ಯಲ್ಲಾಪುರ [ಅ.26]:  ಜಿಲ್ಲೆಯ ವಿಭಜನೆ ಸತ್ಯವಾದರೆ ಯಲ್ಲಾಪುರವನ್ನೇ ಜಿಲ್ಲಾ ಕೇಂದ್ರವನ್ನಾಗಿಸಬೇಕೆಂದು ಪಟ್ಟಣದ ಭಗತಸಿಂಗ್‌ ಆಟೋ ಮಾಲಕ ಮತ್ತು ಚಾಲಕ ಸಂಘ ಹಾಗೂ ವಿವಿಧ ಸಂಘಟನೆಯ ಸದಸ್ಯರು  ಆಟೋರಿಕ್ಷಾ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಮಾತನಾಡಿ, ಆಡಳಿತಾತ್ಮಕ ದೃಷ್ಟಿಯಿಂದ ಸರ್ಕಾರ ಜಿಲ್ಲೆಯ ವಿಭಜನೆಗೆ ಮುಂದಾದರೆ, ಘಟ್ಟದ ಮೇಲಿನ ತಾಲೂಕುಗಳಿಗೆ ಮಧ್ಯವರ್ತಿ ಸ್ಥಳವಾಗಿರುವ ಯಲ್ಲಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು. ಇದು ಘಟ್ಟದ ಮೇಲಿನ ಎಲ್ಲ ತಾಲೂಕುಗಳ ಬೇಡಿಕೆಯಾಗಿದೆ. ಎಲ್ಲಡೆಯಿಂದ ಜಿಲ್ಲಾ ವಿಭಜನೆಗೆ ಕೂಗು ಕೇಳಿ ಬಂದರೂ ಪಟ್ಟಣದ ಜನತೆ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪರಿಸರದ ಹೆಸರಿನಲ್ಲಿ ಬೇಡ್ತಿ ಯೋಜನೆ, ಕೈಗಾ ಯೋಜನೆ ಹಾಗೂ ಅಂಕೋಲಾ ಹುಬ್ಬಳ್ಳಿ ರೈಲ್ವೆ ಮಾರ್ಗಗಳನ್ನು ಕೈಬಿಡಲಾಗಿದೆ. 64 ಚದರ ಕಿಮೀ ವಿಸ್ತಾರವಾಗಿರುವ ಯಲ್ಲಾಪುರ ತಾಲೂಕು ಅಭಿವೃದ್ಧಿಪಡಿಸಲು ಸಾಕಷ್ಟುಅವಕಾಶಗಳಿವೆ. ಅಭಿವೃದ್ಧಿಗೆ ನಮ್ಮ ಧ್ವನಿ ಗಟ್ಟಿಗೊಳ್ಳದಿದ್ದರೆ ಪಟ್ಟಣಕ್ಕೆ ಸಿಗಲಿರುವ ಅವಕಾಶಗಳು ತಾನಾಗಿಯೇ ಕೈತಪ್ಪಿ ಹೋಗಲಿವೆ. ಆದ್ದರಿಂದ ಅಭಿವೃದ್ಧಿ ಹಾಗೂ ಇನ್ನಿತರ ತಾಲೂಕುಗಳ ಬೆಳವಣಿಗೆಗೆ ಯಲ್ಲಾಪುರವೇ ಜಿಲ್ಲಾ ಕೇಂದ್ರವಾಗಲು ಸೂಕ್ತ ಸ್ಥಳ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಪಂ ಅಧ್ಯಕ್ಷೆ ಭವ್ಯಾ ಶೆಟ್ಟಿಮಾತನಾಡಿ, ತಾವು ಸಂಪರ್ಕಿಸಿರುವ ಅನೇಕ ಹಳ್ಳಿಗಳ ಮಹಿಳೆಯರು ಯಲ್ಲಾಪುರ ಜಿಲ್ಲಾ ಕೇಂದ್ರವಾಗಬೇಕೆಂಬ ಬೇಡಿಕೆಯನ್ನು ಒಪ್ಪಿ ಹೋರಾಟದಲ್ಲಿ ತಾವು ಕೂಡ ಭಾಗಿಯಾಗುತ್ತೇವೆ ಎಂದಿದ್ದಾರೆ ಎಂದರು.

ಭಗತಸಿಂಗ್‌ ಆಟೋ ಮಾಲಕ ಮತ್ತು ಚಾಲಕ ಸಂಘದ ಅಧ್ಯಕ್ಷ ಸಂತೋಷ ನಾಯ್ಕ ಮಾತನಾಡಿ, ಘಟ್ಟದ ಮೇಲಿನ ತಾಲೂಕುಗಳ ಪೈಕಿ ಯಲ್ಲಾಪುರವೇ ಜಿಲ್ಲಾ ಕೇಂದ್ರವಾಗಲು ಅತಿ ಸೂಕ್ತ ಸ್ಥಳ. ಇಲ್ಲಿ ಅಭಿವೃದ್ಧಿಗೆ ಬಹಳ ಅವಕಾಶಗಳಿದ್ದರೂ, ಅದು ದುರ್ಲಬವೆನ್ನುವಂತಾಗಿದೆ. ಆದ್ದರಿಂದ ಸುತ್ತಮುತ್ತಲಿನ ಎಲ್ಲ ತಾಲೂಕುಗಳ ಹಿತದೃಷ್ಟಿಯಿಂದ ಯಲ್ಲಾಪುರ ಜಿಲ್ಲಾಕೇಂದ್ರವಾಗಬೇಕೆಂದು ಆಗ್ರಹಿಸಿದರು.

ತಹಸೀಲ್ದಾರ್‌ ವಿಶ್ವನಾಥ ಮೂಲಕ ಮುಖ್ಯಮಂತ್ರಿಗೆ ಬೇಡಿಕೆಯ ಮನವಿ ರವಾನಿಸಲಾಯಿತು. ಪಪಂ ಸದಸ್ಯರಾದ ಸತೀಶ ನಾಯ್ಕ, ಸೋಮೇಶ್ವರ ನಾಯ್ಕ, ಪುಷ್ಪಾ ನಾಯ್ಕ, ಮಾಜಿ ಸದಸ್ಯ ವಿನೋದ ತಳೇಕರ, ಲಾರಿ ಮಾಲಕರ ಸಂಘದ ಅಧ್ಯಕ್ಷ ಮಹೇಶ ನಾಯ್ಕ, ದಲಿತ ಸಂಘದ ಅಶೋಕ ಕೋರವರ, ಪ್ರಮುಖರಾದ ರವಿ ದೇವಾಡಿಗ, ಮಾರುತಿ ಭೋವಿವಡ್ಡರ, ನರಸಿಂಹ ಭಟ್ಟ, ಶಿವಯೋಗಿ ಕಾಂಬ್ಳೆ, ಮಾಲತೇಶ ಕಮ್ಮಾರ ಸೇರಿದಂತೆ 200ಕ್ಕೂ ಅಧಿಕ ಸಂಖ್ಯೆಯ ಆಟೋ ಚಾಲಕ-ಮಾಲಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.