ಹಬ್ಬಗಳ ಸಂದರ್ಭದಲ್ಲಿ ದುಪ್ಪಟ್ಟು ದರ ಸುಲಿಗೆ ಮಾಡುವ ಖಾಸಗು ಬಸ್‌ಗಳ ಸೀಟು ದಂಧೆಗೆ ಬ್ರೇಕ್ ಹಾಕಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಕಾರವಾರ [ಅ.23]: ಹಬ್ಬ ಅಥವಾ ವಿಶೇಷ ದಿನಗಳ ನೆಪದಲ್ಲಿ ಪ್ರಯಾಣಿಕರಿಂದ ಸುಲಿಗೆ ಮಾಡುವ ಖಾಸಗಿ ಬಸ್‌ಗಳ ಸೀಟು ದಂಧೆ ನಿಯಂತ್ರಿಸುವಂತೆ ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ್ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಬೆಂಗಳೂರು ಅಥವಾ ಬೇರೆಡೆಯಿಂದ ಕಾರವಾರಕ್ಕೆ ಆಗಮಿಸುವ ಅಥವಾ ಇಲ್ಲಿಂದ ತೆರಳುವ ಖಾಸಗಿ ಬಸ್‌ಗಳಲ್ಲಿ ಸೀಟುಗಳು ಇದ್ದರೂ ಕಾಯ್ದಿರಿಸಿ ಬೇಡಿಕೆ ಹೆಚ್ಚಿಸಿಕೊಂಡು ಹೆಚ್ಚಿನ ದರಕ್ಕೆ ಸೀಟು ನೀಡಲಾಗುತ್ತಿದೆ ಎಂದು ಸಾರ್ವಜನಿಕರಿಂದ ವ್ಯಾಪಕ ದೂರುಗಳಿವೆ. ಈ ಹಿನ್ನೆಲೆಯಲ್ಲಿ ದಿಢೀರ್ ದಾಳಿ ಮಾಡಿ ಖಾಸಗಿ ಬಸ್‌ಗಳ ಈ ಸೀಟು ದಂಧೆಯನ್ನು ನಿಯಂತ್ರಿಸಬೇಕು ಎಂದು ತಾಕೀತು ಮಾಡಿದರು.
ಕಾನೂನು ಎಲ್ಲರಿಗೂ ಒಂದೇ. ಸ್ಪರ್ಧಾತ್ಮಕ ವ್ಯವಹಾರಕ್ಕೆ ಯಾವುದೇ ಅಡ್ಡಿಯಿಲ್ಲ. ಆದರೆ, ನಿಯಮ ಉಲ್ಲಂಘಿಸಿ ಸಾರ್ವಜನಿಕರಿಗೆ ಮಾಡುವ ಅನ್ಯಾಯವಾಗುವುದನ್ನು ಸಹಿಸಲಾಗುವುದಿಲ್ಲ. ಈ ಬಗ್ಗೆ ಖಾಸಗಿ ಮಾಲೀಕತ್ವದ ಬಸ್‌ಗಳ ಇಂತಹ ವ್ಯವಹಾರಗಳನ್ನು ನಿಯಂತ್ರಿಸಬೇಕು. ಕಳೆದ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಅಪಘಾತಗಳು ಇಳಿಮುಖವಾಗಿರುವುದು ಸಮಾಧಾನಕರ, ಆದರೂ ಮತ್ತಷ್ಟುಪ್ರಗತಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಅಪಘಾತಗಳಿಗೆ ಕಾರಣಗಳನ್ನು ತಿಳಿದು ಸರಿಪಡಿಸಬೇಕಿದೆ ಎಂದರು.
ಇತ್ತೀಚಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಸಿಯಂತೆ ನಿಯಮ ಉಲ್ಲಂಘಿಸಿದ ರಸ್ತೆ ಸವಾರರ ಮೇಲೆ ದಂಡ ವಿಧಿಸುತ್ತಿರುವುದೂ ಅಪಘಾತಗಳು ಕಡಿಮೆಯಾಗುತ್ತಿರುವುದಕ್ಕೆ ಕಾರಣವಿರಬಹುದು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಂತಿಮವಾಗಿ ವಾಹನ ಸವಾರರ ಸುರಕ್ಷತೆ ಹಿತದೃಷ್ಟಿಯಿಂದಲೇ ನಿಯಮಗಳ ಅನುಷ್ಠಾನವನ್ನು ಕಠಿಣಗೊಳಿಸಲಾಗಿದೆ ಎಂದು ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಯಾವುದೇ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳುವಾಗ ಸುರಕ್ಷಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಹಿನ್ನೆಲೆಯಲ್ಲಿ ಕಾಮಗಾರಿ ಅಂದಾಜು ಪಟಿ ್ಟತಯಾರಿಸುವಾಗಲೇ ದೂರದೃಷ್ಟಿಇರಬೇಕು. ತಿರುವುಗಳಲ್ಲಿ ಎಚ್ಚರಿಕೆ ಫಲಕಗಳು, ತಡೆಗೋಡೆ, ರಸ್ತೆ ಉಬ್ಬು ತಗ್ಗುಗಳು ಅಥವಾ ರಸ್ತೆ ನಿರ್ಮಾಣವೂ ವಾಹನ ಸಂಚಾರಕ್ಕೆ ಪೂರಕವಾಗಿರಬೇಕು. ಜಿಲ್ಲೆಯಲ್ಲಿ ಗುರುತಿಸಲಾಗಿರುವ 36 ಅತಿ ಹೆಚ್ಚು ಅಪಘಾತದ ಜಾಗಗಳನ್ನು ಸುಧಾರಿಸಬೇಕು ಎಂದು ಎಚ್ಚರಿಕೆ ನೀಡಿದರು.
ದ್ವಿಚಕ್ರ ವಾಹನ ಸವಾರರೇ ಹೆಚ್ಚು ಅಪಘಾತದಲ್ಲಿ ಮೃತಪಡುತ್ತಿರುವ ಬಗ್ಗೆ ವರದಿಯಾಗುತ್ತಿದ್ದು, ಚಾಲನಾ ಪರವಾನಗಿ ನೀಡುವ ನಿಯಮಗಳನ್ನು ಕಠಿಣಗೊಳಿಸಬೇಕು. ಹೆಚ್ಚು ನಿಯಮ ಉಲ್ಲಂಘಿಸಿದರೆ ಚಾಲನಾ ಪರವಾನಗಿ ರದ್ದುಗೊಳಿಸಬೇಕು ಎಂದು ಅಭಿಪ್ರಾಯಿಸಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠ ಡಾ. ಗೋಪಾಲ್ ಬ್ಯಾಕೋಡ್, ಕಾರವಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿ.ಜೆ. ವಿಶಾಲ್, ಶಿರಸಿ ಪ್ರಾದೇಶಿಕ ಸಾರಿಗೆ ಅಧಿಕಾರಿ ವಾಸೀಮ್ ಬಾಬಾ, ದಾಂಡೇಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಡಿ. ನಾಯ್ಕ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ, ಅಬಕಾರಿ ಉಪಾಯುಕ್ತ ವೈ.ಆರ್. ಮೋಹನ್ ಇದ್ದರು.
