ಉಡುಪಿಯ ಪೆರ್ಣಂಕಿಲ ಗ್ರಾಮದ ಹಳ್ಳಿ ಹುಡುಗಿ ಇದೀಗ ಭಾರತೀಯ ನೌಕಾಪಡೆಯ ಪೈಲೆಟ್ ಆಗಿ ಆಯ್ಕೆಯಾಗಿದ್ದಾರೆ. ಎಂಜಿನಿಯರಿಂಗ್ ಪದವಿ ಪೂರೈಸಿರುವ ಸೀಮಾ ನೌಕಾಪಡೆಯ ಪೈಲೆಟ್ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಉಡುಪಿ(ಜೂ.09) ಭಾರತೀಯ ನೌಕಾಪಡೆ ಸೇರಬೆಂಕ ಕನಸು ಕಂಡಿದ್ದ ಉಡುಪಿ ಜಿಲ್ಲೆಯ ಪೆರ್ಣಂಕಿಲ ಅನ್ನೋ ಪುಟ್ಟ ಗ್ರಾಮದ ಹುಡುಗಿ ಸೀಮಾ ತೆಂಡೂಲ್ಕರ್ ಮಾದರಿಯಾಗಿದ್ದಾರೆ. ಎಂಜಿನೀಯರಿಂಗ್ ಪದವಿ ಪಡೆದಿದ್ದರೂ ಭಾರತೀಯ ಶಸಸ್ತ್ರ ಪಡೆಯಲ್ಲಿ ದೇಶ ಸೇವೆ ಮಾಡಲು ಟೊಂಕ ಕಟ್ಟಿದ್ದ ಸೀಮಾ ತೆಂಡೂಲ್ಕರ್ ಇದೀಗ ಭಾರತೀಯ ನೌಕಾಪಡೆಯಲ್ಲಿ ಪೈಲೆಟ್ ಆಗಿ ಆಯ್ಕೆಯಾಗಿದ್ದಾರೆ. ಸದಾನಂದ್ ನಾಯಕ್ ಹಾಗೂ ಜಯಶ್ರಿ ತೆಂಡೂಲ್ಕರ್ ಪುತ್ರಿ ಸೀಮಾ ತೆಂಡೂಲ್ಕರ್ ತಮ್ಮ ಬಾಲ್ಯದ ಕನಸಿನಂತೆ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಪೈಲೆಟ್ ಆಗಿ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣವನ್ನು ಉಡುಪಿಯ ಹಿರಿಯಡ್ಕದಲ್ಲಿ ಪೂರೈಸಿದ ಸೀಮಾ ತೆಂಡೂಲ್ಕರ್ ಪಿಯುಸಿ ಪದವಿಯನ್ನು ಕಾರ್ಕಳದಲ್ಲಿ ಪೂರೈಸಿದ್ದಾರೆ. ಬಳಿಕ ಬೆಂಗಳೂರಿನ ಆರ್‌ವಿ ಕಾಲೇಜಿನಲ್ಲಿ ಎಂಜಿನೀಯರಿಂಗ್ ಪದವಿ ಪಡೆದಿದ್ದಾರೆ. ಪದವಿ ಎಂಜಿನೀಯರಿಂಗ್ ವಿಷಯದಲ್ಲಿ ಪಡೆದರೂ ಎಂಜಿನೀಯರ್ ಆಗಬೇಕು, ಲಕ್ಷ ಲಕ್ಷ ವೇತನ ಎಣಿಸಬೇಕು ಅನ್ನೋದು ಸೀಮಾ ತೆಂಡೂಲ್ಕರ್ ಗುರಿಯಾಗರಲಿಲ್ಲ. ದೇಶ ಸೇವೆ ಮಾಡಬೇಕು ಅನ್ನೋದೇ ಈಕೆಯ ಗುರಿಯಾಗಿತ್ತು. ಇದಕ್ಕಾಗಿ ಕಠಿಣ ಪರಿಶ್ರಮ ಪಟ್ಟಿದ್ದಾರೆ.
ಕೇರಳದ ನೇವಲ್ ಇಂಡಿಯಾ ಅಕಾಡೆಮಿಯಲ್ಲಿ ತರಬೇತಿಯಲ್ಲಿರುವ ಸೀಮಾ ತೆಂಡೂಲ್ಕರ್ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಸೀಮಾ ತಂದೆ ಸದಾನಂದ್ ನಾಯಕ್ ಕೃಷಿಕರಾಗಿದ್ದರೆ, ತಾಯಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಗಳ ಕನಸಿಗೆ ನೀರೆರೆದ ಪೋಷಕರು ಇದೀಗ ಹೆಮ್ಮೆಯಿಂದ ಮಗಳ ಸಾಧನೆಯನ್ನು ಕೊಂಡಾಡಿದ್ದಾರೆ.
ವಿದ್ಯಾಭ್ಯಾಸದ ನಡುವೆ ಎನ್‌ಸಿಸಿಯಲ್ಲೂ ಸೀಮಾ ತೆಂಡೂಲ್ಕರ್ ಸಕ್ರೀಯರಾಗಿದ್ದರು. 2022ರಲ್ಲಿ ದೆಹಲಿಯಲ್ಲಿನ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಗಾರ್ಡ್ ಆಫ್ ಆನರ್ ವಿಭಾಗದಲ್ಲಿ ಕರ್ನಾಟಕ ರಾಜ್ಯವನ್ನು ಸೀಮಾ ತೆಂಡೂಲ್ಕರ್ ಪ್ರತಿನಿಧಿಸಿದ್ದರು. ಸೀಮಾ ಸಾಧನೆಗೆ ಗ್ರಾಮಸ್ಥರು ಹಿರಿ ಹಿರಿ ಹಿಗ್ಗಿದ್ದಾರೆ. ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
