ಉಡುಪಿ [ಅ.28]:  ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆ ಗೆ ತೆರಳಿದ್ದ 12 ಮಂದಿಯಿಂದ ಎರಡು ಬೋಟುಗಳು ಗೋವಾ ಸಮುದ್ರ ತೀರದಲ್ಲಿ ಕಳೆದ ಮೂರು ದಿನಗಳಿಂದ ಸಂಪರ್ಕಕ್ಕೆ ಸಿಗದೇ ಆತಂಕಕ್ಕೆ ಕಾಣವಾಗಿವೆ. 

ಇಲ್ಲಿನ ಮಿಥುನ್ ಕುಮಾರ್ ಎಂಬವರಿಗೆ ಸೇರಿರುವ ಸ್ವರ್ಣ ಜ್ಯೋತಿ ಮತ್ತು ಗಂಗಾ ಗಣೇಶ್ ಬೋಟುಗಳು ಅ.19ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರಳಿದ್ದವು. .24ರವರೆಗೆ  ಸಂಪರ್ಕದಲ್ಲಿದ್ದ ಬೋಟುಗಳು ಅಂದೇ ಸಂಜೆ 4.30ರ ಸುಮಾರಿಗೆ ಕೊನೆಯ ಕರೆ ಮಾಡಿದ್ದು, ಬಳಿಕ ಎರಡು ಬೋಟುಗಳ ಸಂಪರ್ಕ ಕಡಿತವಾಗಿದೆ. 

ಎರಡೂ ಬೋಟುಗಳು ಗೋವಾದ ವಾಸ್ಕೋ ಎಂಬಲ್ಲಿ ಮೀನುಗಾರಿಕೆ ನಡೆಸುತ್ತಿರುವುದಾಗಿ ಅದರಲ್ಲಿದ್ದ ಮೀನುಗಾರರು ತಿಳಿಸಿದ್ದರು. ಆದರೇ ಅದರ ನಂತರ ಆ ಎರಡೂ ಬೋಟುಗಳೊಂದಿಗೆ ಮೊಬೈಲ್ ಅಥವಾ ವಯರ್ ಲೆಸ್ ಯಾವುದೇ ರೀತಿಯ ಸಂಪರ್ಕ ಸಾಧ್ಯ ವಾಗಿಲ್ಲ ಎಂದು ಮಿಥುನ್ ಕುಮಾರ್ ತಿಳಿಸಿದ್ದಾರೆ.

ಎರಡೂ ಬೋಟುಗಳಲ್ಲಿ ತಲಾ 6 ಮಂದಿ ಮೀನುಗಾರರಿದ್ದಾರೆ. ಗಂಗಾಗಣೇಶ್ ಬೋಟಿನಲ್ಲಿ ಮುರುಡೇಶ್ವರದ ಪುರುಷೋತ್ತಮ ಮತ್ತು ಸ್ವರ್ಣಜ್ಯೋತಿ ಬೋಟಿನಲ್ಲಿ ಮಂಜುನಾಥ ತಾಂಡೇಲ (ಕ್ಯಾಪ್ಟನ್)ಆಗಿದ್ದು, ಕರಾವಳಿ ರಕ್ಷಣಾ ಪೋಲಿಸ್ ಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. 

ಸದ್ಯ ಕರಾವಳಿ ರಕ್ಷಣಾ ಪೋಲಿಸರು ಗೋವಾ ಪೋಲಿಸರಿಗೆ ಮಾಹಿತಿ ನೀಡಿದ್ದು ಹುಡಕಾಟ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. ಶುಕ್ರವಾರ ಗೋವಾದ ವಾಸ್ಕೋದಲ್ಲಿ ಮುಳುಗುತಿದ್ದ ರಾಮರಕ್ಷಾ ಎಂಬ ಬೋಟಿನಿಂದ 6 ಮಂದಿ ಮೀನುಗಾರನ್ನು ಗೋವಾ ಕರಾವಳಿ ಪೋಲಿಸರು ರಕ್ಷಿಸಿದ್ದರು. ಶನಿವಾರ ಗೋವಾ ಗಡಿಯಲ್ಲಿ ಅಪಾಯಕ್ಕೆ ಸಿಲುಕಿದ್ದ 2 ಬೋಟುಗಳಲ್ಲಿದ್ದ 28 ಮೀನುಗಾರನ್ನು ರಕ್ಷಿಸಲಾಗಿದೆ. 

 ಆದರೇ ಸ್ವರ್ಣಜ್ಯೋತಿ ಮತ್ತು ಗಂಗಾಗಣೇಶ್ ಬೋಟುಗಳೊಂದಿಗೆ ಎರಡು ದಿನಗಳಿಂದ ಯಾವುದೇ ಸಂಪರ್ಕ ಸಾದ್ಯವಾಗಿಲ್ಲದೇ ಇರುವುದು ಆತಂಕಕ್ಕೆ ಕಾರಣವಾಗಿದೆ.