Asianet Suvarna News Asianet Suvarna News

Udupi : ಮಾನಸಿಕ ಅಸ್ವಸ್ಥೆ ಆಸ್ಪತ್ರೆಗೆ ದಾಖಲು, ನಿಟ್ಟುಸಿರು ಬಿಟ್ಟ ಸ್ಥಳೀಯರು

ತೆಂಕನಿಡಿಯೂರಿನ ಜನವಸತಿ ಪ್ರದೇಶದಲ್ಲಿ ಕನಿಷ್ಟ ಉಡುಗೆಯೊಂದಿಗೆ ಅಲೆದಾಡುತ್ತಾ, ಕಂಡಕಂಡವರಿಗೆ ಹಲ್ಲೆ ನಡೆಸುತ್ತಾ ಪರಿಸರದಲ್ಲಿ ದಾಂಧಲೆ ಎಬ್ಬಿಸುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಸೋಮವಾರ ರಾತ್ರಿ ರಕ್ಷಿಸಿ ದೊಡ್ಡಣಗುಡ್ಡೆಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

Mental illness Lady hospitalization natives sighed
Author
First Published Dec 6, 2022, 2:48 PM IST

ಉಡುಪಿ (ಡಿ.6): ತೆಂಕನಿಡಿಯೂರಿನ ಜನವಸತಿ ಪ್ರದೇಶದಲ್ಲಿ ಕನಿಷ್ಟ ಉಡುಗೆಯೊಂದಿಗೆ ಅಲೆದಾಡುತ್ತಾ, ಕಂಡಕಂಡವರಿಗೆ ಹಲ್ಲೆ ನಡೆಸುತ್ತಾ ಪರಿಸರದಲ್ಲಿ ದಾಂಧಲೆ ಎಬ್ಬಿಸುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಸೋಮವಾರ ರಾತ್ರಿ ರಕ್ಷಿಸಿ ದೊಡ್ಡಣಗುಡ್ಡೆಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಮೂಲಕ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. 

ಈ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಸ್ಥಳೀಯ ನಿವಾಸಿ ವಿಮಲಾ ಪೂಜಾರಿ (52) (Vimala Pujari) ಎಂದು ಗುರುತಿಸಲಾಗಿದೆ.  ಕಳೆದ ಎರಡು ವಾರದ ಹಿಂದೆ ಈಕೆಯ ಮಾನಸಿಕ ಅಸ್ವಸ್ಥತೆ (Mental Illness) ತೀವ್ರಗೊಂಡಿದ್ದು, ಸಮೀಪದ ಮನೆ. ಅಂಗಡಿ ಮುಂಗಟ್ಟುಗಳಿಗೆ ನುಗ್ಗುವುದು, ಬಾಟಲಿ ಒಡೆಯುವುದು, ಸಾರ್ವಜನಿಕರಿಗೆ ಹಲ್ಲೆ ನಡೆಸುವುದು, ಅವಾಚ್ಯ ಶಬ್ಧಗಳಿಂದ ನಿಂದಿಸುವ ಮೂಲಕ ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದರು. ಇನ್ನೊಂದು ವಿಶೇಷವೆಂದರೆ ಮಹಿಳೆ ಬೈಯ್ದಾಡುತ್ತಾ ಅಲೆದಾಡುವಾಗ ಆಕೆಯನ್ನೇ ಹಿಂಬಾಲಿಸಿಕೊಂಡು ಬರುವ ಆಕೆಯ ಸಾಕು ನಾಯಿಗಳು (Dogs) ಕೂಡಾ ಸಾರ್ವಜನಿಕರ ಮೇಲೆ ದಾಳಿ (Attack) ನಡೆಸಲು ಪ್ರಯತ್ನಿಸಿದ ಘಟನೆಗಳು ನಡೆದಿವೆ. ಹೀಗಾಗಿ ಸ್ಥಳಿಯರು ಅದರಲ್ಲೂ ಪರಿಸರದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಮನೆಯಿಂದ ಹೊರಗೆ ಬರಲು ಹೆದರುವ ಸನ್ನಿವೇಶ ಎದುರಾಗಿತ್ತು. 

ಉಡುಪಿ; ಮಾನಸಿಕ ಅಸ್ವಸ್ಥ ಯುವಕ ಗುಣಮುಖ, ಮಗನನ್ನು ಸ್ವೀಕಾರಿಸಲೊಪ್ಪದ ತಂದೆ!

ಮಕ್ಕಳಿಲ್ಲದ ಒಂಟಿಯಾಗಿದ್ದಕ್ಕೆ ಅಸ್ವಸ್ಥತೆ: ಪತಿ ತೀರಿಕೊಂಡ ಬಳಿಕ ಒಂಟಿ ಜೀವನ ನಡೆಸುತ್ತಿದ್ದ ವಿಮಲಾ ಅವರಿಗೆ ಮಕ್ಕಳಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ವಿಶು ಶೆಟ್ಟಿ (Vishu Shetty) ಅವರು ಮಲ್ಪೆಯ ಮಹಿಳಾ ಶುಶ್ರೂಷಕಿ ತನುಜಾ ಅವರೊಂದಿಗೆ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಕ್ಕೆ ಮುಂದಾದಾಗ ಮಹಿಳೆ ಹಲ್ಲೆಗೆ ಯತ್ನಿಸಿದಲ್ಲದೆ, ತೀವ್ರ ಪ್ರತಿರೋಧವನ್ನು ಒಡ್ಡಿದರು. ಕೊನೆಗೂ ಸಾರ್ವಜನಿಕರ ನೆರವಿನಿಂದ ಮಹಿಳೆಯನ್ನು ತನ್ನ ವಾಹನದಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ಕೊಂಡೊಯ್ಯಲು ವಿಶು ಶೆಟ್ಟಿ ಅವರು ಹರಸಾಹಸ ಪಡಬೇಕಾಯಿತು. ಮಹಿಳೆ ಮಾನಸಿಕ ಅಸ್ವಸ್ಥತೆಗೆ ಒಳಗಾಗಿ ಇಷ್ಟೊಂದು ಅನಾಹುತಗಳನ್ನು ಸೃಷ್ಟಿಸುತ್ತಿದ್ದರೂ ಸಮೀಪದಲ್ಲಿಯೇ ಇರುವ ಸಂಬಂಧಿಕರಿಂದ ಯಾವುದೇ ಸ್ಪಂದನೆ ಇಲ್ಲದಿರುವುದು ಬೇಸರದ ಸಂಗತಿ. ಸೂಕ್ತ ಕಾಲದಲ್ಲಿ ಮನೋರೋಗಕ್ಕೆ ಚಿಕಿತ್ಸೆ ಪಡೆಯದಿರುವುದು ಮಹಿಳೆಯ ಈ ಪರಿಸ್ಥಿತಿಗೆ ಕಾರಣವಾಗಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಪಂದಿಸದ ಸ್ಥಳೀಯಾಡಳಿತ: ಮಹಿಳೆಯಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಸ್ಥಳೀಯಾಡಳಿತಕ್ಕೆ (Local Administration) ಮಾಹಿತಿ ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ. ಮಹಿಳೆಯ ಸಂಬಂಧಿಕರು, ಸ್ಥಳೀಯಾಡಳಿತ, ಸರ್ಕಾರಿ ಇಲಾಖೆಗಳು ಮಾಡಬೇಕಾದ ಕಾರ್ಯವನ್ನು ಸೇವಾರೂಪದಲ್ಲಿ ನಡೆಸುತ್ತಿರುವ ವಿಶು ಶೆಟ್ಟಿ ಅವರಿಗೆ ಸ್ಥಳೀಯರು ಕೃತಜ್ಞತೆ ಸಲ್ಲಿಸಿದ್ದಾರೆ.  ಮಹಿಳೆಯ ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ ಕುಲಾಲ್ (Venkatesh Kulal) ಹಾಗೂ ಶುಶ್ರೂಷಕಿ ತನುಜಾ ಮಲ್ಪೆ ನೆರವಾದರು.

Udupi: 80 ವಯಸ್ಸಿನ ಅಜ್ಜಿಯ ಅತ್ಯಾಚಾರ ಮಾಡಿದವರಿಗೆ ಕಠಿಣ ಶಿಕ್ಷೆ: ಉಡುಪಿ ನ್ಯಾಯಾಲಯ ಆದೇಶ

ಮತ್ತೆ ಕಾಡಿದ ಪುನರ್ವಸತಿ ಸಮಸ್ಯೆ: ಜಿಲ್ಲೆಯಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯರಿಗೆ ಸರಕಾರಿ ಪುನರ್ವಸತಿ (Rehabitaion) ಸೌಕರ್ಯಗಳಿಲ್ಲದಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಬಗ್ಗೆ ಜಿಲ್ಲಾಡಳಿತ, ಸಂಬಂದಪಟ್ಟ ಇಲಾಖೆಗಳಿಗೆ ಸಾಕಷ್ಟು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವಿಮಲಾ ಪೂಜಾರಿ (Vimala Pujari) ಅವರಂತಹ ಪ್ರಕರಣಗಳು ಎದುರಾದಾಗ ಪುನರ್ವಸತಿ ಸಮಸ್ಯೆ ಕಾಡುತ್ತಿದೆ. ಇಂತಹ ರೋಗಿಗಳಿಗೆ ದೀರ್ಘಕಾಲ ಔಷಧೋಪಾಚಾರ, ಆರೈಕೆಯ ಅಗತ್ಯವಿರುತ್ತದೆ. ಮತ್ತೆ ಒಂಟಿಯಾಗಿ ಬಿಟ್ಟಲ್ಲಿ ರೋಗ ಮರುಕಳಿಸುವ ಅಪಾಯ ಒಂದೆಡೆಯಾದರೆ ಸರಿಯಾಗಿ ಸ್ಪಂದನೆ ಸಿಗದಿದಿದ್ದಲ್ಲಿ ಬದುಕು ದುರಂತದಲ್ಲಿ ಕೊನೆಗೊಂಡ ಅನೇಕ ಉದಾಹರಣೆಗಳಿವೆ. ಹೀಗಾಗಿ ಇಂತಹ ಮಹಿಳೆಯರಿಗೆ ನೆರವಾಗಲು ಸರಕಾರಿ ಇಲಾಖೆಗಳು, ಸಂಘ ಸಂಸ್ಥೆಗಳು ಕೂಡಲೇ ಮುಂದಾಗಬೇಕು ಎಂದು ವಿಶು ಶೆಟ್ಟಿ ಆಗ್ರಹಿಸಿದ್ದಾರೆ.

Follow Us:
Download App:
  • android
  • ios