ಹರ್ಷ ಭುವಿಗೆ ಹಾಕಬೇಕಿದ್ದ ಉಂಗುರ ವರೂ ಕೈಯಲ್ಲಿ! ಹರ್ಷನ ಪ್ರಪೋಸ್ ಸಕ್ಸಸ್ ಆಗುತ್ತಾ?
ಕನ್ನಡತಿ ಸೀರಿಯಲ್ ಇದೀಗ ಇಂಟರೆಸ್ಟಿಂಗ್ ಘಟ್ಟಕ್ಕೆ ಬಂದು ನಿಂತಿದೆ. ಹರ್ಷ ಭುವಿಗೆ ಹಾಕಬೇಕಿದ್ದ ರಿಂಗ್ ವರೂಧಿನಿ ಕೈ ಸೇರಿದೆ. ಇದೆಲ್ಲ ನೋಡ್ತಿದ್ರೆ ಹರ್ಷನ ಪ್ರೊಪೋಸ್ ಪ್ಲಾನ್ ಸಕ್ಸಸ್ ಆಗುತ್ತಾ?
ಕಲರ್ಸ್ ಕನ್ನಡ (Colors Kannada)ದ 'ಕನ್ನಡತಿ' (Kannadathi) ಧಾರಾವಾಹಿಗೆ ಶುಕ್ರದೆಸೆ ಕೂಡಿಬಂದ ಹಾಗಿದೆ. ಕತೆ ಮಹತ್ವದ ಘಟ್ಟಕ್ಕೆ ಬಂದು ತಲುಪುತ್ತಿರುವಂತೇ ಅತ್ತ ಟಿಆರ್ ಪಿಯಲ್ಲೂ ಏರಿಕೆಯಾಗಿದೆ. ಸದ್ಯಕ್ಕೆ ಪ್ರಸಾರ ಆಗ್ತಿರೋ ಎಪಿಸೋಡು ವೀಕ್ಷಕರನ್ನು ಕುರ್ಚಿ ತುದಿಯಲ್ಲಿ ಕೂರುವ ಹಾಗೆ ಮಾಡಿದೆ.
ಸದ್ಯಕ್ಕೀಗ ಎಲ್ಲೆಲ್ಲೂ ಹರ್ಷನ ಪ್ರೊಪೋಸ್‌ನದ್ದೇ ಸುದ್ದಿ. ಅದಕ್ಕೆ ಸರಿಯಾಗಿ ಏನೇನೆಲ್ಲ ವಿಘ್ನಗಳು ನಡೆಯುತ್ತಿವೆ. ಈ ಹಿಂದೆಯೇ ಹರ್ಷ ಪ್ರೊಪೋಸ್ ಮಾಡುವಂಥಾ ಅನೇಕ ಸನ್ನಿವೇಶಗಳು ಎದುರಾಗಿದ್ದವು. ಸ್ವತಃ ಭುವಿಯೇ ಹರ್ಷನ ಬಳಿ ಅನೇಕ ಸಲ ತನ್ನ ಆತನ ಸಂಬಂಧದ ಬಗ್ಗೆ ಓರೆಯಾಗಿ ಪ್ರಶ್ನೆ ಮಾಡಿದ್ದಳು. ಆಗೆಲ್ಲ ಏನೂ ಹೇಳಲಾಗದೇ ಹರ್ಷ ಸುಮ್ಮನಿದ್ದ. ಮೈ ಜುಮ್ಮೆನಿಸುವ ಇಂಟಿಮೇಟ್ (intimate) ಕ್ಷಣಗಳು ಅವರಿಗೆ ಎದುರಾಗಿದ್ದವು. ಆಗಲೂ ಇಬ್ಬರೂ ಏನೂ ಹೇಳದೇ ಹಾರಿಕೆಯ ಮಾತು ಹೇಳಿದ್ದರು.
'ಎದೆತುಂಬಿ ಹಾಡುವೆನು' ಸ್ಪರ್ಧಿ ನಾದಿರಾ ಬಾನು ನೋವಿನ ಕತೆ ಏನು?
ಒಮ್ಮೆ ಭುವಿ ಗ್ಲಾಮರ್ ಉಡುಗೆಯಲ್ಲಿ ಕಾಣಿಸಿಕೊಂಡಾಗ ಕಷ್ಟಪಟ್ಟು ಮನಸ್ಸು ನಿಯಂತ್ರಿಸಿಕೊಂಡಿದ್ದ ಹರ್ಷ. ಭುವಿಯೂ ಒಳಗೊಳಗೇ ಹರ್ಷನ ಬಗ್ಗೆ ಅಷ್ಟೆಲ್ಲ ಪ್ರೀತಿ ಇದ್ದರೂ ಆಕೆ ಗುಮ್ಮನ ಗುಸುಕಿ. ಅಂತರಾತ್ಮ ಹರ್ಷ ನಿನ್ನವನೇ ಅಂತ ಹೇಳಿದರೂ, ಹರ್ಷನಂಥಾ ಶ್ರೀಮಂತ ತನ್ನಂಥಾ ಬಡ ಹುಡುಗಿಯ ಕೈ ಹಿಡಿಯೋ ಬಗ್ಗೆ ಗೊಂದಲ.
ಹರ್ಷನಿಗೆ ಮೊದಲಿಂದಲೂ ತಾನು ಬದುಕಿಡೀ ನೆನಪಿಟ್ಟುಕೊಳ್ಳುವ ಹಾಗೆ ಪ್ರೊಪೋಸ್ (Proposal) ಮಾಡಬೇಕು ಅನ್ನೋ ಆಸೆ. ಆ ಕ್ಷಣ ಇದೀಗ ಹತ್ತಿರ ಬರುತ್ತಿದೆ. ಭುವಿಯ ಬರ್ತ್ ಡೇ ದಿನವೇ ಆಕೆಗೆ ಪ್ರೊಪೋಸ್ ಮಾಡಲು ಎಲ್ಲಾ ಸಿದ್ಧತೆಯನ್ನೂ ಹರ್ಷ ಮಾಡಿಕೊಂಡಿದ್ದಾನೆ. ಆದರೆ ಈ ನಡುವೆಯೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ಆಗುತ್ತಿದೆ. ಹರ್ಷನ ಪ್ರೀತಿಯಿಂದ ತಿರಸ್ಕೃತಳಾದರೂ ವರೂಧಿನಿಗೆ ಹರ್ಷನ ಮೋಹದಿಂದ ಹೊರಬರಲಾಗುತ್ತಿಲ್ಲ. ಈ ಕುರುಡು ಪ್ರೀತಿ (Love) ಅವಳನ್ನು ಏನು ಮಾಡಲೂ ಹೇಸದಂತೆ ಮಾಡಿದೆ. ಆಕೆ ಹರ್ಷನ ಪ್ರೊಪೋಸ್ ಇವೆಂಟ್ ಸಿದ್ಧತೆಯನ್ನು ಕದ್ದು ನೋಡಿ ಉಗಿಸಿಕೊಂಡಿದ್ದಾಳೆ. ಹರ್ಷ ತನ್ನ ಚೇಂಬರ್ ಗೆ ಕರೆದು ಬುದ್ಧಿ ಹೇಳಿದ್ದಾನೆ. ಆದರೆ ಈ ಪ್ರೇಮ ವರೂಧಿನಿಯನ್ನು ಅಷ್ಟಕ್ಕೂ ಸುಮ್ಮನಾಗಿಸಲಿಲ್ಲ. ಹರ್ಷ ತನ್ನ ಅಸಿಸ್ಟೆಂಟ್ ಆಶಿತಾಗೆ ತಾನು ಆರ್ಡರ್ ಮಾಡಿರುವ ಪ್ರೊಪೋಸ್ ರಿಂಗ್ (Ring) ತಂದುಕೊಡಲು ಕಳಿಸಿದರೆ, ವರೂಧಿನಿ ಹಠದಲ್ಲಿ ಆಕೆಯನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ಹೊರಡುತ್ತಾಳೆ. ತನ್ನ ಭಗ್ನಪ್ರೇಮಿ ಸ್ನೇಹಿತೆ ವರೂ ವರ್ತನೆಯನ್ನ ಆಶಿತಾ ಎಷ್ಟೇ ವಿರೋಧಿಸಿದರೂ ವರೂ ಬಹಳ ಸ್ಟ್ರಾಂಗ್. ಸುಮ್ಮನೆ ನೋಡ್ತೀನಿ ಅಂತ ಆಶಿತಾ ಕೈಯಿಂದ ರಿಂಗ್ ಇಸ್ಕೊಳ್ಳೋದೂ ಅಲ್ಲದೇ ಅದನ್ನ ತನ್ನ ಬೆರಳಿಗೆ ತೊಟ್ಟೂ ಬಿಡುತ್ತಾಳೆ. ಆ ರಿಂಗ್ ಎಷ್ಟು ಬಿಗಿಯಾಗಿ ಕೂರುತ್ತೆ ಅಂದ್ರೆ ವರೂ ಪ್ರೀತಿಯಂತೇ ಅವಳ ಕೈಯಿಂದ ಅದನ್ನು ತೆಗೆಯೋದಕ್ಕೇ ಸಾಧ್ಯವಾಗಲ್ಲ.
ಬೆಚ್ಚಿ ಬೀಳಿಸಿದ ಕನ್ನಡತಿ! ಭುವಿಯ ಹೊಸ ನಡೆಗೆ ಫಿದಾ ಆದ ಪ್ರೇಕ್ಷಕರು
ಇತ್ತ ಆಶಿತಾಗೆ ಸದಾ ರೇಗುವ ತನ್ನ ಬಾಸ್ ಗೆ ಇದು ಗೊತ್ತಾಗಿ ಎಲ್ಲಿ ತನ್ನ ಕೆಲಸ ಹೋಗುತ್ತೋ ಅನ್ನುವ ಚಿಂತೆ. ಅದೇ ಹೊತ್ತಿಗೆ ಭುವಿಯೂ ಅಲ್ಲಿ ಬರುತ್ತಾಳೆ. ವರೂ ಹುಚ್ಚಾಟ ಮೇರೆ ಮೇರುತ್ತಿರುವುದು ಅವಳಿಗೆ ನೋವು ತಂದಿದೆ. ಅದ್ಕಿಂತ ಹೆಚ್ಚು ಆಘಾತವಾಗಿರೋದು ಹರ್ಷ ಪ್ರೊಪೋಸ್ ಮಾಡುತ್ತಿರುವ ಸುದ್ದಿ. ಅದು ತಾನಾ, ತಾನಲ್ವಾ ಅನ್ನೋ ಗೊಂದಲಕ್ಕೆ ಭುವಿ ಬೀಳುವುದು ಅವಳ ನಡತೆಯಲ್ಲೇ ಗೊತ್ತಾಗುತ್ತೆ. ವರೂಗೆ ಆಕೆ ಬೈಯೋದರ ಹಿಂದೆಯೂ ಅವಳಿಗಾಗಿರುವ ಆಘಾತದ ಛಾಯೆ ಇದೆ. ಕೊನೆಗೂ ಹರ್ಷನ ಪರ್ಸನಲ್ ವಿಷಯದಲ್ಲಿ ತಾನೆಂದೂ ಮಧ್ಯ ಬರೋದಿಲ್ಲ ಅಂತ ವರೂಧಿನಿಯಿಂದ ಆಣೆ ಹಾಕಿಸಿಕೊಳ್ಳುತ್ತಾಳೆ ಭುವಿ. ವರೂವಿನ ನೋವು, ಭುವಿಯ ಆಘಾತ ನಡುವೆ ಅತ್ತ ಬಿಂದು ಜೊತೆಗೆ ಹರ್ಷ ಸೆಲೆಬ್ರೇಶನ್ (Celebration) ಪ್ಲಾನ್‌ನಲ್ಲಿದ್ದಾನೆ. ಇನ್ನೊಂದು ಕಡೆ ಆತ ವಿಲನ್ ಸಾನಿಯಾಳನ್ನು ಬಂಧಿಸುವಂತೆ ಮಾಡಲೂ ಹೆಣಗಾಡುತ್ತಿದ್ದಾನೆ.
ಹೀಗೆ ಏನೆಲ್ಲ ತಿರುವುಗಳ ಮೂಲಕ ಕನ್ನಡತಿ ರೋಚಕ ಘಟ್ಟ ತಲುಪಿದೆ. ಕನ್ನಡತಿಗೆ ಕನ್ನಡಿಗರ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲರ ಕುತೂಹಲ ಹರ್ಷನ ಪ್ರೊಪೋಸ್‌ನತ್ತಲೇ ನೆಟ್ಟಿದೆ. ಇಷ್ಟೆಲ್ಲ ವಿಘ್ನಗಳ ಬಳಿಕವೂ ಹರ್ಷ ಭುವಿಗೆ ಪ್ರೊಪೋಸ್ ಮಾಡ್ತಾನಾ, ಭುವಿ ಅದನ್ನು ಒಪ್ಪುತ್ತಾಳಾ, ಒಪ್ಪಿದರೆ ಮುಂದೆ ರತ್ನಮಾಲಾಳ ಆಸ್ತಿಗೆ ಒಡತಿಯಾಗುತ್ತಾಳಾ, ಹಾಗಾದಾಗ ರತ್ನಮಾಲಾ ಈಗಾಗಲೇ ಹೇಳಿದಂತೆ ಹರ್ಷ, ಭುವಿ ನಡುವಿನ ಸಂಬಂಧ ಹಳಸೋದಿಲ್ವಾ.. ಇತ್ಯಾದಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಏಳುತ್ತವೆ. ಅಲ್ಲೇ ಕನ್ನಡತಿ ಗೆಲುವೂ ಇದೆ.
ಹಿಟ್ಲರ್ ಕಲ್ಯಾಣದ ಎಡವಟ್ಟು ಸುಂದರಿ ಮಲೈಕಾ ವಸುಪಾಲ್