ರಾಮೋಜಿ ಫಿಲ್ಮ್ ಸಿಟಿಯಿಂದ ಹೋಟೆಲ್‌ಗೆ ಹೋಗುವ ಅವಸರದಲ್ಲಿ ಬೇರೆ ಗಾಡಿ ಹತ್ತಿದ ಭಯದಿಂದ ಒದ್ದಾಡಿದ ರಂಜನಿ, ಕಿರಣ್ ರಾಜ್‌ ಮತ್ತು ಸಾರಾ. 

ಕರ್ನಾಟಕದಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿದ್ದಂತೆ, ಕಿರುತೆರೆ ಧಾರಾವಾಹಿ ಹಾಗೂ ರಿಯಾಲಿಟಿ ಶೋ ಚಿತ್ರೀಕರಣ ರದ್ದು ಮಾಡಲಾಗಿತ್ತು. ಈಗಾಗಲೇ ಚಿತ್ರೀಕರಣ ಮಾಡಿರುವ ಸಂಚಿಕೆಗಳನ್ನು ಪ್ರಸಾರ ಮಾಡುವ ಮೂಲಕ ಕಿರುತೆರೆ ವೀಕ್ಷಕರನ್ನು ಮನೋರಂಜಿಸುತ್ತಿದ್ದರು, ಆದರೀಗ ಬ್ಯಾಕ್ ಅಪ್ ಇಲ್ಲದ ಕಾರಣ ಕಾರಣ ಹೈದರಾಬಾದ್‌ನ ರಾಮೋಜಿ ಫಿಲ್ಮ ಸಿಟಿಯಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಕನ್ನಡತಿ' ಧಾರಾವಾಹಿಯ ಚಿತ್ರೀಕರಣವನ್ನು ನಡೆಸಲಾಗುತ್ತಿದೆ.

ಚಿತ್ರೀಕರಣದಲ್ಲಿ ಬ್ಯೂಸಿಯಾಗಿರುವ 'ಕನ್ನಡತಿ' ರಂಜನಿ ಮತ್ತು ನಟ ಕಿರಣ್ ರಾಜ್, ಸಾರಾ ತಡರಾತ್ರಿ ಗೊತ್ತಿಲ್ಲದದೇ ಬೇರೆ ಗಾಡಿ ಏರಿ ಹೊರಟು ಪಟ್ಟ ಸಂಕಟವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ಇದು ನೈಜ ಘಟನೆ ಆಧಾರಿತ ಥ್ರಿಲ್ಲರ್ ಕಥೆ! ಇದರಲ್ಲಿ ಬರುವ ಎಲ್ಲಾ ಪಾತ್ರಗಳು ಕಾಲ್ಪನಿಕವಲ್ಲ. ನಮ್ಮ ಅನುಭವ.. With video proof,'ಎಂದು ಕಥೆ ಆರಂಭಿಸಿದ್ದಾರೆ. ಮತ್ತೊಂದು ವಿಚಾರ ಏನೆಂದರೆ ಗಾಡಿಯಲ್ಲಿ ಕನ್ನಡ ಡ್ರೈವರ್‌ ಒಬ್ಬನಿದ್ದ ಕಾರಣ ರಂಜನಿ ಇಂಗ್ಲಿಷ್‌ನಲ್ಲಿ ಮಾತನಾಡಿದ್ದಾರೆ. 'ಜೊತೇಲಿದ್ದೋನಿಗೆ ನನ್ನ ಭಯ ಗೊತ್ತಾಗ್ದೇ ಇರ್ಲಿ ಅಂತ ಇಂಗ್ಲಿಷ್ ನಲ್ಲಿ ಮಾತಾಡಿರೋದು, ಬೈಕೋಬೇಡಿ,' ಎಂದಿದ್ದಾರೆ.

ರಂಜನಿ ಕತೆ:
'ಏನಾಯ್ತು ಗೊತ್ತಾ? ಇವತ್ತು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಬೇಗ ಮುಗಿದಿತ್ತು. ನಮ್ ಟೀಮ್ ದಿನ್ನೂ ಶೂಟ್ ಮುಗ್ದಿರ್ಲಿಲ್ಲ (ಅಂದ್ರೆ ನಮ್ ಸೀನ್ಸ್ ಮುಗ್ದಿತ್ತು, ಪ್ಯಾಕ್‌ಅಪ್ ಆಗಿರ್ಲಿಲ್ಲ) ಎಲ್ಲರೂ ಬರೋದಕ್ಕೆ ಇನ್ನೂ ಸಮಯ ಇತ್ತು, ಒಟ್ಟಿಗೆ ವಾಪಸ್ ಹೋಟೆಲ್‌ಗೆ ಹೋಗೋಕೆ ಕಾಯ್ತಾ ಹಾಗೇ ಏನೋ ಮಾತಾಡ್ತಾ ಕೂತಿದ್ದೆ. 'ಹೇ ಗಾಡಿ ಇದೆ ಬರ್ತೀರಾ?' ಕಿರಣ್ ರಾಜ್ ಕೇಳಿದ್ರು. ನೋಡಿದ್ರೆ ಒಂದು ಲಗೇಜ್ ಗಾಡಿ ನಿಂತಿತ್ತು, ಇದ್ರಲ್ಲಿ ಹೋಗೋಣ ಮಜಾ ಇರುತ್ತೆ, ಅಂತ ನಾನು ಏನೂ ಯೋಚ್ನೆ ಮಾಡದೇ ಗಾಡಿ ಹತ್ತಿದೆ. ಸಾರಾ ಕೂಡ ಆಲ್ರೆಡಿ ಗಾಡಿ ಹತ್ತಿದ್ರು. ಬೇಗ ರೂಮ್ ತಲುಪುತ್ತೇವೆ, ಸುತ್ತ ಮುತ್ತ ಜಾಗವನ್ನು ಓಪನ್ ಗಾಡೀಲಿ ಎಕ್ಸ್ಪ್ಲೋರ್ ಮಾಡ್ಬೋದು ಅಂತ ಜೋಶ್‌ನಲ್ಲಿ ಹೊರಟ್ವಿ. ಗಾಡಿ ಗಡ ಗಡ ಅಂತ ಶಬ್ದ ಮಾಡ್ತಾ ಸೆಟ್‌ನಿಂದ ಒಂದೆರ್ಡು ಕಿಲೋಮಿಟರ್ ದೂರ ಬಂತು. 

ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಗೆ ಕನ್ನಡತಿ ರಂಜನಿ ಫಿದಾ 

'ಏನ್ ಗೊತ್ತಾ? ಇವ್ರ್ ಎಲ್ಲಿಗ್ ಕರ್ಕೊಂಡ್ ಹೋಗ್ತಿದ್ದಾರೆ? ನನ್ ಮೈಮೇಲೇ ಮಿನಿಮಮ್ ಮೂರು ಲಕ್ಷ ಚಿನ್ನ ಇದೆ,' ಕಿರಣ್ ಗುಟ್ಟಾಗಿ ಹೇಳಿದ್ ತಕ್ಷಣ ನನ್ ಎದೆ ಧಸಕ್ ಅನ್ತು. ನೋಡಿದ್ರೆ ಗಾಡಿ ಎಲ್ಲೋ ಆಫ್ ರೋಡ್ ಹೋಗ್ತಿದೆ. ಗಾಡಿಯಲ್ಲಿ ಒಬ್ಬ ಕನ್ನಡ ಮಾತಾಡೋನಿದ್ದ ಅಂತ ಅವನ ಹತ್ತಿರ ಮಾತಾಡಿಕೊಂಡು ಹೊರಟಿದ್ವಿ. ನೋಡಿದ್ರೆ ಸ್ವಲ್ಪ ಹೊತ್ತಿನ್ ಮೇಲೆ ಗೊತ್ತಾಯ್ತು ಅವನು ಕುಡಿದಿದ್ದ ಅಂತ. ರಾಮೋಜಿ ಫಿಲ್ಮ್ ಸಿಟಿಯ ಮಾಮೂಲಿ ರೋಡ್ ಬಿಟ್ಟು ಕತ್ತಲೇಲಿ ನಮ್ಮನ್ನ ಎಲ್ಲಿಗೆ ಕರ್ಕೊಂಡ್ ಹೋಗ್ತಿದ್ದಾರೆ? ಮುಂದೆ ಕೂತಿರೋ ಡ್ರೈವರ್ ಗೊತ್ತಿರೋದಿರ್ಲಿ ಅವ್ರ ಮುಖಾನೂ ನೋಡಿಲ್ಲ! ನಮ್ಗೇನಾದ್ರು ಮಾಡ್ಬಿಡ್ತಾರಾ? ಹೊರ ರಾಜ್ಯದಲ್ಲಿ, ಗೊತ್ತಿಲ್ದೇರೋ ಗಾಡೀಲಿ, ಗೊತ್ತೂ ಗುರಿ ಇಲ್ದೇ ಹೊರಟಿದ್ದೀವಿ, ಏನಪ್ಪಾ ಗತಿ ಅಂತ ಹೆದರಿಕೊಂಡು ಈ ವಿಡಿಯೋ ಮಾಡಿದ್ದು. ಕ್ರೈಂ ಇನ್ವೆಸ್ಟಿಗೇಶನ್ ನಡೀವಾಗ ಪ್ರೂಫ್‌ಗೆ ಅಂತ ವಿಡಿಯೋ ಸಿಗುತ್ತಲ್ಲ? ಆ ರೀತಿ! ಟೈಟಲ್ ಕಾರ್ಡ್ ಚೇಂಜ್ ಮಾಡಿ ಅಂತ ಎಲ್ರೂ ಕೇಳ್ತಿದ್ರು, ಟೈಟಲ್ ಕಾರ್ಡ್ ಅಲ್ಲಿರೋರನ್ನ ಚೇಂಜ್ ಮಾಡೋ ಪರಿಸ್ಥಿತಿ ತಂದುಕೊಂಡುಬಿಟ್ವಾ ಗುರು, ಅಂತ ಹೆವೀ ಭಯ ಆಯ್ತು. ಮುಂದೇನಾಯ್ತು? ಭಾಗ ಎರಡರಲ್ಲಿ ನಿರೀಕ್ಷಿಸಿ!' ಎಂದು ಮತ್ತೊಂದು ಭಾಗದಲ್ಲಿ ಕಥೆ ಮುಂದುವರೆಸುವುದಾಗಿ ಹೇಳಿದ್ದಾರೆ.

View post on Instagram