ಮಲ್ಪೆ ಬೋಟ್ ಕಣ್ಮರೆ ಪ್ರಕರಣ: ಮೀನುಗಾರರ ಸಾವಿಗೆ ನೌಕಾಪಡೆ ಕಾರಣವಾಯ್ತೆ..?
ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಹಡಗು ಪತ್ತೆಯಾಗಿದ್ದು, ಇದರ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ನೌಕಾಪಡೆ 4 ತಿಂಗಳು ಹುಡುಕಿದರೂ ಸಿಕ್ಕದ ಬೋಟು ಉಡುಪಿ MLA ಹುಡುಕಿದಾಗ 4 ದಿನಗಳಲ್ಲಿ ಸಿಕ್ಕಿದ್ದೇಗೆ ? ಅಂತಯೆಲ್ಲ ಅನುಮಾನಗಳನ್ನು ಮಾಜಿ ಸಚಿವರೊಬ್ಬರು ವ್ಯಕ್ತಪಡಿಸಿದ್ದಾರೆ.
ಉಡುಪಿ, [ಮೇ.04]: ಮಲ್ಪೆಯ ಮೀನುಗಾರರ ಬೋಟಿಗೆ [ಸುವರ್ಣ ತ್ರಿಭುಜ ಬೋಟ್] ನೌಕಪಡೆಯ ಹಡಗು ಡಿಕ್ಕಿ ಹೊಡೆದಿದ್ದು, ಈ ವಿಷಯವನ್ನು ಕೇಂದ್ರ ಸರ್ಕಾರ ಮುಚ್ಚಿಟ್ಟಿದೆ ಎಂದು ಮಾಜಿ ಸಚಿವರೊಬ್ಬರು ಪ್ರಮೋದ್ ಮದ್ವರಾಜ್ ಗಂಭೀರ ಆರೋಪ ಮಾಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಪೆಯ ಮೀನುಗಾರರ ಬೋಟಿಗೆ ನೌಕಪಡೆಯ ಹಡಗು ಡಿಕ್ಕಿಯಾಗಿರುವುದರಿಂದ ಕೇಂದ್ರ ಸರ್ಕಾರ, ಮೃತಪಟ್ಟ 7 ಮಂದಿ ಮೀನುಗಾರರ ಕುಟುಂಬಕ್ಕೆ ತಲಾ 20 ಲಕ್ಷ ರು. ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ನೌಕಾಪಡೆಯ ವಿರುದ್ಧ ಸುಪ್ರೀಂ ಕೋರ್ಟ್ ಗೆ ದೂರು ನೀಡುತ್ತೇನೆ ಎಂದು ಆಗ್ರಹಿಸಿದರು.
5 ತಿಂಗಳ ನಂತರ ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆ
ಡಿ.15ರಂದು ನಡೆದ ಈ ಘಟನೆ ಬಿಜೆಪಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಚ್ಚಿಟ್ಟಿತ್ತು. ಇದು ದೇಶದ್ರೋಹದ ಕೆಲಸ. ಇದರಲ್ಲಿ ಸ್ವತಃ ಕೇಂದ್ರ ರಕ್ಷಣಾ ಸಚಿವೆಯೇ ಭಾಗಿಯಾಗಿದ್ದಾರೆ.
ಡಿ.15ರಂದು ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟು ಮಹಾರಾಷ್ಟ್ರ ತೀರದಲ್ಲಿ ನಾಪತ್ತೆಯಾಗುತ್ತದೆ. ಅದೇ ದಿನ ಅದೇ ಪ್ರದೇಶದಲ್ಲಿ ನೌಕಾಪಡೆಯ ಹಡಗಿಗೆ ಯಾವುದೋ ಬೋಟು ತಾಗಿ ಹಾನಿಯಾಗುತ್ತದೆ.
ಅದ್ದರಿಂದ ಈ ಎರಡೂ ಘಟನೆಗಳು ಪರಸ್ಪರ ಸಂಬಂಧಪಟ್ಟಿವೆ ಎಂಬ ಸಾಮಾನ್ಯ ಜ್ಞಾನವೂ ನೌಕಪಡೆಗೆ ಇಲ್ಲವೇ? ನೌಕಾಪಡೆ 7 ಮೀನುಗಾರರನ್ನು ಕೊಂದು, ಅಂತಹ ಘಟನೆಯೇ ಆಗಿಲ್ಲ ಎನ್ನುತ್ತಿದೆ. ಅದಕ್ಕೆ ಜವಾಬ್ದಾರಿಯೇ ಇಲ್ಲವೇ ಎಂದು ಪ್ರಶ್ನಿಸಿದರು.
ನೌಕಾಪಡೆ 4 ತಿಂಗಳು ಹುಡುಕಿದರೂ ಸಿಕ್ಕದ ಬೋಟು ಉಡುಪಿ ಶಾಸಕರು ನೌಕಾಪಡೆಯ ಹಡಗಿನಲ್ಲಿ ಹೋಗಿ ಹುಡುಕಿದಾಗ 4 ದಿನಗಳಲ್ಲಿ ಬೋಟು ಹೇಗೆ ಪತ್ತೆಯಾಯಿತು? ನಮ್ಮ ನೌಕಪಡೆಯ ಅಷ್ಟು ದುರ್ಬಲವೇ ಎಂದು ಪ್ರಶ್ನಿಸಿದರು.