Asianet Suvarna News Asianet Suvarna News

ಕುಮಟಾ ಡಿಪೋದಲ್ಲಿ ‘ಡಕೋಟಾ’ ಬಸ್‌ಗಳ ದರ್ಬಾರ್

ಕುಮಟಾ ಸಾರಿಗೆ ಘಟಕದಲ್ಲಿ ಗ್ರಾಮೀಣ ಮಾರ್ಗಗಳೇ ಹೆಚ್ಚಾಗಿದ್ದು ಇವೇ ಆದಾಯದ ಮೂಲಗಳಾಗಿವೆ. ಆದರೆ ಈ ಮಾರ್ಗಗಳಲ್ಲಿ ಸಂಚರಿಸುವ ಗುಜರಿ ಬಸ್‌ಗಳು ಮಾತ್ರ ಪ್ರಯಾಣಿಕರಿಗೆ ಹಿಂಸೆ ನೀಡುತ್ತಿವೆ. 

Dacota Buses Runs from Kumta Bus Depo
Author
Bengaluru, First Published Oct 21, 2019, 2:43 PM IST

ಕುಮಟಾ [ಅ.21]:  ಹಿಂದೊಮ್ಮೆ ಜಿಲ್ಲೆಯಲ್ಲಿಯೇ ಉತ್ತಮ ಸಾರಿಗೆ ಘಟಕ ಖ್ಯಾತಿಗೆ ಭಾಜನವಾಗಿದ್ದ ಕುಮಟಾ ಘಟಕ ಇಂದು ಗುಜರಿ ಬಸ್‌ಗಳಿಂದಲೆ ತುಂಬಿದೆ. ಲಾಭದಲ್ಲಿರುವ ಡಿಪೋಗಳ ಲಾಭಾವಂಶವನ್ನು ಇನ್ನೊಂದು ಡಿಪೋಗೆ ಹಸ್ತಾಂತರಿಸಿದ ಪರಿಣಾಮವೇ ಈ ಘಟಕ ಇಂತಹ ಸ್ಥಿತಿಗೆ ಬಂದಿದೆ ಎಂಬುವುದು ಇಲಾಖೆಯ ನೌಕರರದ್ದು.

ದಕ್ಷ ಘಟಕ ವ್ಯವಸ್ಥಾಪಕರ ಕೊರತೆ, ವಾಹನ ಬಿಡಿಭಾಗಗಳ ಕೊರತೆ, ನೌಕರರು ಹಾಗೂ ಮೇಲಧಿಕಾರಿಗಳ ನಡುವೆ ಸಮನ್ವಯತೆ ಕೊರತೆ, ಇಲಾಖೆಯೊಳಗಿದ್ದುಕೊಂಡೆ ಕಾಲಕಾಲಕ್ಕೆ ಬದಲಾಗುವ ಶಾಸಕರ ಪರ ಲಾಭಿ ನಡೆಸಿ ರಾಜಕೀಯ ಮಾಡುತ್ತಿರುವ ಒಂದು ಗುಂಪು ಘಟಕ ಅಭಿವೃದ್ಧಿಗೆ ಹಾಗೂ ಸಮರ್ಪಕ ಸಾರಿಗೆ ಸೌಕರ್ಯ ನೀಡುವ ನಿಟ್ಟಿನಲ್ಲಿನ ಎಡವಲು ಕಾರಣಗಳು ಎನ್ನಲಾಗುತ್ತಿವೆ.

ಕುಮಟಾ ಸಾರಿಗೆ ಘಟಕದಲ್ಲಿ ಗ್ರಾಮೀಣ ಮಾರ್ಗಗಳೇ ಹೆಚ್ಚಾಗಿದ್ದು ಇವೇ ಆದಾಯದ ಮೂಲಗಳಾಗಿವೆ. ಆದರೆ ಈ ಮಾರ್ಗಗಳಲ್ಲಿ ಸಂಚರಿಸುವ ಗುಜರಿ ಬಸ್‌ಗಳು ಮಾತ್ರ ಪ್ರಯಾಣಿಕರಿಗೆ ಹಿಂಸೆ ನೀಡುತ್ತಿವೆ. ಕುಮಟಾ ಸಾರಿಗೆ ಘಟಕದಲ್ಲಿ ಓರ್ವ ಘಟಕ ವ್ಯವಸ್ಥಾಪಕರು, 364 ಚಾಲಕರು, ನಿರ್ವಾಹಕರು ಹಾಗೂ 49 ಉಳಿದ ಸಿಬ್ಬಂದಿ ಇದ್ದಾರೆ. ಒಟ್ಟೂ136 ಬಸ್‌ಗಳಿದ್ದು ಇದರಲ್ಲಿ 20 ಬಸ್‌ಗಳು ಅವಧಿ ಮೀರಿದ ಬಸ್‌ಗಳು. 116 ಬಸ್‌ ಮಾತ್ರ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಮೂಲಗಳ ಪ್ರಕಾರ ಈ 116 ಬಸ್‌ಗಳ ಪೈಕಿ 15 ಬಸ್‌ಗಳು ಓಡಿಸಲು ಬಾರದಿದ್ದರು ಒತ್ತಾಯ ಪೂರ್ವಕವಾಗಿ ಬಳಸಲಾಗುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕನಿಷ್ಠ ಎಂಟು ಲಕ್ಷ ಕಿಮೀ ಸಂಚರಿಸಿದ ವಾಹನ ಬಳಸಬಾರದು ಎಂಬ ಸಾರಿಗೆ ಇಲಾಖೆಯ ನಿಯಮವಿದ್ದರೂ ಇಲ್ಲಿ ಅವಧಿ ಮುಗಿದಿರುವ ಬಸ್‌ಗಳನ್ನೇ ಓಡಿಸಲಾಗುತ್ತಿದೆ. ಮೊದಲೆ ಸವಕಳಿ ಹೊಂದಿ ಬಳಕೆಗೆ ಬಾರದ ಹಳೆ ಬಸ್‌ನ ಬಿಡಿ ಭಾಗಗಳನ್ನು ಬದಲಿ ಬಸ್‌ಗೆ ಅಳವಡಿಸಿದಾಗ ಹೊಂದಾಣಿಕೆಯಾಗದೆ ಮಾರ್ಗ ಮಧ್ಯದಲ್ಲೆ ಕೆಟ್ಟು ನಿಲ್ಲುವುದು ದಿನನಿತ್ಯ ಕಂಡುಬರುತ್ತಿವೆ. ಕುಮಟಾ ಘಟಕದಿಂದ ಸಂಚರಿಸುವ ಬಹುತೇಕ ಬಸ್‌ಗಳಿಗೆ ಬ್ರೇಕ್‌, ಟೈರ್‌, ಎಕ್ಸ್‌ಲೇಟರ್‌ ಸೇರಿದಂತೆ ಇನ್ನಿತರ ತಾಂತ್ರಿಕ ಸಾಮಗ್ರಿಗಳು ಸುರಕ್ಷತೆಯಿಂದ ಕೂಡಿಲ್ಲ. ಮಾರ್ಗ ಮಧ್ಯೆಯೆ ನಿಲ್ಲುವ ಅನಿವಾರ್ಯತೆ. ಚಾಲಕ ಯಾಮಾರಿದರೆ ಬ್ರೇಕ್‌ ವಿಫಲವಾಗಿ ರಸ್ತೆ ಬದಿಯ ಕಂದಕಕ್ಕೆ ಹುರುಳಿ ಬೀಳುವ ಭಯ. ಕಿಮಾನಿ-ಕೊಡ್ಕಣಿ-ಬರ್ಗಿ, ಮೂರೂರು-ಬೊಗರಿಬೈಲ್‌, ಅಘನಾಶಿನಿ, ಊರಕೇರಿ, ಬಡಾಳ-ಸಂತೆಗುಳಿ, ನಾಗೂರು-ಬ್ರಹ್ಮೂರು, ಹೆಗಡೆ, ಮಾಸ್ತಿಹಳ್ಳ, ಹೊನ್ನಾವರ ತಾಲೂಕಿನ ಗುಂಡಿಬೈಲ್‌, ಮೂಡ್ಕಣಿ, ಗೇರುಸೊಪ್ಪಾ, ತೊಳಸಾಣಿ ಸೇರಿದಂತೆ ಇನ್ನಿತರ ಹಲವಾರು ಗ್ರಾಮೀಣ ಮಾರ್ಗಗಳಲ್ಲಿ ಬಳಕೆಗೆ ನಿರುಪಯುಕ್ತವಾದ ಬಸ್‌ಗಳೆ ಓಡಾಟ ನಡೆಸುತ್ತಿವೆ.

ಬಾರದ ಹೊಸ ಬಸ್‌ಗಳು

ಜಿಲ್ಲೆಯ ಬಹುತೇಕ ಡಿಪೋಗಳಿಗೆ ಪ್ರತಿ ವರ್ಷ ಹೊಸ ವಾಹನಗಳು ಬರುತ್ತಿವೆ. ಆದರೆ ಕುಮಟಾ ಘಟಕ್ಕೆ ಮಾತ್ರ ಸಮರ್ಪಕ ಬಸ್‌ಗಳ ಪೂರೈಕೆಯಾಗುತ್ತಿಲ್ಲ. ಶಾರದಾ ಶೆಟ್ಟಿತಮ್ಮ ಅವಧಿಯಲ್ಲಿ ಬಂದ ಎರಡು ಬಸ್‌ ಉದ್ಘಾಟಿಸಿದ ನಂತರ ಶಾಸಕ ದಿನಕರ ಶೆಟ್ಟಿಉದ್ಘಾಟಿಸಿದ್ದಾರೆನ್ನುವ ಆರೋಪವು ಇತ್ತೀಚಿಗೆ ಕೇಳಿ ಬಂದಿದೆ. ಭಟ್ಕಳದ ಮಾಜಿ ಶಾಸಕ ಮಂಕಾಳು ವೈದ್ಯ ಭಟ್ಕಳ ಡಿಪೋಕೆ ತಮ್ಮ ಸಾಮರ್ಥ್ಯದಿಂದ ತಂದುಕೊಂಡ 6 ಜನಸ್ನೇಹಿ ಬಸ್‌ನ್ನು ಮತ್ತೆ ಕುಮಟಾ-ಹೊನ್ನಾವರ ಮಾರ್ಗದಲ್ಲಿ ಓಡಿಸಲು ಸಾಧ್ಯವಾದರೆ ನಮ್ಮ ಶಾಸಕರು ಈ ಬಗ್ಗೆ ಯಾಕೆ ಮೌನಿಯಾಗಿದ್ದಾರೆ ಎನ್ನುವ ನೂರಾರು ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಇನ್ನಾದರೂ ಸರ್ಕಾರ, ಜನಪ್ರತಿನಿಧಿಗಳು, ನೂತನ ಸಂಸ್ಥೆಯ ಅಧ್ಯಕ ವಿ.ಎಸ್‌. ಪಾಟೀಲ್‌ ಹಾಗೂ ಅಧಿಕಾರಿಗಳು ಮುತುವರ್ಜಿ ವಹಿಸಿ ಕುಮಟಾ ಬಸ್‌ ಡಿಪೋವನ್ನು ಸುಸ್ಥಿರಗೊಳಿಸಿ ಡಕೋಟಾ ಬಸ್‌ಗಳಿಂದ ಮುಕ್ತಿ ನೀಡಬೇಕಿದೆ.

ವರ್ಗಾವಣೆಗೊಳ್ಳದ ಸಿಬ್ಬಂದಿ

ಕಳೆದ 10 ವರ್ಷಗಳಿಂದ ಬಹುತೇಕ ಸಿಬ್ಬಂದಿಗಳು ಇಲ್ಲಿಂದ ವರ್ಗಾವಣೆಯಾಗದೆ ಒಂದೇ ಸ್ಥಳದಲ್ಲಿ ಬಿಡು ಬಿಟ್ಟಿರುವುದರಿಂದ ಮೇಲಧಿಕಾರಿಗಳ ಮಾತನ್ನೂ ಧಿಕ್ಕರಿಸಿ ಕಾರ್ಯ ಸಾಧನೆ ಮಾಡಿಕೊಳ್ಳುವ ಕೆಲವು ನೌಕರ ವರ್ತನೆಯೂ ಸಾರ್ವಜನಿಕರ ಅಸಹನೆಗೆ ಕಾರಣವಾಗಿದೆ. ರಿಯಾಯತಿ ಪಾಸ್‌ ಹೊಂದಿರುವ ಯಾವುದೇ ವಿದ್ಯಾರ್ಥಿಗಳನ್ನು ಕಂಡರೂ ಸಾರಿಗೆ ಸಿಬ್ಬಂದಿ ಮೂಗು ಮುರಿಯುವ ಮನಸ್ಥಿತಿ ಹಿಂದಿಗಿಂತ ಹೆಚ್ಚಾಗಿದೆ.

Follow Us:
Download App:
  • android
  • ios