ಪ್ರಮುಖ ವಾಣಿಜ್ಯ ಬೆಳೆಗಳಾದ ಏಲಕ್ಕಿ ಹಾಗೂ ಕಾಳುಮೆಣಸನ್ನು ಬ್ರ್ಯಾಂಡ್ ಮೂಲಕ ಪರಿಚಯಿಸಬೇಕು ಎಂದು ರೈತರು ಬೇಡಿಕೆ ಇಟ್ಟಿದ್ದಾರೆ. 

ಶಿರಸಿ[ನ.15]: ದೇಶದ ಸಂಬಾರ ಪದಾರ್ಥಗಳ ಮಾರುಕಟ್ಟೆಯಲ್ಲಿ ರಾಜ್ಯದ ಕಾಳುಮೆಣಸು ಮತ್ತು ಏಲಕ್ಕಿ ಬೆಳೆಗಳನ್ನು ಬ್ರ್ಯಾಂಡ್‌ ಮೂಲಕ ಪರಿಚಯಿಸುವ ಕಾರ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಾಲಯದ ಸಂಬಾರು ಮಂಡಳಿಯಿಂದ ನಡೆಸುವಂತಾಗಬೇಕೆಂಬ ಒತ್ತಾಯ ಜಿಲ್ಲೆಯ ವ್ಯಾಪಾರಸ್ಥರು ಹಾಗೂ ರೈತರಿಂದ ಕೇಳಿಬಂದಿದೆ.

ಶಿರಸಿಯ ಕದಂಬ ಮಾರ್ಕೆಟಿಂಗ್‌ ಸಹಕಾರಿ ಸಂಸ್ಥೆಯ ಆವಾರದಲ್ಲಿ ಗುರುವಾರ ಆಯೋಜನೆಗೊಂಡಿದ್ದ ಸಂಬಾರ ಬೆಳೆಗಳ ಗುಣಮಟ್ಟಸುಧಾರಣಾ ಹಾಗೂ ಮಾರುಕಟ್ಟೆಜೋಡಣೆ ತರಬೇತಿ ಕಾರ್ಯಕ್ರಮದಲ್ಲಿ ಈ ಕುರಿತು ವಿಷಯ ಪ್ರಸ್ತಾಪವಾಯಿತು.

ಮಾರುಕಟ್ಟೆಯಲ್ಲಿ ಕೇರಳದ ಸಂಬಾರ ಬೆಳೆಗಳಾದ ಮಲಬಾರ್‌ ಗೋಲ್ಡ್ ಕಾಳುಮೆಣಸು, ಅಲೆಪ್ಪಿ ಏಲಕ್ಕಿ ಇತ್ಯಾದಿ ಬೆಳೆಗಳ ಪರಿಚಯ ಮಾತ್ರ ಹೊರ ರಾಜ್ಯಗಳ ಖರೀದಿದಾರರಿಗಿದೆ. ಕೇರಳದಂತೆ ಕರ್ನಾಟಕದಲ್ಲೂ ಸಹ ಗುಣಮಟ್ಟದ ಸಂಬಾರ ಪದಾರ್ಥಗಳನ್ನು ಬೆಳೆಯುತ್ತಿದ್ದರೂ ಸಹ ಮಾರುಕಟ್ಟೆಯಲ್ಲಿ ರಾಜ್ಯದ ಬ್ರ್ಯಾಂಡ್‌ ನಿರ್ಮಾಣವಾಗಿಲ್ಲ. ಆ ನಿಟ್ಟಿನಲ್ಲಿ ಕರ್ನಾಟಕದ ಕಾಳುಮೆಣಸು, ಏಲಕ್ಕಿಗಳ ಬ್ರ್ಯಾಂಡ್‌ ಡೆವಲಪ್‌ ಮಾಡಲು ಸಂಸದರು, ಸ್ಥಳೀಯ ಪ್ರತಿನಿಧಿಗಳ ಮೂಲಕ ಸಂಬಾರ ಮಂಡಳಿಗೆ ಒತ್ತಡ ತರುವಂತಾಗಬೇಕೆಂದು ನಿರ್ಣಯಿಸಲಾಯಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂಬಾರ ಮಂಡಳಿ ಸಹಾಯಕ ನಿರ್ದೇಶಕ ವಿಜಯ ಭಾಸ್ಕರ್‌ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ರೈತರು ವೈವಿಧ್ಯಮಯ ಸಂಬಾರ ಬೆಳೆಗಳನ್ನು ತಲೆ-ತಲಾಂತರದಿಂದ ಬೆಳೆಯುತ್ತಿದ್ದಾರೆ. ಕಾಳುಮೆಣಸು, ಏಲಕ್ಕಿ, ಅರಿಶಿನ, ಶುಂಠಿ ಬೆಳೆಗಳಷ್ಟೇ ಪ್ರಾಮುಖ್ಯತೆ ಲವಂಗ, ಜಾಯಿಕಾಯಿ, ಸಕಲ ಸಂಬಾರ, ದಾಲ್ಚಿನ್ನಿ, ಕೋಕ್‌ಂ ಇತ್ಯಾದಿಗಳಿಗೂ ಲಭಿಸುತ್ತಿದೆ. ಅಡಿಕೆ ತೋಟದಲ್ಲಿ ಉಪ ಬೆಳೆಯಾಗಿ ಬೆಳೆಯುತ್ತಿರುವ ಇವುಗಳಿಂದ ಅನೇಕ ರೈತರು ಉತ್ತಮ ಆದಾಯ ಪಡೆಯುತ್ತಿದ್ದಾರೆ. ಆದರೂ ಅನೇಕ ರೈತರಿಗೆ ಇವುಗಳ, ಅದರಲ್ಲೂ ಲವಂಗ, ದಾಲ್ಚಿನ್ನಿ, ಜಾಯಿಕಾಯಿ, ಜಾಯಿಪತ್ರೆಯಂಥ ಬೆಳೆಗಳ ಕೊಯ್ಲಿನ ವಿಧಾನ, ಕೊಯ್ಲೋತ್ತರ ಸಂಸ್ಕರಣೆ, ಉತ್ತಮ ಗುಣಮಟ್ಟದ ಕುರಿತು ಮಾಹಿತಿಯಿಲ್ಲದಿರುವದು ಹೆಚ್ಚಿನ ಬೆಲೆ ದೊರೆಯದಂತಾಗಿದೆ ಎಂದರು.

ಮಲೆನಾಡಲ್ಲಿ ಯಥೇಚ್ಛವಾಗಿ ಬೆಳೆಯಾಗುತ್ತಿದ್ದ ಏಲಕ್ಕಿ ಬೆಳೆಯು ಇದೀಗ ವಿನಾಶದ ಅಂಚಿನಲ್ಲಿ ಸಾಗಿದೆ. ರೈತರಲ್ಲಿ ಗಿಡ ತಯಾರಿಸಲೂ ಸಹ ಏಲಿಕ್ಕಿ ಬೀಜದ ಲಭ್ಯತೆ ಇಲ್ಲದಂತಾಗಿದೆ. ಮಾರುಕಟ್ಟೆದರದ ಏರಿಳಿತದಿಂದ ಬೇಸತ್ತ ರೈತರು ಏಲಕ್ಕಿ ಬೆಳೆಯಿಂದ ದೂರ ಸರಿದಿದ್ದಾರೆ. ಆದರೆ ಭವಿಷ್ಯದಲ್ಲಿ ಏಲಕ್ಕಿ ಬೆಳೆಗೆ ಹೆಚ್ಚಿನ ದರ ದೊರೆಯಲಿದೆ. ರೈತರು ಏಲಕ್ಕಿ ಬೆಳೆಯತ್ತ ಗಮನಹರಿಸಬೇಕು ಎಂದ ಅವರು, ಸಂಬಾರ ಮಂಡಳಿಯ ಕಾರ್ಯವೈಖರಿ, ರಫ್ತು, ಮಾರುಕಟ್ಟೆ, ಗುಣಮಟ್ಟದ ಕುರಿತು ಮಾಹಿತಿ ನೀಡಿದರು.

ಸಂಬಾರ ಬೆಳೆಗಳ ಸಂಸ್ಕರಣಾ ವಿಧಾನಗಳ ಕುರಿತು ಲಕ್ಷ್ಮೀನಾರಾಯಣ ಹೆಗಡೆ ಉಪನ್ಯಾಸ ನೀಡಿದರು. ಕದಂಬ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಶ್ವೇಶ್ವರ ಭಟ್ಟಸೇರಿದಂತೆ ಜಿಲ್ಲೆಯ ಪ್ರಮುಖ ವ್ಯಾಪಾರಸ್ಥರು, ಪ್ರಗತಿಪರ ಕೃಷಿಕರು ಉಪಸ್ಥಿತರಿದ್ದರು.