ಸ್ಪ್ಲಿಟ್ಸ್‌ವಿಲ್ಲಾ 13ರ ವಿಜೇತ ಜೇ ದುಧಾನೆ ಅವರನ್ನು ₹5 ಕೋಟಿ ವಂಚನೆ ಆರೋಪದ ಮೇಲೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಹನಿಮೂನ್‌ಗೆ ತೆರಳುತ್ತಿದ್ದ ವೇಳೆ, ನಕಲಿ ದಾಖಲೆ ನೀಡಿ ಅಂಗಡಿಗಳನ್ನು ಮಾರಾಟ ಮಾಡಿದ ಪ್ರಕರಣದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ
ಮುಂಬೈ (ಜ.5): ಸ್ಪ್ಲಿಟ್ಸ್‌ವಿಲ್ಲಾ 13 ರ ವಿಜೇತ ಮತ್ತು ಬಿಗ್ ಬಾಸ್ ಮರಾಠಿ 3 ರ ರನ್ನರ್ ಅಪ್ ಆಗಿರುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಜೇ ದುಧಾನೆ ಅವರನ್ನು ಭಾನುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಜೇ ವಿರುದ್ಧ ₹5 ಕೋಟಿ ವಂಚನೆ ಆರೋಪ ಹೊರಿಸಲಾಗಿದೆ. ಕೇವಲ 10 ದಿನಗಳ ಹಿಂದೆ ವಿವಾಹವಾಗಿದ್ದ ಜೇ, ಪತ್ನಿಯ ಜೊತೆ ಹನಿಮೂನ್‌ಗಾಗಿ ತೆರಳಲು ವಿಮಾನ ನಿಲ್ದಾಣದಲ್ಲಿದ್ದರು. ಇದರ ನಡುವೆ ದುಧಾನೆ ತಮ್ಮ ಮೇಲಿನ ಎಲ್ಲಾ ಆರೋಪವೂ ಸುಳ್ಳು ಎಂದು ಹೇಳಿದ್ದಾರೆ.
ಇಂಡಿಯಾ ಟುಡೇ ವರದಿಯ ಪ್ರಕಾರ, ನಿವೃತ್ತ ಎಂಜಿನಿಯರ್ ಜೈ ದುಧಾನೆ ವಿರುದ್ಧ ₹5 ಕೋಟಿ (ಸುಮಾರು $50 ಮಿಲಿಯನ್) ಮೊತ್ತದ ವಂಚನೆ ಪ್ರಕರಣ ದಾಖಲಿಸಿದ್ದಾರೆ. ದೂರಿನ ಪ್ರಕಾರ, ಜೈ ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರು, ನಿವೃತ್ತ ಎಂಜಿನಿಯರ್ ಅವರನ್ನು ಥಾಣೆಯಲ್ಲಿರುವ ಐದು ವಾಣಿಜ್ಯ ಅಂಗಡಿಗಳಲ್ಲಿ ಹೂಡಿಕೆ ಮಾಡುವಂತೆ ಮಾಡಿದ್ದರು. ಅವರಿಗೆ ಆಸ್ತಿ ದಾಖಲೆಗಳನ್ನು ತೋರಿಸಲಾಯಿತು, ನಂತರ ಅವರು ₹4.61 ಕೋಟಿ (ಸುಮಾರು $40 ಮಿಲಿಯನ್) ಗೆ ಅಂಗಡಿಗಳನ್ನು ಖರೀದಿಸಿದರು.
ಕೆಲ ದಿನಗಳ ನಂತರ ಅವರಿಗೆ ಬ್ಯಾಂಕಿನಿಂದ ನೋಟಿಸ್ ಬಂದಿದ್ದು, ಅವರು ಖರೀದಿಸಿದ ಅಂಗಡಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ತೀರ್ಮಾನಿಸಲಾಗಿದೆ ಎಂದಿತ್ತು. ನೋಟಿಸ್‌ನಲ್ಲಿ ಅವರು ಹೂಡಿಕೆ ಮಾಡಿದ ಅಂಗಡಿಗಳು ಈಗಾಗಲೇ ಬ್ಯಾಂಕಿಗೆ ಅಡಮಾನ ಇಡಲಾಗಿದೆ ಎಂದು ಬಹಿರಂಗಪಡಿಸಲಾಯಿತು. ನಂತರ ಈ ಅಂಗಡಿಗಳನ್ನು ಮಾರಾಟ ಮಾಡಲು ಜೈ ದುಧಾನೆ ನಕಲಿ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದ ಎನ್ನುವುದು ಗೊತ್ತಾಗಿದೆ.
ಜನವರಿ 4 ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಜೈ ದುಧಾನೆ ಅವರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್‌ನ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಪ್ರವೀಣ್ ಮಾನೆ ಪಿಟಿಐಗೆ ತಿಳಿಸಿದ್ದಾರೆ. ಜೈ ಮತ್ತು ಅವರ ಎಲ್ಲಾ ಕುಟುಂಬ ಸದಸ್ಯರನ್ನೂ ಸಹ ತನಿಖೆಗೆ ಒಳಪಡಿಸಲಾಗಿದೆ. ಪ್ರಸ್ತುತ ತನಿಖೆ ಮುಂದುವರೆದಿದೆ.

ನನ್ನ ಮೇಲಿನ ಆರೋಪ ಸುಳ್ಳು
ಬಂಧನದ ನಂತರ, ಜೈ ದುಧಾನೆ ತಾವು ನಿರಪರಾಧಿ ಎಂದು ಹೇಳಿದ್ದರೆ. ಎಲ್ಲಾ ಆರೋಪಗಳು ಆಧಾರರಹಿತ ಎಂದಿದ್ದಾರೆ. ಮಾಧ್ಯಮಗಳಿಗೆ ಹೇಳೀಕೆ ನೀಡಿದ ಅವರು, "ನಾನು ನನ್ನ ಹನಿಮೂನ್‌ಗೆ ಹೋಗುತ್ತಿದ್ದೆ, ನನ್ನ ಸಹೋದರ, ನನ್ನ ಹೆಂಡತಿ ಮತ್ತು ನನ್ನ ಸಹೋದರನ ಹೆಂಡತಿ ಎಲ್ಲರೂ ವಿದೇಶಕ್ಕೆ ಹೋಗುತ್ತಿದ್ದರು. ನನ್ನ ವಿರುದ್ಧ ಬಂಧನ ವಾರಂಟ್ ಅಥವಾ ಲುಕೌಟ್ ಸುತ್ತೋಲೆ ಹೊರಡಿಸಲಾಗಿದೆ ಎಂದು ನನಗೆ ತಿಳಿದಿರಲಿಲ್ಲ. ಪೊಲೀಸರು ನನಗೆ ದೇಶ ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ಹೇಳಿದರು. ನಾನು ಪೊಲೀಸರಿಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ" ಎಂದು ಹೇಳಿದರು.
10 ದಿನಗಳ ಹಿಂದೆ ಮದುವೆ
ಜೈ ದುಧಾನೆ ಡಿಸೆಂಬರ್ 26 ರಂದು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್, ನಟಿ ಹರ್ಷಲಾ ಪಾಟೀಲ್ ಅವರನ್ನು ವಿವಾಹವಾದರು. ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿವಾಹದ ಹಲವಾರು ಫೋಟೋಗಳನ್ನು ಪೋಸ್ಟ್ ಮಾಡಿದರು. ಜೈ ದುಧಾನೆ ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ 13 ರ ವಿಜೇತರಾಗಿದ್ದರು. ಅವರು ಬಿಗ್ ಬಾಸ್ ಮರಾಠಿ 3 ರಲ್ಲಿಯೂ ಭಾಗವಹಿಸಿದರು, ಅಲ್ಲಿ ಅವರು ಮೊದಲ ರನ್ನರ್ ಅಪ್ ಎನಿಸಿಕೊಂಡಿದ್ದರು.


