ಮರುಜನ್ಮ ಪಡೆದ ಪತ್ನಿಗೆ ಜೋಡಿ ನಂ.1 ವೇದಿಕೆಯಲ್ಲಿ ಸೀರೆ ಕೊಟ್ಟು ಕಣ್ಣೀರು ತರಿಸಿದ 'ಅಮೃತಧಾರೆ' ಆನಂದ್
ಕಿರುತೆರೆ ನಟ ಆನಂದ್ ಅವರು, ಪತ್ನಿಯ ಮರುಜನ್ಮದ ಕುರಿತು ಮಾತನಾಡಿ, ಅವರಿಗೆ ಜೋಡಿ ನಂ.1 ವೇದಿಕೆಯಲ್ಲಿ ಸೀರೆ ಕೊಟ್ಟು ಎಲ್ಲರನ್ನೂ ಕಣ್ಣೀರಿನಲ್ಲಿ ಮುಳುಗಿಸಿದರು.
ಮಗುವಿಗೆ ಜನ್ಮ ನೀಡುವುದು ತಾಯಿಗೆ ಪುನರ್ಜನ್ಮ ಇದ್ದಂತೆ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಒಂಬತ್ತು ತಿಂಗಳು ಹೊಟ್ಟೆಯೊಳಗೆ ಇಟ್ಟುಕೊಂಡು ಮಗುವನ್ನು ಕಾಪಿಡುವ ತಾಯಿಯ ಗರ್ಭದಿಂದ ಮಗು ಹೊರಗೆ ಬರುವವರಿಗೂ ಆಕೆಗೆ ಇನ್ನಿಲ್ಲದ ಆತಂಕ. ಮಗು ಹುಟ್ಟುವಾಗ ಆಕೆ ಅನುಭವಿಸುವ ನೋವು, ಯಾತನೆ ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಆರೋಗ್ಯವಂತ ಮಗು ಹುಟ್ಟಿ ಇಬ್ಬರೂ ಆರೋಗ್ಯವಾಗಿದ್ದಾರೆಂದು ವೈದ್ಯರು ದೃಢೀಕರಿಸುವವರೆಗೂ ಮನೆಯವರಿಗೆಲ್ಲಾ ಆತಂಕವಾಗಿದ್ದರೆ, ಮಗು ಹುಟ್ಟಿ ಅದರ ಅಳು ಕೇಳಿದಾಗ ಆ ಕ್ಷಣದಲ್ಲಿ ತನ್ನೆಲ್ಲಾ ನೋವು ಮರೆತು ಮರುಜನ್ಮ ಪಡೆದ ಅನುಭವ ತಾಯಿಗೆ. ಇದನ್ನೇ ಕಿರುತೆರೆಯ ಖ್ಯಾತ ಕಲಾವಿದ ಆನಂದ್ ಅವರು ಜೋಡಿ ನಂಬರ್ 1 ಕಾರ್ಯಕ್ರಮದಲ್ಲಿ ಹೇಳಿದ್ದು, ಎಲ್ಲರ ಕಣ್ಣುಗಳನ್ನು ತೇವ ಮಾಡಿದೆ.
ಅಮೃತಧಾರೆ ಸೀರಿಯಲ್ನಲ್ಲಿ ನಾಯಕ ಗೌತಮ್ ಪಾತ್ರಧಾರಿಯಾಗಿ ನಟಿಸಿರುವ ಆನಂದ್ ಅವರ ರಿಯಲ್ ಹೆಸರು ಕೂಡ ಆನಂದ್. 'ಸಿಲ್ಲಿ ಲಲ್ಲಿ' ಧಾರಾವಾಹಿ ಮೂಲಕ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದ ನಟ ಆನಂದ್ ಅವರು ಇದೀಗ ತಮ್ಮ ಪತ್ನಿ ಚೈತ್ರಾ ಜೊತೆ ಜೀ ಟಿ.ವಿಯಲ್ಲಿ ಪ್ರಸಾರವಾಗ್ತಿರೋ ಜೋಡಿ ನಂಬರ್ 1 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಆನಂದ್ ಆಡಿದ ಮಾತುಗಳು ಕೇವಲ ಪತ್ನಿ ಚೈತ್ರಾ ಅವರಿಗೆ ಮಾತ್ರವಲ್ಲದೇ ಅಲ್ಲಿದ್ದ ತೀರ್ಪುಗಾರರ ಕಣ್ಣುಗಳನ್ನೂ ತೇವ ಮಾಡಿದ್ದು, ಅದರ ವಿಡಿಯೋ ವೈರಲ್ ಆಗಿದೆ.
KBC ವೇದಿಕೆಯಲ್ಲಿಯೇ ಕಣ್ಣೀರು ಹಾಕಿದ ಅಮಿತಾಭ್: ಅದೆಷ್ಟು ಅಂತ ನನ್ನ ಅಳಿಸುವಿರಿ ಎಂದ ಬಿಗ್-ಬಿ
ಹೆರಿಗೆ ಆದ್ಮೇಲೆ ಮಗುವನ್ನು ನೋಡದೆ ನನ್ನನ್ನು ನೋಡಲು ಬಂದರಲ್ಲ ಎಂದು ಚೈತ್ರಾ ಕೇಳಿದಾಗ, ಆನಂದ್ ಅವರು, ಅವಳು ಜನ್ಮ ಕೊಟ್ಟಾಗ ಮಗು ಹುಟ್ಟುತ್ತೆ, ಆದ್ರೆ ತಾಯಿ ಸತ್ತು ಹುಟ್ಟುತ್ತಾಳೆ ಎಂದು ಸೀರೆಯೊಂದನ್ನು ಉಡುಗೊರೆಯಾಗಿ ತಂದು ಕೊಡುತ್ತಾರೆ. ಆ ಮಾತಿಗೆ ಚೈತ್ರಾ ಬಿಕ್ಕಿ ಬಿಕ್ಕಿ ಅಳುತ್ತಾರೆ. ಗಂಡ ಕೊಡಿಸೋ ಸೀರೆ... ಹಿನ್ನೆಲೆಯಲ್ಲಿ ಹಾಡು ಬಂದ ಸಮಯದಲ್ಲಿ ಆನಂದ್ ಅವರು ಚೈತ್ರಾರಿಗೆ ಸೀರೆ ತಂದುಕೊಡುವಾಗ ಜಡ್ಜ್ಸ್ ಕೂಡ ಕಣ್ಣೀರು ಹಾಕುವುದನ್ನು ವಿಡಿಯೋದಲ್ಲಿ ನೋಡಬಹುದು.
ಇವರಿಬ್ಬರ ಜೀವನ ಹೋರಾಟವೂ ತುಸು ಕಷ್ಟವೇ ಆಗಿತ್ತು. ಚೈತ್ರಾ ಅವರು ದಪ್ಪ ಇರುವ ಕಾರಣದಿಂದ ಅವರಿಗೆ ಮಕ್ಕಳಾಗುವುದಿಲ್ಲ ಎಂದು ಆನಂದ್ ಅವರ ಮನೆಯವರು ಮದುವೆಗೆ ಒಪ್ಪದಿದ್ದರೆ, ಅವರು ಕಲಾವಿದ ಎಂದು ತಮ್ಮ ಮನೆಯಲ್ಲಿ ಮದುವೆಗೆ ಒಪ್ಪದನ್ನು ನೆನೆದು ಚೈತ್ರಾ ಕಣ್ಣೀರು ಹಾಕಿದ್ದರು. ಇದೀಗ ಈ ಜೋಡಿ ಆರು ವರ್ಷಗಳ ದಾಂಪತ್ಯ ಜೀವನವನ್ನು ಪುಟ್ಟ ಕಂದನ ಜೊತೆ ಆನಂದದಿಂದ ಕಳೆಯುತ್ತಿದೆ. ಈ ಹಿಂದೆ ಚೈತ್ರಾ, ಕೊರೋನಾ ಟೈಮ್‌ನಲ್ಲಿ ಸಾವು ಬದುಕಿನ ಬಗ್ಗೆ ಹೋರಾಟ ನಡೆಸಿದ್ದರು. ಆನಂದ್ ಅವರ ತಾಯಿ ಕೊರೋನಾದಿಂದ ಒಂದೆಡೆ ಆಸ್ಪತ್ರೆಗೆ ದಾಖಲಾಗಿದ್ದರೆ, ಇನ್ನೊಂದೆಡೆ ಪತ್ನಿ ಚೈತ್ರಾ. ಇವರಿಬ್ಬರನ್ನೂ ಉಳಿಸಿಕೊಳ್ಳಲು ಆನಂದ್ ಹೆಣಗಾಡಿದ್ದರು. ಕೊನೆಗೆ ಇಬ್ಬರೂ ಜೀವಾಪಾಯದಿಂದ ಪಾರಾದಾಗ ಖುದ್ದು ವೈದ್ಯರೂ ಚಕಿತಪಟ್ಟುಕೊಂಡಿದ್ದರಂತೆ. ಇದು ಕೂಡ ಪತ್ನಿಯ ಮರುಜನ್ಮ ಎಂದಿದ್ದರು ಆನಂದ್.
ಹೆಂಡ್ತಿಯನ್ನ 'ಇವ್ಳೇ' ಅಂತ್ಲೂ, ಗಂಡನನ್ನ 'ರೀ' ಅಂತ್ಲೂ ಕರೆಯೋದ್ಯಾಕೆ? ಲಕ್ಷ್ಮಿ ಬಾರಮ್ಮ ಗಂಗಾ-ಕೃಷ್ಣ ಹೇಳ್ತಾರೆ ಕೇಳಿ