'ಇವಳು ನನ್ನ ಮಗಳು ಅಂದರೆ ನನ್ನ ತಂಗಿ ಮಗಳು ಇಂಚರಾ. ಈಗ ಎರಡನೇ ವರ್ಷದ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದಾಳೆ. ಈಕೆಗೆ ಚೂರು ಮಾತು ಬುದ್ಧಿ ಬಂದಾಗಿನಿಂದ ಎಲ್ಲರನ್ನೂ ಮಾಸ್ಕ್ ನಲ್ಲಿ ನೋಡಿ ಮಾಸ್ಕ್ ಸ್ಯಾನಿಟೈಸರ್‌ ಅಷ್ಟು ಮಾತ್ರ ಚೆನ್ನಾಗಿ ಗೊತ್ತು. ಮನೆಯಿಂದ ಹೊರಗೆ ಹೊರಟರೆ ಮಾಸ್ಕ್ ಕೊಡಿ ಅಂತಾಳೆ..'

 ಹೀಗನ್ನುತ್ತಾ ಈ ಕಾಲದ ಹೊಸ ಪೀಳಿಗೆಯನ್ನು ಪರಿಚಯಿಸಿದ್ದಾರೆ ಬಿಗ್‌ಬಾಸ್ ನಟಿ ಅಕ್ಷತಾ ಪಾಂಡವಪುರ. ಇವರ ತಂಗಿಯ ಮಗು ಇಂಚರಾ ಬರ್ತ್ ಡೇ ನೆವದಲ್ಲಿ ಆಕೆಯ ಬಗ್ಗೆ ಹೇಳುತ್ತಾ ತಮಗರಿವಿಲ್ಲದಂತೇ ಹೊಸತೊಂದು ಪೀಳಿಗೆಯನ್ನು ಪರಿಚಯಿಸಿದ್ದಾರೆ. ಅದು ಮಾಸ್ಕ್ ಪೀಳಿಗೆ. ಕಳೆದ ವರ್ಷ 2016ರ ನಂತರದ ಪೀಳಿಗೆಯನ್ನು ಹೀಗೆ ಕರೆಯಬಹುದೋ ಏನೋ. ಏಕೆಂದರೆ ಈಗಷ್ಟೇ ಮಾತು ಕಲಿತು ತೊದಲು ನುಡಿಯುವ ಈ ಕಂದಮ್ಮಗಳು ಬುದ್ಧಿ ಒಂಚೂರು ಬೆಳೆಯುವ ಹೊತ್ತಿಗೇ ಕಂಡಿದ್ದು ಮಾಸ್ಕ್ ಮುಚ್ಚಿರುವ ಮುಖಗಳನ್ನು. ಜನರ ಮುಖದ ಅರ್ಧ ಭಾಗ ಮಾತ್ರ ಇವರಿಗೆ ನೋಡಿ ಗೊತ್ತು. 

ಸೈಡ್‌ ಎಫೆಕ್ಟ್ ಇಲ್ಲ, ಕಾಂತಿ ಹೆಚ್ಚುತ್ತೆ: ಪ್ಲಾಸ್ಮಾ ನೀಡೋದು ನನ್ನ ಜವಾಬ್ದಾರಿ ಎಂದ ನಟಿ ...

ಇತ್ತೀಚೆಗೆ ಸೆಲೆಬ್ರಿಟಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ರು. ಅವರ ನಾಲ್ಕೈದು ವರ್ಷದ ಮಗು ಟಿವಿ ನೋಡ್ತಾ ಇತ್ತು. ಟಿವಿಯಲ್ಲಿ ತನ್ನ ಅಮ್ಮನ ಸಿನಿಮಾ ಬಂದಾಗ ಕಣ್ಣರಳಿಸಿಕೊಂಡು ನೋಡಿ ಸಡನ್ನಾಗಿ ಶಾಕ್ ಆಗಿ ಒಂದು ಪ್ರಶ್ನೆ ಕೇಳಿತಂತೆ. 'ಅಮ್ಮಾ, ನಂಗೆ ಮಾಸ್ಕ್ ಹಾಕು ಅಂತ ಹೇಳ್ತೀಯಾ, ನಿನ್ನ ಸಿನಿಮಾದಲ್ಲಿ ಅಷ್ಟೊಂದು ಜನ ಒಟ್ಟಿಗಿದ್ರೂ ಯಾರೂ ಮಾಸ್ಕ್ ಹಾಕಿಕೊಂಡಿಲ್ಲ. ನೀನೂ ಹಾಕ್ಕೊಂಡಿಲ್ಲ' ಅಂತ. ಆ ಕಾಲದಲ್ಲಿ ಕೊರೋನಾ ಇರಲಿಲ್ಲ. ಆಗ ಯಾರೂ ಮಾಸ್ಕ್ ಹಾಕುತ್ತಿರಲಿಲ್ಲ ಅನ್ನೋದನ್ನು ಆ ಪುಟ್ಟ ಮಗುವಿಗೆ ವಿವರಿಸಬೇಕಾದ್ರೆ ಆ ಸೆಲೆಬ್ರಿಟಿ ತಾಯಿಗೆ ಸುಸ್ತು ಬಿದ್ದು ಹೋಗಿತ್ತಂತೆ. ಮಕ್ಕಳ ವಿಷಯ ಬಿಡಿ, ನಮಗೂ ಸಡನ್ನಾಗಿ ಸ್ಕ್ರೀನ್ ಮೇಲೆ ಜನ ಗುಂಪುಗೂಡೋದು ಕಂಡಾಗ ಅರೆ, ಯಾರೂ ಮಾಸ್ಕ್ ಹಾಕಿಲ್ಲವಲ್ಲ ಅಂತ ಶಾಕ್ ಆಗಿ ಆಮೇಲೆ ವಾಸ್ತವ ಅರಿವಿಗೆ ಬರುತ್ತೆ. 

ಇನ್ನು ಅಕ್ಷತಾ ಪಾಂಡವಪುರ ಅವರ ಪೋಸ್ಟ್‌ಗೆ ಬರೋದಾದ್ರೆ ಅವರು ತನ್ನ ತಂಗಿ ಮಗು ನೆವದಲ್ಲಿ ಬರೆದದ್ದು ಹೀಗೆ; 'ಪಾಪ ಈ ವಯಸ್ಸಿನ ಮಕ್ಕಳು ಓಹ್ ಜಗತ್ತು ಹೀಗೇ ಇರೋದೇನೋ, ಎಲ್ಲಾರೂ ಮೊದಲಿಂದಾನೂ ಮಾಸ್ಕ್ ಹಾಕ್ಕೊಂಡೇ ಓಡಾಡ್ತಿದ್ದಾರೇನೂ ಅಂತ ತಿಳ್ಕೊಂಡು ಬಿಟ್ಟಿದ್ದಾರೆ.'

ಕತ್ರಿನಾ ರಣಬೀರ್ ಬಿಕಿನಿ ಫೋಟೋ ಲೀಕ್‌ : ಸಲ್ಮಾನ್ , ದೀಪಿಕಾ ಪ್ರತಿಕ್ರಿಯಿಸಿದ್ದು ಹೀಗೆ! ...

ಅಕ್ಷತಾ ಅವರ ಈ ಮಾತನ್ನು ಬಹಳ ಮಂದಿ ಪ್ರಜ್ಞಾವಂತರು ಬೆಂಬಲಿಸಿದ್ದಾರೆ. ಕೊರೋನಾ ಕಾರಣಕ್ಕೆ ಮಾಸ್ಕ್‌ ಜನರೇಶನ್ ಎಂಬ ಹೊಸ ಪೀಳಿಗೆ ಹುಟ್ಟಿಕೊಂಡಿದೆ ಎಂಬುದನ್ನು ಅವರೂ ಒಪ್ಪಿಕೊಳ್ಳುತ್ತಾರೆ. ಈ ಪೀಳಿಗೆಯ ಮಕ್ಕಳಿಗೆ ಮಾಸ್ಕ್‌  ಬಟ್ಟೆಯಷ್ಟೇ ಅನಿವಾರ್ಯ, ಸ್ಯಾನಿಟೈಸರ್ ಅನ್ನೋದು ಊಟ, ತಿಂಡಿಯಷ್ಟೇ ಸಲೀಸು. ಈಗಷ್ಟೇ ಜಗತ್ತಿಗೆ ಕಾಲಿಡುತ್ತಿರುವ ಮಕ್ಕಳು ವಸ್ತುಸ್ಥಿತಿಯನ್ನು ಸುಲಭವಾಗಿ ಅಂಗೀಕರಿಸಿದ್ದಾರೆ. ಆದರೆ ಈ ವಯಸ್ಸಲ್ಲಿ ಸ್ವಚ್ಛಂದವಾಗಿ ಆಡಿ ಬೆಳೆದ, ಮಾಸ್ಕ್ , ಸ್ಯಾನಿಟೈಸರ್‌ನ ಹಂಗಿಲ್ಲದೇ ಆಡಿಕೊಂಡಿದ್ದ ದೊಡ್ಡವರ ಜನರೇಶನ್‌ಗೆ ಗಿಲ್ಟ್ ಕಾಡುತ್ತಿದೆ. ಎಳೆಯ ಮಕ್ಕಳ ಅಮೂಲ್ಯ ಬಾಲ್ಯವನ್ನೇ ಕೊರೋನಾ ಕಿತ್ತುಕೊಂಡಿದೆಯಲ್ಲಾ, ಈ ಮೂಲಕ ಅವರು ಈ ಕಾಲದ ಅಸಹಜತೆಯನ್ನೇ ಸಹಜ ಅಂದುಕೊಂಡುಬಿಟ್ಟಿದ್ದಾರಲ್ಲಾ ಅನ್ನುವುದು ಅವರ ಮತ್ತೊಂದು ಬೇಸರ. ಆದರೆ ಕೊರೋನಾ ಕಳೆದೆರಡು ವರ್ಷಗಳಿಂದ ಮುಂದುವರಿಯುತ್ತಿರುವುದನ್ನು ಕಂಡರೆ ನಮ್ಮ ಮುಂದಿನ ಬದುಕು ಹೊಸ ಪೀಳಿಗೆಯಂತೇ ಮಾಸ್ಕ್ ಸ್ಯಾನಿಟೈಸರ್‌ಗಳಲ್ಲೇ ಕಳೆದುಹೋಗಬಹುದೇನೋ ಎಂಬುದು ಮತ್ತೊಂದು ಆತಂಕ.

 ಇಂಥಾ ಆತಂಕದ ದಿನಗಳ ಕಳೆದು ಮಕ್ಕಳು ಮಾಸ್ಕ್ ಇಲ್ಲದೇ ಖುಷಿಯಾಗಿ ಆಟ ಆಡಿಕೊಂಡಿರಲಿ ಅನ್ನೋದು ಅಕ್ಷತಾ ಮಾತ್ರವಲ್ಲ ಎಲ್ಲ ಪ್ರಜ್ಞಾವಂತರ ಹಾರೈಕೆ. 

ನಿಮಗೇನು ತಾಕತ್ತಿದೆ ನನ್ನ ಕೇರ್ ಮಾಡೋಕೆ?; ಚಕ್ರವರ್ತಿಗೆ ಪ್ರಿಯಾಂಕಾ ತಿರುಗೇಟು! ...