ಯಲ್ಲಾಪುರ [ನ.15]:  ಅನರ್ಹ ಶಾಸಕರು ಕೇವಲ ಅಧಿಕಾರ ಲಾಲಸೆಯಿಂದ ಪಕ್ಷಕ್ಕೆ ಹಾಗೂ ಮತದಾರರಿಗೆ ದ್ರೋಹ ಬಗೆದಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಅನಾವಶ್ಯಕವಾಗಿ ಉಪಚುನಾವಣೆ ನಡೆಯಲು ಕಾರಣರಾಗಿದ್ದಾರೆ. ಇಂತಹ ಅಭ್ಯರ್ಥಿಗಳಿಗೆ ಮತ ನೀಡದೆ ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಮತದಾರರು ಜಾಣತನ ತೋರಿ, ತಕ್ಕಪಾಠ ಕಲಿಸುವ ಅಗತ್ಯವಿದೆ ಎಂದು ಮಾಜಿ ಸಚಿವ, ಶಾಸಕ ಆರ್‌.ವಿ. ದೇಶಪಾಂಡೆ ಹೇಳಿದರು.

ಗುರುವಾರ ಪಟ್ಟಣದ ದೇವಿ ಮೈದಾನದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ನಾಯಕ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಅನರ್ಹರು ಚುನಾವಣೆ ಸ್ಪರ್ಧಿಸಲು ಅವಕಾಶ ಪಡೆದುಕೊಂಡಿರುವುದು ನಿಜವಾದರೂ, ಸರ್ವೋಚ್ಚ ನ್ಯಾಯಾಲಯ ಅನರ್ಹರೆಂಬ ಮುದ್ರೆ ಒತ್ತಿದ್ದು, ಅದನ್ನು ಬದಲಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಸರ್ಕಾರ ಮತ್ತು ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಪ್ರಮಾಣದ ಅನುದಾನ ನೀಡಿದೆ. ಆದರೆ ಬಿಜೆಪಿ ಸರ್ಕಾರ ಈಗ ಚುನಾವಣೆಯ ಹೊಸ್ತಿಲಲ್ಲಿ ಹಣ ಬಿಡುಗಡೆ ಮಾಡಿದೆ ಎಂದು ಟೀಕಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಭಿವೃದ್ಧಿಗೆ ಬಂದಿರುವ ಹಣ ಯಾರ ವೈಯಕ್ತಿಕ ಸ್ವತ್ತು ಅಲ್ಲ. ಅದನ್ನು ಅಭಿವೃದ್ಧಿಗಾಗಿ ಕೇಳುವ ಹಕ್ಕು ಎಲ್ಲ ಜನತೆಗೂ ಇದೆ. ಆದ್ದರಿಂದ ಮತದಾರರು ಬೆನ್ನು ಹತ್ತಿ ಎಂದು ಜನರನ್ನು ಹುರಿದುಂಬಿಸಿದರು. ಚುನಾವಣೆಯೆಂಬ ಯುದ್ಧಕ್ಕೆ ಮತದಾರರು ಸಿದ್ಧರಾಗಿ. ಇದು ಕಾಂಗ್ರೆಸ್‌ ಕ್ಷೇತ್ರವಾಗಿದ್ದು, ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಖಚಿತ. ಕಾರ್ಯಕರ್ತರು ನಿಷ್ಠೆ, ಪ್ರಾಮಾಣಿಕತೆಯಿಂದ ಮನೆಮನೆಗೆ ತೆರಳಿ ಮತ ಯಾಚಿಸಿದರೆ, ಗೆಲುವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಅಭ್ಯರ್ಥಿ ಭೀಮಣ್ಣ ನಾಯ್ಕ ಮಾತನಾಡಿ, ಅನರ್ಹ ಶಾಸಕ ಶಿವರಾಮ ಹೆಬ್ಬಾರ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿ, ಕ್ಷೇತ್ರದ ಜನತೆಗೆ ಮೋಸ ಮಾಡಿದ್ದಾರೆ. ಇವರ ಅನ್ಯಾಯವನ್ನು ಜನರಿಗೆ ಮನದಟ್ಟು ಮಾಡುವ ಮೂಲಕ ಮತ ಯಾಚನೆಯ ಪ್ರಚಾರ ಕಾರ್ಯದ ಮೂಲಕ ಆಡಳಿತವನ್ನು ಪುನಃ ಕಾಂಗ್ರೆಸ್‌ ತೆಕ್ಕೆಗೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಸಾಲವೇ ಹೆಚ್ಚು 
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಭೀಮಣ್ಣ ನಾಯ್ಕ ಬಳಿ 8.81 ಕೋಟಿ ರು. ಚರ, 5.50 ಕೋಟಿ ಸ್ಥಿರಾಸ್ತಿ ಇದೆ. ಪತ್ನಿ ಗೀತಾ ಹೆಸರಲ್ಲಿ 51.34 ಲಕ್ಷ ರು. ಚರ, 19.58 ಕೋಟಿ ಸ್ಥಿರ, ಪುತ್ರ ಅಶ್ವಿನ್ ಬಳಿ 2.70 ಕೋಟಿ ಚರ, 1.25 ಕೋಟಿ ಸ್ಥಿರಾಸ್ತಿ ಇದೆ ಎಂದು ಅಫಿಡವಿಟ್‌ನಲ್ಲಿ ತೋರಿಸಿದ್ದಾರೆ. 

ಭೀಮಣ್ಣ ಬಳಿ 19.74 ಲಕ್ಷ, ಪತ್ನಿ ಬಳಿ 16.82 ಲಕ್ಷ, ಅಶ್ವಿನ್ ಬಳಿ 8.50 ಲಕ್ಷ ನಗದು ಇದೆ. ಮೂವರು ತಲಾ 3 ವಿವಿಧ ವಾಹನಗಳನ್ನು ಹೊಂದಿದ್ದಾರೆ. ಭೀಮಣ್ಣ ಅವರ ಬಳಿ 7.56 ಲಕ್ಷ ಮೌಲ್ಯದ ಬಂಗಾರ, ಪತ್ನಿಯ ಬಳಿ 19. ಲಕ್ಷ ರು. ಮೌಲ್ಯದ ಬಂಗಾರ, 1.12 ಲಕ್ಷ ಮೌಲ್ಯದ ಬೆಳ್ಳಿ, ಪುತ್ರನ ಬಳಿ 7.56 ಲಕ್ಷ ರು. ಮೌಲ್ಯದ ಬಂಗಾರವಿದೆ. ಭೀಮಣ್ಣ 14.82 ಕೋಟಿ, ಪತ್ನಿ 20.32 ಕೋಟಿ, ಪುತ್ರ 98.91 ಲಕ್ಷ ಸಾಲವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಮಾಡಿದ್ದಾರೆ.