ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್ ಗರಂ ಆದರು, ಮನೆ ಬಾಗಿಲು ಓಪನ್ ಮಾಡಿ ಹೋಗುವಂತೆ ಪರೋಕ್ಷವಾಗಿ ಸೂಚಿಸಿದರು. ಇದಕ್ಕೆ ಕಾರಣವೇನು?
ಬಿಗ್‌ಬಾಸ್ ಎಂದರೆ ಅಲ್ಲಿ ಗಲಾಟೆ, ಲವ್, ಒಂದಿಷ್ಟು ಅಶ್ಲೀಲತೆ ಎಲ್ಲವೂ ಮಾಮೂಲು. ಅದೇ ರೀತಿ ಬಿಗ್‌ಬಾಸ್ ಕನ್ನಡದಲ್ಲಿಯೂ ಎರಡು ವಾರಗಳಿಂದ ಇವೆಲ್ಲಾ ನಡೆದೇ ಇವೆ. ಇದೀಗ ಎರಡನೆಯ ವಾರಕ್ಕೆ ಕಾಲಿಟ್ಟಾಗ ಸಹಜ ಎಂಬಂತೆ ಇವೆಲ್ಲವೂ ಸ್ವಲ್ಪ ಹೆಚ್ಚಾಗುತ್ತಿದೆ. ವಾರ ಕಳೆದಂತೆ ಜಗಳ ಕಿತ್ತಾಟ ಎಲ್ಲವೂ ಮಾಮೂಲು. ಇವೆಲ್ಲವೂ ಸ್ಕ್ರಿಪ್ಟೆಡ್ ಎನ್ನುವ ಆರೋಪ ಇದ್ದರೂ, ಬಿಗ್‌ಬಾಸ್ ಅನ್ನು ಶಪಿಸುತ್ತಲೇ ಜನ ನೋಡುತ್ತಾರೆ ಎನ್ನುವುದೂ ಸುಳ್ಳಲ್ಲ. ಹೆಚ್ಚು ಹೆಚ್ಚು ಗಲಾಟೆ, ಲವ್ ಸೀನ್ ಇದ್ದರೆ ಹೆಚ್ಚೆಚ್ಚು ಟಿಆರ್‌ಪಿ ಎನ್ನುವ ಲೆಕ್ಕಾಚಾರದಲ್ಲಿ ಬಿಗ್‌ಬಾಸ್ ಟಿಆರ್‌ಪಿ ಆಧಾರಿತವಾಗಿರುವುದು ಗುಟ್ಟಾಗೇನೂ ಉಳಿದಿಲ್ಲ. ಅದೇನೇ ಇದ್ದರೂ ವಾರಾಂತ್ಯದಲ್ಲಿ ತಮ್ಮ ನೆಚ್ಚಿನ ನಟ ಸುದೀಪ್ ಅವರು ಬರುವುದನ್ನು ಒಂದೆಡೆ ಪ್ರೇಕ್ಷಕರು ಕಾಯುತ್ತಿದ್ದರೆ, ಒಳಗೆ ಇರುವ ಸ್ಪರ್ಧಿಗಳ ಎದೆ ಡವ ಡವ ಎನ್ನುತ್ತಲೇ ಸುದೀಪ್ ಅವರು ಎಂಟ್ರಿ ಕೊಡುತ್ತಾರೆ.
ಈ ವಾರವೂ ಸುದೀಪ್ ಅವರು ಎಂಟ್ರಿ ಕೊಟ್ಟಿದ್ದಾರೆ. ಆದರೆ ಬಿಗ್‌ಬಾಸ್ ಮನೆಯಲ್ಲಿ ಅವರು ಅಗತ್ಯಕ್ಕಿಂತ ಹೆಚ್ಚು ಗರಂ ಆಗಿರುವುದನ್ನು ನೋಡಬಹುದು. ಇದಕ್ಕೆ ಕಾರಣ ವಾರಪೂರ್ತಿ ಬಿಗ್‌ಬಾಸ್ ಮನೆಯಲ್ಲಿ ನಡೆದಿರುವ ಕಿತ್ತಾಟಗಳು. ಇದಾದಲೇ ಒಂಬತ್ತು ಷೋಗಳನ್ನು ಮಾಡಿರುವ ಸುದೀಪ್ ಅವರಿಗೆ ಈ ಕಿತ್ತಾಟ ಹೊಸದೇನೂ ಅಲ್ಲವಾದರೂ, ಪ್ರತಿ ಸಲ ಕಿತ್ತಾಟ ಹೆಚ್ಚಾದಾಗ ಕೋಪ ಮಾಡಿಕೊಳ್ಳುವಂತೆ ಇಲ್ಲಿಯೂ ಮಾಡಿಕೊಂಡಿದ್ದಾರೆ. ಬಿಗ್‌ಬಾಸ್ ಮನೆಯೊಳಕ್ಕೆ ಹೋಗಿರುವ ಸುದೀಪ್, ಸ್ಪರ್ಧಿಗಳಿಗೆ ಒಂದೇ ಸಮನೆ ಪ್ರಶ್ನೆ ಕೇಳಿದ್ದಾರೆ. ಸ್ಪರ್ಧಿಗಳ ಗಲಾಟೆಗೆ ತುಸು ಹೆಚ್ಚೇ ಗರಂ ಆಗಿರುವ ಸುದೀಪ್ ಅವರು, ಹೀಗೆಯೇ ಆದರೆ ಮನೆಯ ಬಾಗಿಲು ಓಪನ್ ಇದೆ ಎಂದು ಬಿಗ್ ಬಾಸ್ ಮನೆಯ ಬಾಗಿಲು ತೆರೆದಿದ್ದಾರೆ! ಇದರಿಂದ ಯಾರೆಲ್ಲಾ ಔಟ್ ಆಗಬಹುದು ಎನ್ನುವ ಭಯದಲ್ಲಿ ಸ್ಪರ್ಧಿಗಳು ಕೆಲ ಕಾಲ ಆತಂಕದಲ್ಲಿ ಇದ್ದುದನ್ನು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನೋಡಬಹುದು.
ಬಿಗ್ ಬಾಸ್’ ಮನೆಯಲ್ಲಿ ಸದ್ಯ 16 ಮಂದಿ ಇದ್ದಾರೆ. ಮೊದಲ ವಾರದ ನಾಮಿನೇಷನ್ನಿಂದ ಸ್ನೇಕ್ ಶ್ಯಾಮ್ ಅವರು ಔಟ್ ಆಗಿದ್ದಾರೆ. ಈಗ ಬಿಡುಗಡೆಯಾಗಿರುವ ಎರಡು ಪ್ರೊಮೋಗಳಲ್ಲಿ ಒಂದರಲ್ಲಿ ಗರಂ ಆಗಿರೋ ಸುದೀಪ್ ಬಿಗ್‌ಬಾಸ್ ಮನೆಯ ಮುಖ್ಯದ್ವಾರವನ್ನು ತೆರೆದಿರುವುದನ್ನು ನೋಡಿದರೆ, ಇನ್ನೊಂದರಲ್ಲಿ ಕ್ಯಾಪ್ಟನ್ ಆಯ್ಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಈ ವಾರ ಸ್ಪರ್ಧಿಗಳಲ್ಲಿ ಎರಡು ಟೀಂ ಆಗಿತ್ತು. ಅಂದರೆ ಆಟದಲ್ಲಿ ಎರಡು ಗುಂಪು ಮಾಡಲಾಗಿತ್ತು. ಇವರಿಗೆಲ್ಲಾ ಬಿಗ್‌ಬಾಸ್ ಹಲವು ಟಾಸ್ಕ್ ನೀಡಲಾಗಿತ್ತು. ಇದರ ಜೊತೆಗೇ ಗುಂಪುಗಳಿಗೆ ಕ್ಯಾಪ್ಟನ್ ಆಯ್ಕೆ ಮಾಡಲು ಹೇಳಲಾಗಿತ್ತು. ಆಗ ಸ್ಪರ್ಧಿಗಳು ಒಂದೇ ಉಸಿರಿನಲ್ಲಿ ಕಾರ್ತಿಕ್ ಹಾಗೂ ವಿನಯ್ ಹೆಸರು ಹೇಳಿದರು.
ಇದಕ್ಕೆ ಸುದೀಪ್ ತುಸು ಸಿಟ್ಟಿಗೆದ್ದಿದ್ದಾರೆ. ನಿಮಗ್ಯಾರಿಗೂ ಕ್ಯಾಪ್ಟನ್ ಆಗಬೇಕು ಅನಿಸಲಿಲ್ವಾ? ಕ್ಯಾಪ್ಟನ್ ಆಯ್ಕೆ ಮಾಡಲು ಯಾಕೆ 20 ಸೆಕೆಂಡ್ ಕೂಡ ಯೋಚಿಸಲಿಲ್ಲ. ನಾವು ಕ್ಯಾಪ್ಟನ್ ಆಗಬಹುದು ಎನ್ನುವ ಆಲೋಚನೆ ಯಾರಿಗೂ ಬರಲಿಲ್ವಾ ಎಂದು ಪ್ರಶ್ನಿಸಿದರು. ಇಂಥ ಭಯ ಇರುವವರು ಯಾಕೆ ಮನೆಯೊಳಗೆ ಇದ್ದೀರಾ. ನಾನು ನೋಡಿದ್ದು ನಂಗೆ ಇಷ್ಟವಾಗಿಲ್ಲ. ಹೀಗೆ ಇರ್ತೀರಾ ಅಂದ್ರೆ ಈ ಕ್ಷಣವೇ ನಾನು ಬಾಗಿಲು ತೆಗೆಯುತ್ತೇನೆ ಹೊರಗೆ ಹೋಗಿ ಎಂದು ನಟ ಸುದೀಪ್ ಹೇಳಿದ್ದಾರೆ. ಆಗ ಸ್ಪರ್ಧಿಗಳು ಚಿಂತೆಗೀಡಾಗಿದ್ದನ್ನು ನೋಡಬಹುದು.
ಬಿಗ್‌ಬಾಸ್ ಮನೆಯಲ್ಲಿ ಮದ್ವೆ, ಹೊರಗೆ ಬಂದಾಗ ಡಿವೋರ್ಸ್: ನಟಿ ಸಾರಾ ಮಾಜಿ ಪತಿಗೀಗ 3ನೇ ಮದ್ವೆ!
