ಅಯೋಧ್ಯೆಗೆ ಹೊರಟಿದ್ದ ನಮ್ಮನ್ನು ಬಂಧಿಸಿದ್ದರು: ಪೇಜಾವರ ಶ್ರೀ
ಉಡುಪಿ ಧರ್ಮ ಸಂಸತ್ ನಿರ್ಣಯಕ್ಕೆ ಹೆದರಿ ಯುಪಿ ಸರ್ಕಾರ ರಾಮಮಂದಿರದ ಬೀಗ ತೆರೆದಿತ್ತು. ಅಯೋಧ್ಯೆ ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ಉಡುಪಿಗೂ ರಾಮಮಂದಿರ ಹೋರಾಟಕ್ಕೂ ಇದ್ದ ನಂಟನ್ನು ಪೇಜಾವರ ಮಠದ ಶ್ರೀಗಳು ಸ್ಮರಿಸಿಕೊಂಡಿದ್ದಾರೆ.
ಉಡುಪಿ(ನ.10): 1985ರಲ್ಲಿ ನಮ್ಮ 3ನೇ ಪರ್ಯಾಯಾವಧಿಯಲ್ಲಿ ಉಡುಪಿಯಲ್ಲಿ ವಿಶ್ವ ಹಿಂದೂ ಪರಿಷತ್‌ನ 2ನೇ ಧರ್ಮಸಂಸದ್ ನಡೆಯಿತು. ಈ ಧರ್ಮಸಂಸದ್‌ನಲ್ಲಿ ಅಯೋಧ್ಯೆಯ ರಾಮಮಂದಿರಕ್ಕೆ ಅಂದಿನ ಉತ್ತರ ಪ್ರದೇಶ ಸರ್ಕಾರ ಹಾಕಿದ್ದ ಬೀಗವನ್ನು ಒಡೆಯುವುದಕ್ಕೆ ನಿರ್ಣಯಿಸಲಾಯಿತು. ಈ ನಿರ್ಣಯಕ್ಕೆ ಹೆದರಿ ಸರ್ಕಾರವೇ ಮಂದಿರದ ಬೀಗ ತೆರೆಯಿತು ಎಂದು ಪೇಜಾವರ ಶ್ರೀಗಳು ಉಡುಪಿಗೂ ರಾಮಮಂದಿರ ಹೋರಾಟಕ್ಕೂ ಇರುವ ಸಂಬಂಧವನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.
ಗೃಹಬಂಧನದಲ್ಲಿಡಲಾಗಿತ್ತು:
ಆ ನಂತರ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಸರ್ಕಾರವಿದ್ದಾಗ ನಾನೂ, ಪಲಿಮಾರು ಮಠದ ದಿವಂಗತ ಶ್ರೀ ವಿದ್ಯಾಮಾನ ತೀರ್ಥರು, ಅದಮಾರು ಮಠದ ದಿವಂಗತ ಶ್ರೀ ವಿಭುದೇಶ ತೀರ್ಥರು, ಕುಕ್ಕೆ ಸುಬ್ರಹ್ಮಣ್ಯ ಮಠದ ಆಗಿನ ಶ್ರೀ ವಿದ್ಯಾಭೂಷಣ ತೀರ್ಥರು ಮುಂತಾದ ಮಠಾಧೀಶರು ಅಯೋಧ್ಯೆಗೆ ಹೋಗಿದ್ದೇವು. ಈ ಮಧ್ಯೆ, ಅಯೋಧ್ಯೆ ಹೋರಾಟದಲ್ಲಿ 10 ಮಂದಿ ಹತ್ಯೆಯಾಯಿತು. ಆದ್ದರಿಂದ ನಮ್ಮನ್ನು ಪ್ರತಾಪ್‌ಗಡ್‌ನಲ್ಲಿ ಬಂಧಿಸಿ ಗೃಹ ಬಂಧನದಲ್ಲಿಡಲಾಯಿತು.
ಅಲ್ಲಿಂದ ನಮ್ಮನ್ನು ಕೆಲ ದಿನಗಳ ನಂತರ ಬಿಡುಗಡೆ ಮಾಡಲಾಯಿತು, ನಾನು ಮತ್ತು ವಿದ್ಯಾಭೂಷಣರು ಅಯೋಧ್ಯೆಗೆ ಹೊರಟೆವು. ನಮ್ಮನ್ನು ಅಲಹಾಬಾದ್‌ನಲ್ಲಿ ಮತ್ತೆ ಬಂಧಿಸಲಾಯಿತು. ಪೊಲೀಸರು ನಮ್ಮ ಸ್ನಾನ, ಪೂಜೆಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿದ್ದರು. ಆದರೆ ಹೊರ ಹೋಗುವುದಕ್ಕೆ ಮಾತ್ರ ಬಿಡಲಿಲ್ಲ. ನಾನು ಅಲ್ಲಿಂದಲೇ ಆಗಿನ ರಾಷ್ಟ್ರಪತಿ ವೆಂಕಟರಾಮನ್ ಅವರಿಗೆ ಪರಿಸ್ಥಿತಿ ವಿವರಿಸಿ ಪತ್ರ ಬರೆದೆ, ಅವರ ಆದೇಶದಂತೆ ನಮ್ಮನ್ನು ಬಿಡುಗಡೆ ಮಾಡಲಾಯಿತು. ನಾವು ಅಯೋಧ್ಯೆಗೆ ಹೋಗಿ ಬಂದೆವು ಎಂದಿದ್ದಾರೆ.
ಅಯೋಧ್ಯೆ ತೀರ್ಪು: ಸಂಧಾನದ ಮೂಲಕವೂ ವಿವಾದ ಬಗೆಹರಿಸಲು ನಡೆದಿತ್ತು ಪ್ರಯತ್ನ
1989ರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ಅಲ್ಲಿನ ದಲಿತರೊಬ್ಬರ ಕೈಯಿಂದ ಶಿಲಾನ್ಯಾಸ ನಡೆಸಲಾಯಿತು. ರಾಮಮಂದಿರ ಹಿಂದೂ ಸಮಾಜದ ಪ್ರತಿಯೊಬ್ಬರಿಗೂ ಸೇರಿದ್ದು ಎಂಬ ಸಂದೇಶ ಈ ಮೂಲಕ ಸಾರಲಾಯಿತು. ನಂತರ ಪ್ರಧಾನಿ ವಿ.ಪಿ. ಸಿಂಗ್ ಅವಧಿಯಲ್ಲಿ ಅನೇಕ ಬಾರಿ ಹಿಂದೂ ಮತ್ತು ಮುಸ್ಲಿಂ ನಾಯಕರ ನಡುವೆ ಸಂಧಾನ, ಸಭೆಗಳನ್ನು ನಡೆಸಲಾಯಿತು. ಆದರೆ ಅವೆಲ್ಲವೂ ವಿಫಲವಾದವು. ಕೊನೆಗೆ 1992ರಲ್ಲಿ ಪಿ.ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ, ಅಯೋಧ್ಯೆಯಲ್ಲಿ ಕರಸೇವೆ ನಡೆಯಿತು. ಅದರಲ್ಲಿ ನಾನೂ ಮತ್ತು ಉಡುಪಿಯ ಎಲ್ಲ ಅಷ್ಟಮಠಾಧೀಶರು ಭಾಗವಹಿಸಿದ್ದೆವು.
ಗುಂಬಜ್ ಒಡೆಯುವಾಗ ತಡೆಯಲು ಪ್ರಯತ್ನಿಸಿದೆವು:
ಆದರೆ ನಾವು ಸಂತರು ಮಸೀದಿಯನ್ನು ಮುಟ್ಟುವುದಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಲಿಖಿತ ಮಾತು ಕೊಟ್ಟಿದ್ದೆವು. ಆದರೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಉದ್ವಿಗ್ನಕ್ಕೊಳಗಾದ ಸಾವಿರಾರು ಮಂದಿ ಕರಸೇವಕರು ಮಸೀದಿಯ ಗುಂಬಜ್ ಹತ್ತಿ ಒಡೆಯತೊಡಗಿದರು. ನಾನು ಅದನ್ನು ತಡೆಯಲೆತ್ನಿಸಿದೆ. ಇದು ಸರ್ಕಾರಕ್ಕೆ ಕೊಟ್ಟಿದ್ದ ಮಾತಿನ ಉಲ್ಲಂಘನೆಯಾಗುತ್ತದೆ ಎಂದು ಮೈಕಿನಲ್ಲಿ ಎಚ್ಚರಿಸಿದೆ. ಆದರೆ ಯಾರೂ ಕೇಳಲಿಲ್ಲ. ಗುಂಬಜ್ ಉರುಳಿತು.
ಉರುಳಿದ ಗುಂಬಜ್ ಒಳಗಿತ್ತು ರಾಮನ ಪ್ರತಿಮೆ:
ಮರುದಿನ ನಾವು ಸಂತರೆಲ್ಲರೂ ಉರುಳಿದ ಗುಂಬಜ್ ಬಳಿಗೆ ಹೋದೆವು, ಅಲ್ಲಿ ರಾಮನ ಪ್ರತಿಮೆ ಸಿಕ್ಕಿತು. ಅದರ ಪೂಜೆ ನಿಲ್ಲುವುದು ಬೇಡ ಎಂದು ಅದನ್ನು ಅಲ್ಲಿಯೇ ಪ್ರತಿಷ್ಠೆ ಮಾಡಿದೆವು. ನಂತರ ನಮ್ಮ ಕಳೆದ 5ನೇ ಪರ್ಯಾಯಾವಧಿಯಲ್ಲಿ ಮತ್ತೆ ಧರ್ಮಸಂಸದ್ ಉಡುಪಿಯಲ್ಲೇ ನಡೆಯಿತು. ಮತ್ತು ರಾಮಮಂದಿರ ನಿರ್ಮಾಣದ ನಿರ್ಣಯ ಕೈಗೊಳ್ಳಲಾಗಿತ್ತು. ಅದಕ್ಕೆ ಪೂರಕವಾಗಿ ಈಗ ಕೋರ್ಟ್‌ನ ತೀರ್ಪು ಬಂದಿದೆ, ಎಲ್ಲವೂ ಸುಸೂತ್ರ ಆಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಮೊದಲ ಬಾರಿ ಶನಿವಾರ ತೀರ್ಪು!