ಲವರ್ ಇದ್ರೆ ಹೇಳಿಬಿಡು, ಮದ್ವೆ ಮಾಡಿಸ್ತೇನೆ ಅಂದೆ ಡ್ರೋನ್ಗೆ: ಪ್ರತಾಪನ ಹಾಡಿ ಹೊಗಳಿದ ಸ್ನೇಕ್ ಶ್ಯಾಮ್
ಬಿಗ್ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಕುರಿತು ಸ್ಪರ್ಧೆಯಿಂದ ಹೊರಕ್ಕೆ ಬಂದಿರುವ ಸ್ನೇಕ್ ಶ್ಯಾಮ್ ಹಾಡಿ ಕೊಂಡಾಡಿದ್ದಾರೆ. ಅವರು ಹೇಳಿದ್ದೇನು?
![Snake Shyam has praised Bigg Boss contestant Drone Pratap suc Snake Shyam has praised Bigg Boss contestant Drone Pratap suc](https://static-gi.asianetnews.com/images/01hcyjhnfjacz6fw1gf1p7637d/bbk10-snake-shyam--pratap_363x203xt.jpg)
ಬಿಗ್ ಬಾಸ್ ಕನ್ನಡ ಸೀಸನ್ 10ರ ಮೊದಲನೇ ವಾರದ ಎಲಿಮಿನೇಷನ್ ಕಳೆದ ಶನಿವಾರ ಮುಗಿದಿದೆ. ಸ್ನೇಕ್ ಶ್ಯಾಮ್ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿನ ತಮ್ಮ ಅನುಭವ ಹಾಗೂ ಸ್ಪರ್ಧಿಗಳ ಕುರಿತು ತಾವು ಕಂಡುಕೊಂಡ ವಿಷಯಗಳ ಬಗ್ಗೆ ಮಾತನಾಡಿದ್ದಾರೆ ಶ್ಯಾಮ್. ನಾವು ಈ ಭೂಮಿಗೆ ಬರುವಾಗ್ಲೇ ಟಿಕೆಟ್ ತಂದಿರ್ತೀವಿ, ತತ್ಕಾಲ್‌ನಲ್ಲಿ ಇರ್ತೀವಿ ಅಷ್ಟೇ. ಟಿಕೆಟ್ ಕನ್ಫರ್ಮ್ ಆದ ತಕ್ಷಣ ಹೊರಡ್ತೀವಿ ಎಂದು ತಾವು ಮನೆಯಿಂದ ಹೊರಬಂದಿದ್ದರ ಕುರಿತಾಗಿ ವಿವರಿಸಿದ್ದರು ಶ್ಯಾಮ್. ಬೇರೆಯವರನ್ನು ನೋಯಿಸಬಾರದು ಎಂಬ ನನ್ನ ಒಳ್ಳೆಯತನವೇ ನನಗೆ ಮುಳುವಾಯಿತು ಎನಿಸಿದೆ. ಬೇರೆಯವರನ್ನು ನಾನು ನಾಮಿನೇಟ್ ಮಾಡಿದರೆ ಅವರ ಮನಸ್ಸಿಗೆ ನೋವಾಗುತ್ತದೆ. ಆ ಕಾರಣಕ್ಕೆ ನನ್ನನ್ನೇ ನಾನು ನಾಮಿನೇಟ್ ಮಾಡಿಕೊಂಡೆ. ಆದರೆ, ಬಿಗ್ ಬಾಸ್ ಮನೆಯಲ್ಲಿ ಒಂದು ವಿಷಯ ಅರಿತುಕೊಂಡೆ. ಕಾಂಪಿಟೀಶನ್ ಅಂತ ಬಂದಾಗ, ಸ್ವತಃ ಅಣ್ಣತಮ್ಮಂದಿರೇ ಆಗಿದ್ದರೂ ಕಾಂಪಿಟೇಶನ್ ಮಾಡ್ಲೇಬೇಕು ಎಂದೂ ಹೇಳಿದ್ದರು.
ಇದೀಗ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಸ್ನೇಕ್ ಶ್ಯಾಮ್ ಅವರು ಸ್ಪರ್ಧಾಳುಗಳಲ್ಲಿ ಬಹಳ ಕೀಟಲೆಗೆ ಒಳಗಾಗಿರುವ ಡ್ರೋನ್ ಪ್ರತಾಪ್ ಬಗ್ಗೆ ಮಾತನಾಡಿದ್ದಾರೆ. ಡ್ರೋನ್ ಮಾಡುತ್ತಿರುವುದಾಗಿ ಹೇಳಿ ಹಲವು ವರ್ಷ ವೇದಿಕೆಯ ಮೇಲೆ ಗಣ್ಯಾತಿಗಣ್ಯರನ್ನು ನಂಬಿಸಿ ಲಕ್ಷಗಟ್ಟಲೆ ಹಣ ನೀಡುವಂತೆ ಮಾಡಿದ್ದ ಪ್ರತಾಪ್ ಅವರ ಬಗ್ಗೆ ಇನ್ನಿಲ್ಲದಷ್ಟು ಟ್ರೋಲ್ ಮಾಡಲಾಗುತ್ತಿದೆ ಬಿಗ್ಬಾಸ್ ಮನೆಯಲ್ಲಿ. ಜನರಿಗೆ ನಾನು ಯಾರು ನನ್ನ ಜೀವನ ಹೇಗಿದೆ ನನ್ನ ವ್ಯಕ್ತಿತ್ವ ಏನು ಅನ್ನೋದನ್ನು ಅರ್ಥ ಮಾಡಿಸಲು ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಪ್ರತಾಪ್ ಹೇಳಿಕೊಂಡಿದ್ದರೂ ಟ್ರೋಲ್ ಮಾತ್ರ ನಿಲ್ಲುತ್ತಲೇ ಇಲ್ಲ. ಅವರನ್ನು ತುಂಬಾ ಗೋಳು ಹೊಯ್ದುಕೊಳ್ಳಲಾಗುತ್ತಿದೆ. ಅದರ ಬಗ್ಗೆ ಬೇಸರದಿಂದ ಮಾತನಾಡಿದ್ದಾರೆ ಸ್ನೇಕ್ ಶ್ಯಾಮ್.
ಡ್ರೋನ್ ಪ್ರತಾಪ್ನನ್ನು ನಾನು ಡ್ರೋನ್ ಎಂದೇ ಕರೆಯುವುದು. ಆತ ನನ್ನನ್ನು ಅಪ್ಪಾಜಿ ಎಂದು ಕರೆಯುತ್ತಿದ್ದ. ತುಂಬಾ ಒಳ್ಳೆಯ ಹುಡುಗ. ಅಗಾಧ ಜ್ಞಾನ ಹೊಂದಿದ್ದಾನೆ. ಆದರೆ ಆತನನ್ನು ಬಿಗ್ಬಾಸ್ ಸ್ಪರ್ಧಿಗಳು ನಡೆಸಿಕೊಳ್ಳುವ ರೀತಿ ನೋಡಿದ್ರೆ ತುಂಬಾ ಬೇಜಾರಾಗುತ್ತದೆ. ಕಾಲೇಜಿಗೆ ಹೊಸದಾಗಿ ಸೇರುವ ಮಕ್ಕಳಿಗೆ ಹೇಗೆ ರ‍್ಯಾಗಿಂಗ್ ಮಾಡಲಾಗುತ್ತದೆಯೋ ಆ ರೀತಿ ಅವನನ್ನು ನಡೆಸಿಕೊಳ್ಳಲಾಗುತ್ತಿದೆ. ಆತ ಹೊರಗಡೆ ಏನಾದರೂ ಮಾಡಿಕೊಳ್ಳಲಿ, ಆದರೆ ಆತನಿಗೆ ಇರುವಷ್ಟು ತಿಳಿವಳಿಕೆ ಇನ್ನಾರಿಗೂ ಇಲ್ಲ ಎಂದೇ ಹೇಳಬಹುದು ಎಂದಿದ್ದಾರೆ ಶ್ಯಾಮ್.
ಪ್ರತಾಪ್ ಎಷ್ಟು ಬೇಕೋ ಅಷ್ಟು ಮಾತನಾಡುತ್ತಾನೆ. ಅವನ ಬಗ್ಗೆ ಕೇಳಿದೆ. ಅಪ್ಪ-ಅಮ್ಮನ ಬಗ್ಗೆ ಹೇಳಿದ. ತಂಗಿ ಈಗ ತಾನೇ ಕೆಲ್ಸಕ್ಕೆ ಸೇರಿಕೊಂಡಿದ್ದಾಳಂತೆ. ಅವನನ್ನು ನಡೆಸಿಕೊಳ್ಳುವ ರೀತಿ ನೋಡಿದ್ರೆ ನನಗೂ ಅಳು ಬರುತ್ತಿತ್ತು. ಆತ ಹೊರಗಡೆ ಏನಾದರೂ ಮಾಡಿಕೊಳ್ಳಲಿ. ಬಿಗ್ಬಾಸ್ಗೆ ಆತ ಸೆಲೆಕ್ಟ್ ಆಗಿದ್ದಾನೆ ಎಂದರೆ ಆತನ ಇನ್ನೊಂದು ಪ್ರತಿಭೆ ತೋರಿಸಲು ಅವಕಾಶ ಇದೆ. ಆದರೆ ಅಲ್ಲಿ ಆತನನ್ನು ತುಂಬಾ ಕೆಟ್ಟದ್ದಾಗಿ ನಡೆಸಿಕೊಳ್ತಿದ್ದಾರೆ. ಆತ ತುಂಬಾ ಡೀಸೆಂಟ್ ಹುಡುಗ. ಅದ್ಭುತ ಪ್ರತಿಭೆ ಇದೆ. ಡ್ಯಾನ್ಸ್ ಸಕತ್ ಮಾಡ್ತಾನೆ. ಹೃತಿಕ್ ರೋಷನ್ ಥರ ಮಾಡ್ತಾನೆ. ಹೆಣ್ಣುಮಕ್ಕಳ ಜೊತೆ ಸಕತ್ ರ್ಯಾಂಪ್ವಾಕ್ ಮಾಡಿದ್ದ. ಟ್ಯಾಲೆಂಟ್ ತುಂಬಾ ಇದೆ ಆತನಿಗೆ ಎಂದಿದ್ದಾರೆ ಸ್ನೇಕ್ ಶ್ಯಾಮ್.
ಮೈಸೂರಿನಲ್ಲಿಯೂ ಆತ ಒಮ್ಮೆ ಸಿಕ್ಕಿದ್ದ. ಅಲ್ಲಿ ಹೇಗೋ, ಇಲ್ಲಿಯೂ ಹಾಗೆ. ಒಟ್ಟಿನಲ್ಲಿ ಅವನು ಆರ್ಡಿನರಿ ಮ್ಯಾನ್ ಅಲ್ಲ. ಆದ್ರೆ ಜೋಕ್ ಮಾಡುವ ನೆಪದಲ್ಲಿ ಹರ್ಟ್ ಮಾಡ್ತಿದ್ದಾರೆ. ಜೋಕ್ ಎಂದರೆ ಹಾಸ್ಯ ಮಾಡಬೇಕು. ಆದರೆ ನೋವು ಕೊಡುತ್ತಿದ್ದಾರೆ ಎಂದರು. ಏನೂ ಕೇಳಿದ್ರೂ ನೋ ಕಮೆಂಟ್ ಅಂತಾನೆ, ಅಷ್ಟು ಡೀಸೆಂಟ್ ಮನುಷ್ಯ ಎಂದರು. ಯಾರಾದರೂ ಹುಡುಗಿಯನ್ನು ಲವ್ ಮಾಡ್ತಿದ್ಯಾ? ಲವರ್ ಇದ್ರೆ ಹೇಳಿಬಿಡು. ನಿಮ್ಮ ಮನೆಯಲ್ಲಿ ಹೇಳಿ ಮದ್ವೆ ಮಾಡಿಸ್ತೇನೆ ಎಂದೆ. ನಾಚಿಕೊಳ್ತನೇ ಇದ್ದ. ಹಾಗೇನೂ ಇಲ್ಲ ಎಂದ. ಯಾವುದರಲ್ಲಿಯೂ ಸಿಕ್ಕಿಹಾಕಿಕೊಳ್ಳಲ್ಲ. ತುಂಬಾ ಜಾಣ ಎಂದು ಡ್ರೋನ್ ಪ್ರತಾಪ್ ಅವರನ್ನು ಸ್ನೇಕ್ ಶ್ಯಾಮ್ ಹೊಗಳಿದ್ದಾರೆ.
BBK10 ಸ್ಪರ್ಧಿ ಸ್ನೇಕ್ ಶ್ಯಾಮ್: ಭೂಮಿಗೆ ಬರುವಾಗ್ಲೇ ಟಿಕೆಟ್ ತಂದಿರ್ತೀವಿ, ತತ್ಕಾಲ್‌ನಲ್ಲಿ ಇರ್ತೀವಿ ಅಷ್ಟೇ..