ಪ್ರಿಯಾ ಕೆರ್ವಾಶೆ

‘ವೀಕ್ಷಕನ ಕಣ್ಣಲ್ಲೊಂದು ಎಕ್ಸಾಯಿಟ್‌ಮೆಂಟ್‌ ಮೂಡಬೇಕು. ಆತನ ಕಣ್ಣು ಕುತೂಹಲದಲ್ಲಿ ಕಿರಿದಾಗಬೇಕು. ಅಷ್ಟಾದರೆ ನಮ್ಮ ಶ್ರಮ ಸಾರ್ಥಕ’

ಹೀಗಂದು ಸಣ್ಣಗೆ ನಗುತ್ತಾರೆ ಪ್ರಶಾಂತಿ ಮಾಲಿಸೆಟ್ಟಿ. ಇವರು ಮೂಲತಃ ಆಂದ್ರಾದವರು. ಪೂರ್ವ ಗೋದಾವರಿ ಜಿಲ್ಲೆಯಿಂದ ಬಂದು ಕನ್ನಡ ನೆಲದಲ್ಲಿ ಕಾಲೂರಿದವರು. ಇವರನ್ನು ನೀವು ನೇರವಾಗಿ ನೋಡಿರುವ ಸಾಧ್ಯತೆ ಕಡಿಮೆ. ಆದರೆ ಟಿವಿಯಲ್ಲಿ ಸೂಪರ್‌ ಮಿನಿಟ್‌, ತಕಧಿಮಿತಾ, ಡ್ಯಾನ್ಸಿಂಗ್‌ ಸ್ಟಾರ್‌ ಇತ್ಯಾದಿ ಕಾರ್ಯಕ್ರಮಗಳನ್ನು ನೋಡಿರಬಹುದು. ಈ ಕಾರ್ಯಕ್ರಮಗಳ ಹಿಂದಿನ ಸೂತ್ರಧಾರಿ ಈಕೆ. ಅಂದರೆ ಈ ಕಾರ್ಯಕ್ರಮಗಳಿಗೆ ಸರಿಯಾದ ವಿಷಯ ಆರಿಸಿ ಅವುಗಳು ಸಾಮಾನ್ಯ ಜನರಲ್ಲೂ ಬೆರಗು ಮೂಡಿಸುವಂತೆ ಮಾಡುವ ಕಂಟೆಂಟ್‌ ರೆಡಿ ಮಾಡುವುದು ಇವರ ತಂಡ. ಇವರ ಟೀಂನ ಹೆಸರು ‘ಪಿಕ್ಸೆಲ್‌’. ಈ ಟೀಂನವರು ಈಗಾಗಲೇ ಸಾವಿರ ಗಂಟೆಗಳ ಪ್ರೋಗ್ರಾಂ ನೀಡಿರುವುದು ಪುಟ್ಟಜರ್ನಿಯ ದೊಡ್ಡ ಸಾಧನೆ. ಜೊತೆಗೆ ಮಲೆಯಾಳ, ತಮಿಳು, ತೆಲುಗು ಭಾಷೆಗಳಲ್ಲೂ ಇಂಥಾ ಕಾರ್ಯಕ್ರಮ ಮಾಡಲು ಮುಂದಾಗುತ್ತಿರುವುದು ಸಾಧನೆಯ ಮತ್ತೊಂದು ಮೈಲಿಗಲ್ಲು.

'ಟಗರು ಪುಟ್ಟಿ' ಮಾನ್ವಿತಾ ಫೋನ್‌ ನೋಡ್ರಿ, ಸೀಕ್ರೆಟ್‌ ಮಾತ್ರವಲ್ಲ ವೆಯ್ಟ್ ಗೊತ್ತಾಗುತ್ತೆ!

ಬ್ಯಾಂಕಿಂಗ್‌ ಉದ್ಯೋಗಿಯ ನಾನ್‌ಫಿಕ್ಷನ್‌ ಜರ್ನಿ

ಕಿರುತೆರೆಯಲ್ಲಿ ಸೀರಿಯಲ್‌ಗಳದು ಒಂದು ಜಗತ್ತಾದರೆ, ಗೇಮ್‌ ಶೋ, ಡ್ಯಾನ್ಸ್‌, ಹಾಸ್ಯ ಇತ್ಯಾದಿಗಳನ್ನೊಳಗೊಂಡ ನಾನ್‌ಫಿಕ್ಷನ್‌ನದು ಮತ್ತೊಂದು ಲೋಕ. ಸಾಮಾನ್ಯವಾಗಿ ಸೀರಿಯಲ್‌ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳು ತೊಡಗಿಸಿಕೊಂಡಿದ್ದಾರೆ. ನಾನ್‌ಫಿಕ್ಷನ್‌ನಲ್ಲಿ ಹುಡುಗಿಯರು ಅಪರೂಪ. ಪ್ರಶಾಂತಿ ಮಾಲಿಸೆಟ್ಟಿಅಂಥ ಅಪರೂಪಗಳಲ್ಲೊಬ್ಬರು. ಒಂದು ನಾನ್‌ಫಿಕ್ಷನ್‌ ಟೀಮ್‌ಅನ್ನೇ ಕಟ್ಟಿಬೆಳೆಸಿ ಗೆಲುವಿನ ನಗೆ ಬೀರುತ್ತಿರುವ ಹೆಣ್ಣುಮಗಳು.

ಬ್ಯಾಂಕಿಂಗ್‌ ಫೀಲ್ಡ್‌ನಲ್ಲಿದ್ದವರಿಗೆ ನಾನ್‌ಫಿಕ್ಷನ್‌ ಕಾರ್ಯಕ್ರಮ ಮಾಡ್ಬೇಕು ಅನಿಸಿದ್ದು ಹೇಗೆ ಅಂದರೆ, ‘ಅದೊಂದು ಆಕಸ್ಮಿಕ’ ಅಂತಾರೆ ಪ್ರಶಾಂತಿ. ಮ್ಯಾನೇಜ್‌ಮೆಂಟ್‌ ವಿಷಯ ಓದಿದ ಪ್ರಶಾಂತಿ ಮುಂದೆ ಬ್ಯಾಂಕಿಂಗ್‌ ಕ್ಷೇತ್ರ ಸೇರುತ್ತಾರೆ. ಸುಮಾರು 10 ವರ್ಷ ಆ ಫೀಲ್ಡ್‌ನಲ್ಲಿ ದುಡಿಯುತ್ತಾರೆ. ಬೆಳಗ್ಗಿಂದ ಸಂಜೆಯವರೆಗೂ ಅದೇ ಕೆಲಸ. ಏಕತಾನತೆಗೆ ಬಹಳ ಬೇಗ ಕೆಲಸದಲ್ಲಿ ಬೋರ್‌ ಬಂತು. ಒಂದು ದಿನ ರಿಸೈನ್‌ ಲೆಟರ್‌ ಕೊಟ್ಟು ಹೊರ ಬಂದು ಬಿಟ್ಟರು.

ಸೆಲಬ್ರೇಶನ್‌ ಅನ್ನುವುದು ಕನ್ನಡ ಕಿರುತೆರೆಗೆ ಬೇಕಿತ್ತು. ಆದರೆ ಇಲ್ಲಿನ ಫಿನಾಲೆಗಳು ಕೂಡ ಕೇವಲ ವಿಜೇತರನ್ನು ಘೋಷಿಸುವುದಕ್ಕೇ ಮುಗಿದುಹೋಗುತ್ತಿತ್ತು. ಆದರೆ ಫಿಲಾನೆಗೆ ಒಂದು ಗ್ರ್ಯಾಂಡ್‌ ಸೆಲೆಬ್ರೇಶನ್‌ ಕಾಂಸೆಪ್ಟ್‌ಅನ್ನು ಸಿದ್ಧಪಡಿಸಿದ ಹೆಮ್ಮೆ ನಮ್ಮದು. ಇದು ನನ್ನೊಬ್ಬಳ ಕೆಲಸ ಅಲ್ಲ, ನಮ್ಮ ಟೀಂನ ಕೆಲಸ. ಪಿಕ್ಸೆಲ್‌ ಮುನ್ನಡೆಸಲು ಬಹಳ ಹೆಮ್ಮೆ ಇದೆ. - ಪ್ರಶಾಂತಿ ಮಾಲಿಸೆಟ್ಟಿ, ಪಿಕ್ಸೆಲ್‌ ಸ್ಥಾಪಕಿ ಮತ್ತು ಸಿಇಓ

ಹೊರಬಂದ ಮೇಲೆ ಶುರುವಾದದ್ದು ನಿಜವಾದ ಚಾಲೆಂಜ್‌. ಮುಂದೆ ಏನು ಮಾಡಲಿ ಅನ್ನೋದನ್ನು ಯೋಚಿಸುತ್ತಲೇ ಒಂದು ವರ್ಷ ಕಳೆದು ಹೋಯ್ತು. ಆದರೆ ಆ ಹೊತ್ತಿಗೆ ನಾನ್‌ಫಿಕ್ಷನ್‌ ಕ್ಷೇತ್ರದ ಒಂದಿಷ್ಟುಜನ ಗೆಳೆಯರು ಸಿಕ್ಕರು. ಆ ಕ್ಷೇತ್ರದ ಬಗ್ಗೆ ಒಂದಿಷ್ಟುತಿಳಿಯಿತು. ನಾನ್‌ಫಿಕ್ಷನ್‌ ಫೀಲ್ಡ್‌ನತ್ತ ನಿಧಾನಕ್ಕೆ ಆಸಕ್ತಿ ಬೆಳೆಯುತ್ತಾ ಹೋಯ್ತು. ಅವರು ಒಂದಿಷ್ಟುತಳಮಟ್ಟದಲ್ಲಿ ತಯಾರಿಗೆ ಆರಂಭಿಸಿದರು. ವಿಶ್ವಮಟ್ಟದ ಟಿವಿ ಕಾರ್ಯಕ್ರಮಗಳನ್ನು ನೋಡತೊಡಗಿದರು.

ಆಗ ನಮ್ಮ ಕನ್ನಡದಲ್ಲಿ ನಾನ್‌ಫಿಕ್ಷನ್‌ ಕಾರ್ಯಕ್ರಮಗಳಲ್ಲಿ ಏನು ಕೊರತೆ ಇದೆ ಮತ್ತು ಆ ಕೊರತೆಯನ್ನು ಹೇಗೆ ತುಂಬಬಹುದು ಅನ್ನೋ ಐಡಿಯಾ ಸಿಕ್ಕಿತು. ಹಾಗೆ ಹುಟ್ಟಿದ್ದು ‘ಪಿಕ್ಸೆಲ್‌’ ಅನ್ನುವ ಸಂಸ್ಥೆ. ಇದಾಗಿ ಆರು ವರ್ಷಗಳೇ ಕಳೆದಿವೆ.

‘ಆರಂಭದ ದಿನಗಳಲ್ಲಿ ಕನ್ನಡದಲ್ಲಿ ನಾನ್‌ಫಿಕ್ಷನ್‌ನಲ್ಲಿ ಒಂದು ಸಿದ್ಧ ಮಾದರಿ ಸಿಗುತ್ತಲೇ ಇರಲಿಲ್ಲ. ವಲ್ಡ್‌ರ್‍ ಲೆವೆಲ್‌ನಲ್ಲಿ, ಹಿಂದಿಯಲ್ಲೆಲ್ಲ ಈ ಬಗೆಯ ಕಾರ್ಯಕ್ರಮಗಳಿದ್ದವು. ಅವುಗಳಿಂದ ಪ್ರೇರಣೆ ಪಡೆದು ಇಲ್ಲಿ ಕಾರ್ಯಕ್ರಮಕ್ಕೆ ಕಂಟೆಂಟ್‌ ಒದಗಿಸಲಾರಂಭಿಸಿದೆವು. ಕ್ರಮೇಣ ಈ ಕ್ಷೇತ್ರದಲ್ಲಿ ನಮಗೆ ಹಿಡಿತ ಸಿಗುತ್ತ ಹೋಯ್ತು. ಕ್ರಮೇಣ ಸ್ವತಂತ್ರ ನೆಲೆಯಲ್ಲಿ ಕಾರ್ಯಕ್ರಮ ರೂಪಿಸುತ್ತಾ ಬಂದೆವು’ ಎಂದು ತಮ್ಮ ಜರ್ನಿಯನ್ನು ವಿವರಿಸುತ್ತಾರೆ ಪ್ರಶಾಂತಿ.

ಸೂಪರ್‌ ಮಿನಿಟ್‌ನಂಥಾ ಗೇಮ್‌ ಶೋನಿಂದ ಆರಂಭವಾದ ಪಿಕ್ಸೆಲ್‌ನ ಜರ್ನಿಯಲ್ಲಿ ತಕಧಿಮಿತಾ, ಹಳ್ಳಿ ಹೈದ ಪ್ಯಾಟೆಗ್‌ ಬಂದ, ಡ್ಯಾನ್ಸಿಂಗ್‌ ಸ್ಟಾರ್‌ ಇತ್ಯಾದಿ ಕಾರ್ಯಕ್ರಮಗಳು ಒಂದಾದ ಮೇಲೊಂದು ಸೇರುತ್ತಲೇ ಹೋದವು. ಜೊತೆಗೆ ಸೀರಿಯಲ್‌ ಸಂತೆಯಂಥಾ ಇವೆಂಟ್‌ಗಳೂ ಸೇರಿಕೊಂಡವು. ಹೀಗೆ ಈಗ ಸಾವಿರ ಗಂಟೆಗಳಷ್ಟುಅವಧಿಯ ಕಾರ್ಯಕ್ರಮ ನೀಡಿದ ಖ್ಯಾತಿ ಈ ತಂಡದ್ದು.

16 ಗಂಟೆ ದುಡಿಯೋದೂ ಇದೆ

ಶೂಟಿಂಗ್‌ ಇದ್ದಾಗ ಪ್ರಶಾಂತಿ ಅವರ ‘ಪಿಕ್ಸೆಲ್‌’ ಟೀಂ ದಿನದಲ್ಲಿ 16 ಗಂಟೆ ದುಡಿಯೋದು ಇದೆ. ‘ಅಷ್ಟುಅವಧಿಯಲ್ಲಿ ಶೇ.90 ರಷ್ಟುಸಮಯ ನಿಂತುಕೊಂಡೇ ಇರಬೇಕಾಗುತ್ತೆ. ನಮ್ಮ ಟೀಮ್‌ನಲ್ಲಿ ಎಷ್ಟೋ ಜನ ನಾಲ್ಕೈದು ವರ್ಷಗಳಿಂದ ಯಾವ ಹಬ್ಬಗಳಿಗೂ ರಜೆ ತಗೊಂಡಿಲ್ಲ. ಆ ಹೊತ್ತಿಗೇ ನಮಗೆ ಹೆಚ್ಚು ಕೆಲಸ. ಅಷ್ಟಾದರೂ ನಮಗೆ ಇದು ಕಷ್ಟಅಂತ ಅನಿಸಿಲ್ಲ. ಶೂಟಿಂಗ್‌ ಎಲ್ಲ ಮುಗಿದ ಮೇಲೆ ಸಿಗುವ ತೃಪ್ತಿಯ ಮುಂದೆ ಈ ಕಷ್ಟಗಳೆಲ್ಲ ಯಾವ ಲೆಕ್ಕ!’ ಅನ್ನೋದು ಪ್ರಶಾಂತಿಯ ಪ್ರಾಮಾಣಿಕ ಮಾತು.

ಕುಣಿತ ಗೊತ್ತಿಲ್ಲದವನು ಇಲ್ಲಿ ಅದ್ಭುತ ಡ್ಯಾನ್ಸರ್‌ ಆಗ್ತಾನೆ!

ಪ್ರಶಾಂತಿ ಅವರಿಗೆ ಸೀರಿಯಲ್‌ಗಳೂ ಇಷ್ಟ, ಕಾರ್ಯಕ್ರಮಗಳೂ ಇಷ್ಟ. ಇವರ ತಂಡ ಈಗಾಗಲೇ ‘ತುಳಸೀದಳ’ ಎಂಬ ಸೀರಿಯಲ್‌ಗೂ ಕಂಟೆಂಟ್‌ ಒದಗಿಸಿದೆ. ಆದರೆ ಇವರು ನಾನ್‌ಫಿಕ್ಷನ್‌ ಕಾರ್ಯಕ್ರಮಗಳನ್ನು ಹೆಚ್ಚು ಇಷ್ಟಪಡಲು ಕಾರಣ ಬೇರೊಂದಿದೆ. ‘ನಾನ್‌ಫಿಕ್ಷನ್‌ ಕಾರ್ಯಕ್ರಮಗಳಲ್ಲಾದರೆ ಸಾಮಾನ್ಯ ಜನರ ಜೊತೆ ನೇರವಾಗಿ ಬೆರೆಯಬಹುದು. ನನಗೆ ಮೊದಲಿಂದಲೂ ಮ್ಯಾನೇಜ್‌ಮೆಂಟ್‌ ಇಷ್ಟ. ನಾನು ಓದಿದ್ದೂ ಇದೇ ವಿಷಯ. ಹಾಗಾಗಿ ನಾನ್‌ಫಿಕ್ಷನ್‌ ಹೃದಯಕ್ಕೆ ಹತ್ತಿರ’ ಅನ್ನುವ ಈಕೆ ಕಿರುತೆರೆಯ ಸೀರಿಯಲ್‌ಗಳು ಹಾಗೂ ಕಾರ್ಯಕ್ರಮಗಳ ನಡುವೆ ಒಂದು ಸಾಮ್ಯತೆ ಗಮನಿಸಿದ್ದಾರೆ. ಅದು ಕತೆ. ಸೀರಿಯಲ್‌ನಲ್ಲಿ ಒಂದು ವಾರ ಬಿಟ್ಟು ನೋಡಿದರೂ ಅದೇ ಕಥೆ ಇರುತ್ತೆ. ಆದರೆ ಇಲ್ಲಿ ದಿನಕ್ಕೊಂದು ಕತೆ ಇರುತ್ತೆ. ಡ್ಯಾನ್ಸೇ ಗೊತ್ತಿಲ್ಲದ ಒಬ್ಬ ಈ ವೇದಿಕೆಯಲ್ಲಿ ಡ್ಯಾನ್ಸರ್‌ ಆಗಿ ಬದಲಾಗ್ತಾನೆ. ಸಂಗೀತ ಅಭ್ಯಾಸ ಮಾಡದವರು ಮಹಾನ್‌ ಗಾಯಕರಾಗಿ ಹೊರಹೊಮ್ಮುತ್ತಾರೆ. ಡ್ಯಾನ್ಸ್‌ ಬಗ್ಗೆ ಪ್ರಾಥಮಿಕ ಜ್ಞಾನವೂ ಇಲ್ಲದವರು ಅದ್ಭುತ ಡ್ಯಾನ್ಸರ್‌ಗಳಾಗಿ ಹೊರಹೊಮ್ಮುತ್ತಾರೆ. ಇದೆಲ್ಲ ನಾನ್‌ಫಿಕ್ಷನ್‌ನಲ್ಲಾಗುವ ಮ್ಯಾಜಿಕ್‌ ಅನ್ನೋದು ಪ್ರಶಾಂತಿ ಅಭಿಪ್ರಾಯ.

ಮೂಗಿ ಹುಡುಗಿಗೆ ಮಾತು ಕೊಟ್ಟಕಾರ್ಯಕ್ರಮ

ಆರು ವರ್ಷಗಳ ಜರ್ನಿಯಲ್ಲಿ ಪ್ರಶಾಂತಿ ಮರೆಯಲಾರದ ಒಂದು ಘಟನೆ ಇದೆ. ಅದು ಸೂಪರ್‌ ಮಿನಿಟ್‌ ಕಾರ್ಯಕ್ರಮದ ಫಿನಾಲೆ. ಅಲ್ಲೊಬ್ಬ ಸ್ಪರ್ಧಿ ಹುಡುಗಿಗೆ ಕಿವಿ ಕೇಳುತ್ತಿರಲಿಲ್ಲ. ಬಾಯಿಯೂ ಬರುತ್ತಿರಲಿಲ್ಲ. ಆದರೆ ಈ ಕಾರ್ಯಕ್ರಮದಲ್ಲಿ ಅವಳಿಗೆ 10 ಲಕ್ಷ ರು. ಸಿಕ್ಕಿತು. ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರೂ ನೆರವು ನೀಡಿದರು. ಒಟ್ಟು 15 ಲಕ್ಷ ರು. ಸಂಗ್ರಹವಾಯಿತು. ಈ ಹಣದಲ್ಲಿ ಆ ಹುಡುಗಿಗೆ ಆಪರೇಶನ್‌ ಆಯ್ತು. ಇದಾಗಿ ಒಂದು ವರ್ಷದಲ್ಲಿ ಅವಳಿಗೆ ಕಿವಿ ಕೇಳಿಸಲಾರಂಭಿಸಿತು. ನಿಧಾನಕ್ಕೆ ಮಾತುಗಳೂ ಬರತೊಡಗಿದವು. ಆಕೆ ಇಡೀ ಕಾರ್ಯಕ್ರಮದ ಬಗ್ಗೆ ಮನದುಂಬಿ ಮಾತನಾಡಿದ ಕ್ಷಣ ತನಗೆ ಬದುಕಿನಲ್ಲಿ ಮರೆಯಲಾರದ ಕ್ಷಣ ಅನ್ನುತ್ತಾರೆ ಪ್ರಶಾಂತಿ.