು ದಂಡದ ರೂಪದಲ್ಲಿ ಪಾವತಿಸಲು ಸೂಚನೆ ನೀಡುವ ಬಗ್ಗೆ ಆಹಾರ ಇಲಾಖೆ ಚಿಂತನೆ ನಡೆಸಿದೆ. ಇದರಿಂದಾಗಿ ಅಕ್ರಮವಾಗಿ ಕಾರ್ಡ್ ಪಡೆದವರು ಲಕ್ಷಾಂತರ ರುಪಾಯಿ ದಂಡ ಪಾವತಿಸಬೇಕಾದ ಅನಿವಾರ್ಯತೆ ಇದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪಡಿತರ ಪಡೆಯದಿದ್ದರೂ ಕ್ರಮ : ಪಡಿತರ ಕಾರ್ಡ್ ಪಡೆದು 6 ತಿಂಗಳಿನಿಂದ ಅಥವಾ ಅದಕ್ಕೂ ಮೊದಲಿನಿಂದ ಪಡಿತರ ಪಡೆಯದೆ ಇರುವವರ ಚೀಟಿ ರದ್ದು ಮಾಡಲು ಇಲಾಖೆ ಕ್ರಮ ವಹಿಸುತ್ತಿವೆ. ಜಿಲ್ಲೆಯಲ್ಲಿ ಪಡಿತರ ಪಡೆಯದೆ ಇರುವವರು ಎಷ್ಟುಜನರಿದ್ದಾರೆ ಎಂಬುದರ ಬಗ್ಗೆ ಪರೀಕ್ಷಿಸಿಕೊಂಡು ಇಂತಹವರ ಕಾರ್ಡ್ ಕೂಡಲೇ ರದ್ದು ಮಾಡಿ ಬಿಸಿಮುಟ್ಟಿಸಲು ತಯಾರಿ ನಡೆಸಲಾಗಿದೆ. ಪಡಿತರ ಪಡೆಯದೇ ಇರುವ ಕುಟುಂಬಗಳ ಮಾಹಿತಿಯನ್ನು ಕಲೆಹಾಕುವ ಕೆಲಸ ಕೆಲವೇ ದಿನದಲ್ಲಿ ಪ್ರಾರಂಭವಾಗಲಿದ್ದು, 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನಿಂದ ಪಡಿತರ ಪಡೆಯದೇ ಇದ್ದರೆ ಕುಟುಂಬ ವಾಸವಾಗಿಲ್ಲ ಎಂದು ತೀರ್ಮಾನಿಸಿ ಕಾರ್ಡ್‌ನ್ನು ರದ್ದು ಮಾಡಲಾಗುತ್ತದೆ.
ಬಡತನ ರೇಖೆಗಿಂತ ಮೇಲೆ ಇದ್ದವರು ಬಿಪಿಎಲ್ ಕಾರ್ಡ್ ಪಡೆದಿದ್ದರೆ ಶಿಕ್ಷೆಗೆ ಒಳಗಾಗುತ್ತಾರೆ. ಈಗಾಲೇ 470 ಕುಟುಂಬ ಗುರುತಿಸಿದ್ದು, ಅದರಲ್ಲಿ ಸರ್ಕಾರಿ ನೌಕರರೂ ಸೇರಿದ್ದಾರೆ. ಸರ್ಕಾರದ ಮಾರ್ಗಸೂಚಿಯಂತೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ.
ಪುಟ್ಟಸ್ವಾಮಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ
ತಾಲೂಕಾವಾರು ಅನರ್ಹ ಮಾಡಿದ ಕಾರ್ಡ್
ತಾಲೂಕು ಕಾರ್ಡ್ ಸಂಖ್ಯೆ
ಕಾರವಾರ 93
ಅಂಕೋಲಾ 79
ಕುಮಟಾ 34
ಹೊನ್ನಾವರ 28
ಭಟ್ಕಳ 41
ಶಿರಸಿ 52
ಸಿದ್ದಾಪುರ 13
ಯಲ್ಲಾಪುರ 28
ಮುಂಡಗೋಡ 34
ಹಳಿಯಾಳ 53
ಜೋಯಿಡಾ 15