ಶಿರಸಿ [ಅ.21]:  ಪ್ರಜಾಪ್ರಭುತ್ವದ ಕೊಲೆ ಆಗುತ್ತಿದೆ. ಜನತೆ ಒಪ್ಪಿ, ಗೌರವಿಸುವಂತಹ ಪಕ್ಷಾಂತರ ಆದರೆ ಸಮಂಜಸ. ಆದರೆ ಈಗ ಅಧಿಕಾರಕ್ಕೆ, ಸಚಿವ ಸ್ಥಾನಕ್ಕೆ ಪಕ್ಷಾಂತರ ಆಗುತ್ತಿದೆ ಎಂದು ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಅನರ್ಹ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.

ಅವರು ಭಾನುವಾರ ತಾಲೂಕಿನ ಬನವಾಸಿಯ ನಾಮದೇವ ಕಲ್ಯಾಣ ಮಂಟಪದಲ್ಲಿ ನಡೆದ ಬನವಾಸಿ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅನರ್ಹ ಶಾಸಕರು ಈ ಕ್ಷೇತ್ರದಿಂದ ಪುನಃ ನಿಂತರೆ ಬಿಜೆಪಿಯಿಂದ 23 ಸಾವಿರ ವೋಟು ಮರಳಿ ಕಾಂಗ್ರೆಸ್‌ಗೆ ಬರುತ್ತದೆ. ಆಗ ಕಾಂಗ್ರೆಸ್‌ ಗೆಲ್ಲುತ್ತದೆ ಎನ್ನುವುದು ಸತ್ಯ ಎಂದರು.

ಬೇರೆ ಆಮಿಷ, ಹೆಚ್ಚಿನ ಅಧಿಕಾರಕ್ಕೆ ಪಕ್ಷಾಂತರ ಮಾಡಿದರೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿಲ್ಲ. ಒಬ್ಬ ವ್ಯಕ್ತಿ ಮಂತ್ರಿಯಾಗಲು, ಅಧಿಕಾರ ಆಮಿಷಕ್ಕಾಗಿಯೇ ಚುನಾವಣೆ ವೆಚ್ಚ ಎಷ್ಟು. ಅದು ನಿಮ್ಮ ಮೇಲಲ್ಲವೇ. ಇದನ್ನು ಮತದಾರರೇ ತಿಳಿಸಿ ಹೇಳಬೇಕಾಗಿದೆ. ಕೇವಲ ಅಧಿಕಾರ ಎಂದು ಬೇರೆ ಪಕ್ಷಕ್ಕೆ ಹೋದರೆ ಮತದಾರರು ಮತ ನೀಡುವುದಿಲ್ಲ. ನಾನು ವೈಯಕ್ತಿಕವಾಗಿ ಟೀಕಿಸುವುದಿಲ್ಲ. ಚುನಾವಣೆ ಏಕೆ, ಹೇಗೆ? ಎಂದು ಜನರು ವಿಚಾರ ಮಾಡಬೇಕು ಎಂದರು.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಮೇಲೆ ಈ ಕ್ಷೇತ್ರದಲ್ಲಿ ಸಾಕಷ್ಟುಅಭಿವೃದ್ಧಿ ಆಗಿದೆ ಎಂದ ಅವರು, ಬನವಾಸಿ ಬಗ್ಗೆ ಎಲ್ಲರಿಗೂ ಅಭಿಮಾನವಿದೆ. ಇದು ಮೊದಲ ಕನ್ನಡದ ರಾಜಧಾನಿಯಾಗಿದೆ. ಬನವಾಸಿಯನ್ನು ಆನವಟ್ಟಿಗೆ ಸೇರಿಸುವ ಬಗ್ಗೆ ಯಾರು ಹೇಳಿದ್ದಾರೆ ಗೊತ್ತಿಲ್ಲ. ಇದು ಊಹಾಪೋಹ. ಸರ್ಕಾರದ ಮುಂದೆ ಯಾವಾಗಲೂ ಈ ಪ್ರಸ್ತಾಪ ಬಂದಿಲ್ಲ. ಬನವಾಸಿ ಗಂಡುಮೆಟ್ಟಿನ ಉತ್ತರಕನ್ನಡದ ಪ್ರದೇಶ. ಬನವಾಸಿ ತಾಲೂಕು ಮಾಡುವುದಾದರೆ ಮಾಡಿ. ಪಕ್ಷಾತೀತವಾಗಿ ಹೋರಾಡುತ್ತೇವೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯದಲ್ಲಿ 2 ರಿಂದ 3 ಲಕ್ಷ ಮನೆ ಬಿದ್ದಿದೆ. ಲಕ್ಷಾಂತರ ಜಾನುವಾರು ಕೊಚ್ಚಿಕೊಂಡು ಹೋಗಿದೆ. ಸಾವಿವಾರು ಕೋಟಿ ಹಾನಿಯನ್ನು ಸರ್ಕಾರವೇ ಅಂದಾಜಿಸಿದೆ. ಆದರೆ ಪರಿಹಾರ ಸೂಕ್ತವಾಗಿ ವಿತರಣೆಯಾಗಿಲ್ಲ. 22 ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾಹಾಕಾರ ಎದ್ದಿದೆ. ಬೆಳೆಹಾನಿಯಾಗಿದೆ. ಸಮೀಕ್ಷೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸರ್ಕಾರ ನೆರೆ ಸಂತ್ರಸ್ತರಿಗೆ ತಕ್ಷಣ ಸ್ಪಂದಿಸಬೇಕು ಎಂದರು.

ಅಡಕೆ ಬೆಳೆಗಾರರು ಕೊಳೆರೋಗಕ್ಕೆ ಒಳಗಾಗಿದ್ದಾರೆ. 2014ರಲ್ಲಿ ಸಿದ್ದರಾಮಯ್ಯ ಸರ್ಕಾರ ಅಡಕೆಗೆ ಪರಿಹಾರ ನೀಡಿತ್ತು. ಈಗ ಸಮೀಕ್ಷೆ ನಡೆದಿಲ್ಲ. ಯಾವುದೇ ಬೆಳೆ ಹಾನಿಗೆ ಪರಿಹಾರ ನೀಡಬೇಕು. ಸಾಲಮನ್ನಾ ಹಣ ಇನ್ನೂ ಜನರಿಗೆ ಸಿಗಬೇಕಿದೆ. ಅದನ್ನು ಕೂಡಲೇ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ರೈತರು, ಕೂಲಿಕಾರರು ಅತಿವೃಷ್ಟಿಯಿಂದ ತತ್ತರಿಸಿದ್ದಾರೆ. ಅವರ ಸಾಲಮನ್ನಾ ಮಾಡಲು ಆಗ್ರಹಿಸುತ್ತೇನೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್ ಘೋಟ್ನೇಕರ್‌, ಬಿಜೆಪಿ ನಮ್ಮ ಸರ್ಕಾರವಿದ್ದಾಗ ಸಾಲ ಮನ್ನಾ ಮಾಡಿ ಎನ್ನುತ್ತಿದ್ದರು. ಈಗ ಕಷ್ಟದಲ್ಲಿರುವ ರೈತರಿಗೆ ಸಾಲ ಮನ್ನಾ ಮಾಡಿ ತೋರಿಸಿ. ಬಿಜೆಪಿ ತುಪ್ಪ ಹಚ್ಚುವ ಕೆಲಸ ಬಿಟ್ಟು ವಾಸ್ತವವಾಗಿ ಕೆಲಸ ಮಾಡಿ ರೈತರಿಗೆ ಸಹಾಯ ಮಾಡಿ ತೋರಿಸಬೇಕು ಎಂದು ಸವಾಲು ಹಾಕಿದರು.

ಸಮ್ಮಿಶ್ರ ಸರ್ಕಾರ ಸಾಲಮನ್ನಾ ಮಾಡಿದ ಹಣ ಮೊದಲು . 108 ಕೋಟಿ ಕೆಡಿಸಿಸಿ ಬ್ಯಾಂಕಿಗೆ ಬರುವುದು ಬಾಕಿ ಕೊಡೆ ಹಾಗೂ ನೆರಯಿಂದ ಮನೆ ಕಳೆದುಕೊಂಡವರಿಗೆ ಕನಿಷ್ಠ . 10 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿ.ಎಫ್‌. ನಾಯ್ಕ, ಶ್ರೀಲತಾ ಕಾಳೇರಮನೆ, ಸಂತೋಷ ಶೆಟ್ಟಿ, ಎಚ್‌.ಎಂ. ನಾಯ್ಕ, ಅಬ್ದುಲ್‌ ಮುಜೀದ್‌, ದೀಪಕ ಹೆಗಡೆ ದೊಡ್ಡೂರ, ವಿ.ಜಿ. ನಾಗರಾಜ ನಾಯ್ಕ, ಅಬ್ಬಾಸ ಥೊನ್ಸೆ, ರಾಜಶೇಖರ ಗೌಡ, ರಮೇಶ ದುಭಾಶಿ, ರವೂಫ್‌ ಸಾಬ್‌, ಸೂರ್ಯಪ್ರಕಾಶ ಹೊನ್ನಾವರ, ಸುನೀಲ ನಾಯ್ಕ ಇತರರು ಇದ್ದರು. ಜಿಪಂ ಸದಸ್ಯ ಬಸವರಾಜ ದೊಡ್ಮನಿ ನಿರ್ವಹಿಸಿದರು