ಶ್ರೀರಸ್ತು ಶುಭಮಸ್ತು ವಿಲನ್ ಶಾರ್ವರಿ ಇಷ್ಟು ಚಿಕ್ಕವರಾ? ಸೀರಿಯಲ್ ತಂಡದ ಜೊತೆ ಬೊಂಬಾಟ್ ರೀಲ್ಸ್
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ವಿಲನ್ ಶಾರ್ವರಿಯಾಗಿ ನಟಿಸ್ತಿರೋ ನೇತ್ರಾ ಜಾಧವ್ ರಿಯಲ್ ಲೈಫ್ ಹೇಗಿದೆ?
ಧಾರಾವಾಹಿಗಳಲ್ಲಿ ನೋಡುವ ಪಾತ್ರಧಾರಿಗಳು ರಿಯಲ್ ಲೈಫ್ನಲ್ಲಿ ಬೇರೆಯದ್ದೇ ರೀತಿಯಲ್ಲಿ ಇರುತ್ತಾರೆ. ಇಂದು ಮಹಿಳೆಯರೇ ಧಾರಾವಾಹಿ ಪ್ರಿಯರಾಗಿರುವ ಕಾರಣದಿಂದ ಧಾರಾವಾಹಿಗಳಲ್ಲಿಯೂ ನಾಯಕಿ, ವಿಲನ್ ಎಲ್ಲರೂ ಮಹಿಳೆಯರೇ ತುಂಬಿರುತ್ತಾರೆ. ಇದೇ ಕಾರಣಕ್ಕೆ ಎಷ್ಟೋ ಧಾರಾವಾಹಿಗಳಲ್ಲಿ, ವಯಸ್ಸಿಗಿಂತಲೂ ದೊಡ್ಡ ಪಾತ್ರವನ್ನು ನಿರ್ವಹಿಸುವ ಅನಿವಾರ್ಯತೆ ಕೆಲವು ನಟಿಯರಿಗೆ ಇರುತ್ತದೆ. ಧಾರಾವಾಹಿಗಳಲ್ಲಿ ಅತ್ತೆ, ಚಿಕ್ಕಮ್ಮ, ಅಮ್ಮನ ಪಾತ್ರಧಾರಿಗಳಾಗುತ್ತಾರೆ. ಧಾರಾವಾಹಿಗಳಲ್ಲಿ 2-3 ದೊಡ್ಡ ಮಕ್ಕಳ ಅಮ್ಮನಾಗಿ ಕೊನೆಗೂ ಅಜ್ಜಿಯೂ ಆಗುತ್ತಾರೆ. ಆದರೆ ರಿಯಲ್ ಲೈಫ್ನಲ್ಲಿ ಇವರಿಗೆ ತೀರಾ ಚಿಕ್ಕ ಮಕ್ಕಳು ಇರುತ್ತಾರೆ, ಪಾತ್ರಧಾರಿಯ ವಯಸ್ಸು ಕೂಡ ಚಿಕ್ಕದ್ದೇ ಇರುತ್ತದೆ. ಆದರೆ ಧಾರಾವಾಹಿಗಳಲ್ಲಿ ತಮ್ಮ ಪಾತ್ರಕ್ಕೆ ಜೀವ ತುಂಬುವಾಗ ನಿಜಕ್ಕೂ ಅವರು ಅಷ್ಟು ಚಿಕ್ಕ ವಯಸ್ಸಿನವರು ಎನ್ನಿಸುವುದೇ ಇಲ್ಲ. ಕೆಲವು ಧಾರಾವಾಹಿಗಳಲ್ಲಿ ಕೆಲವು ನಟಿಯರನ್ನು ನೋಡಿದಾಗ ಅವರು ಚಿಕ್ಕವರೆಂದು ತಿಳಿದುಬಂದರೂ, ಇನ್ನು ಕೆಲವರು ತಮ್ಮ ಮೇಕಪ್ ಮತ್ತು ನಟನೆಯಿಂದ ಪ್ರಬುದ್ಧವಾಗಿ ನಟಿಸಿ, ನಿಜವಾಗಿಯೂ ಅಮ್ಮ, ಚಿಕ್ಕಮ್ಮ ಎನಿಸುವುದು ಉಂಟು.
ಹೀಗೆ ಚಿಕ್ಕ ವಯಸ್ಸಿನಲ್ಲಿಯೂ ತಮ್ಮ ಪಾತ್ರಕ್ಕಿಂತ ಮಿಗಿಲಾದ ನಟನೆ ಮಾಡುತ್ತಿರುವವರು ಜೀಕನ್ನಡದಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು, ಶುಭಮಸ್ತು ಧಾರಾವಾಹಿಯ ವಿಲನ್ ಆಗಿರುವ ಶಾರ್ವರಿ. ಅಂದಹಾಗೆ ಇವರ ರಿಯಲ್ ಲೈಫ್ ಹೆಸರು ನೇತ್ರಾ ಜಾಧವ್. ಈ ಧಾರಾವಾಹಿ ಇದಾಗಲೇ ಜನರ ಮನಸ್ಸನ್ನು ಗೆದ್ದಿದೆ. ಸೊಸೆಯೊಬ್ಬಳು ತನ್ನ ವಿಧವೆ ಅತ್ತೆಗೆ(ಸುಧಾರಾಣಿ) ಮರು ಮದುವೆ ಮಾಡಿಸುವ ಹಾಗೂ ಆಕೆ ಗಂಡನ ಮನೆಯವರಿಂದ ತಾತ್ಸಾರಕ್ಕೆ ಒಳಗಾಗುವ ಅದರಲ್ಲಿಯೂ ಈ ಶಾರ್ವರಿ ಪಾತ್ರಧಾರಿಯಿಂದ ತೀರಾ ತೊಂದರೆಗೆ ಒಳಗಾಗುವ ಕಥಾವಸ್ತುವುಳ್ಳ ವಿಭಿನ್ನ ಕಥೆಯನ್ನು ಈ ಧಾರಾವಾಹಿ ಹೊಂದಿದೆ. ಮಧ್ಯ ವಯಸ್ಕರ ನಡುವಿನ ಪ್ರೀತಿ, ಮದುವೆ ಹಾಗೂ ಕುಟುಂಬಸ್ಥರು ಮತ್ತು ಸಮಾಜ ಅವರನ್ನು ಹೇಗೆ ಸ್ವೀಕರಿಸುತ್ತೆ ಎನ್ನುವ ಈ ಧಾರಾವಾಹಿಯ ವಿಷಯ ಹಲವರಿಗೆ ಆಪ್ತವಾಗಿದೆ.
ಇದರಲ್ಲಿ ನಾಯಕಿ ತುಳಸಿಯಷ್ಟೇ (ಸುಧಾರಾಣಿ) ಕುತೂಹಲ ಕೆರಳಿಸುವ ಕ್ಯಾರೆಕ್ಟರ್ ವಿಲನ್ ಪಾತ್ರಧಾರಿ ಶಾರ್ವರಿ ಅವರದ್ದು. ನಾಯಕ ಮಾಧವ ಅವರ ನಾದಿನಿ ಪಾತ್ರಧಾರಿಯಾಗಿರುವ ಶಾರ್ವರಿ ಅವರು ಇಡೀ ಮನೆಯನ್ನು ಕಂಟ್ರೋಲ್ಗೆ ತೆಗೆದುಕೊಂಡು ಯಾರನ್ನೂ ನೆಮ್ಮದಿಯಿಂದ ಇರಲು ಕೊಡುವುದಿಲ್ಲ. ಮಾಧವ ಅವರು ತುಳಸಿಯನ್ನು ಮದುವೆಯಾಗಿ ಬಂದ ಕಾರಣದಿಂದ ಅವರಿಗೂ ಹಿಂಸೆ ನೀಡುತ್ತಾಳೆ. ಮೊದಲಿನಿಂದಲೂ ಸೌಮ್ಯ ಸ್ವಭಾವದ ಮಾಧವ ಅವರ ಮೇಲೆ ಹಗೆ ಸಾಧಿಸುವ ಶಾರ್ವರಿ ಈಗ ಮಾಧವ ಮತ್ತು ತುಳಸಿಯನ್ನು ಬೇರೆ ಮಾಡುವಲ್ಲಿ ತಲ್ಲೀನರಾಗಿದ್ದಾರೆ. ಇಂಥ ವಿಲನ್ ಕ್ಯಾರೆಕ್ಟರ್ನಲ್ಲಿ ನೇತ್ರಾ ಜಾಧವ್ ಮಿಂಚಿದ್ದು, ಪ್ರೇಕ್ಷಕರು ಅವರನ್ನು ಕಂಡರೆ ಕಿಡಿ ಕಾರುವಂತೆ ಮಾಡಿದ್ದಾರೆ.
ಅಂದಹಾಗೆ ನೇತ್ರಾ ಅವರು, ಈ ಹಿಂದೆ ಸುಧಾರಾಣಿ ಅವರ ಜೊತೆ ರಥಸಪ್ತಮಿ ಧಾರಾವಾಹಿಯಲ್ಲಿ ಅವರ ತಂಗಿಯ ಪಾತ್ರದಲ್ಲಿ ನಟಿಸಿದ್ದರು. ಇದೀಗ ಅವರದ್ದೇ ಜೊತೆ ನೆಗಟಿವ್ ರೋಲ್ನಲ್ಲಿ ನಟಿಸುತ್ತಿದ್ದದಾರೆ. ಈ ಹಿಂದೆ ಉದಯ ಟಿವಿಯಲ್ಲಿ ಆಕೃತಿ ಎನ್ನುವ ಧಾರವಾಹಿಯಲ್ಲಿ ನಟಿಸುತ್ತಿದ್ದರು. ನಂತರ ಸುಂದರಿ ಧಾರವಾಹಿಯಲ್ಲಿಯೂ ಬಣ್ಣ ಹಚ್ಚಿದ್ದರು. ಅಂದಹಾಗೆ ಶಾರ್ವರಿ ಅವರ ಮಕ್ಕಳು ಇನ್ನೂ ಚಿಕ್ಕವರು. ಧಾರಾವಾಹಿಯಲ್ಲಿ ಮಕ್ಕಳು ಮದುವೆಗೆ ಬಂದಿದ್ದರೆ, ರಿಯಲ್ ಲೈಫ್ನ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಆಗಾಗ್ಗೆ ಮಾಡರ್ನ್ ಫೋಟೋಶೂಟ್ ಮಾಡಿಸಿಕೊಂಡು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇದೀಗ ಶ್ರೀರಸ್ತು ಶುಭಮಸ್ತು ತಂಡದ ಜೊತೆ ಭರ್ಜರಿ ರೀಲ್ಸ್ ಕೂಡ ಮಾಡಿದ್ದು, ಅದೂ ವೈರಲ್ ಆಗಿದೆ.