ಯಾರಿಗೆ ಸ್ವರ್ಗ, ಯಾರಿಗೆ ನರಕ? ಬಿಗ್ಬಾಸ್ ಸ್ಪರ್ಧಿಗಳ ಹಣೆಬರಹ ವೀಕ್ಷಕರ ಕೈಯಲ್ಲಿ! ಹೊಸ ಪ್ರೊಮೋ ರಿಲೀಸ್...
ಬಿಗ್ಬಾಸ್ ಆರಂಭಕ್ಕೆ ಇನ್ನೊಂದೇ ದಿನ ಬಾಕಿ. ಇಂದು ಸ್ಪರ್ಧಿಗಳ ಹೆಸರು ಅನೌನ್ಸ್ ಮಾಡಲಾಗುತ್ತದೆ. ಈ ನಡುವೆಯೇ ಸ್ಪರ್ಧಿಗಳ ಹಣೆಬರದ ವೀಕ್ಷಕರ ಕೈಯಲ್ಲಿ ಎಂದಿದ್ದಾರೆ ಸುದೀಪ್!
ಬಿಗ್ಬಾಸ್ ಸೀಸನ್ 11 ಗ್ರ್ಯಾಂಡ್ ಓಪನಿಂಗ್ಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಇಂದು ಅಂದ್ರೆ ಶನಿವಾರ (ಸೆ.28) ಸಂಜೆ 6 ಗಂಟೆಯಿಂದ ನಡೆಯಲಿರುವ ರಾಜಾ ರಾಣಿ ರೀಲೋಡೆಡ್ನ ಗ್ರ್ಯಾಂಡ್ ಫಿನಾಲೆ ಟೈಮ್ನಲ್ಲಿಯೇ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಗಳ ಹೆಸರುಗಳನ್ನು ಸುದೀಪ್ ಅವರು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಪ್ರೀಮಿಯರ್ ಸಂಚಿಕೆ ನಾಳೆ ಅಂದ್ರೆ ಸೆಪ್ಟೆಂಬರ್ 29 ಸಂಜೆ 6 ಗಂಟೆಯಿಂದ ಪ್ರಸಾರವಾಗಲಿದೆ. ‘ರಾಜಾ ರಾಣಿ’ ಗ್ರ್ಯಾಂಡ್ ಫಿನಾಲೆ ವೇಳೆ ಕೆಲ ಸ್ಪರ್ಧಿಗಳನ್ನ ರಿವೀಲ್ ಮಾಡಲಾಗುತ್ತದೆ ಎಂದು ಇದಾಗಲೇ ನಟ ಸುದೀಪ್ ಹೇಳಿದ್ದರು. ಇದೀಗ ಕಲರ್ಸ್ ಕನ್ನಡ ವಾಹಿನಿಯಿಂದ ಮತ್ತೊಂದು ಪ್ರೊಮೋ ಬಿಡಗಡೆ ಮಾಡಲಾಗಿದೆ. ಇದರಲ್ಲಿ ಸುದೀಪ್ ಅವರು ಇನ್ನೊಂದು ಅಪ್ಡೇಟ್ ನೀಡಿದ್ದಾರೆ.
ಇದಾಗಲೇ ಬಿಗ್ಬಾಸ್ ಪ್ರೇಮಿಗಳಿಗೆ ಗೊತ್ತಿರುವಂತೆ ಈ ಸೀಸನ್ನ ವಿಶೇಷತೆ ಎಂದರೆ ಸ್ವರ್ಗ ಮತ್ತು ನರಕ. ಅಂದ್ರೆ ಒಂದಲ್ಲ, ಎರಡು ಮನೆಗಳು ಇರಲಿವೆ. ‘’ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಒಂದಲ್ಲ… ಎರಡು ಮನೆ (ಸ್ವರ್ಗ, ನರಕ) ಇರಲಿವೆ ಎಂದು ಸುದೀಪ್ ಹೇಳಿದ್ದಾರೆ. ‘ಬಿಗ್ ಬಾಸ್’ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅಸಲಿ ಆಟ ವೀಕ್ಷಕರಿಂದ ಶುರುವಾಗುತ್ತಿದೆ. ಮನೆಯೊಳಗೆ ಹೋಗುವ ಸ್ಪರ್ಧಿಗಳ ಹೆಸರನ್ನ ನಾವು ಹೇಳ್ತೀವಿ. ಸ್ವರ್ಗಕ್ಕೆ ಹೋಗಬೇಕಾ, ನರಕಕ್ಕೆ ಹೋಗಬೇಕಾ ಎಂಬ ನಿರ್ಧಾರ ನಿಮ್ಮ ಕೈಯಲ್ಲಿದೆ’’ ಎಂದೂ ಅವರು ಹೇಳಿದ್ದು, ಅದರ ಪ್ರೊಮೋ ಬಿಡುಗಡೆಯಾಗಿದೆ. ಜೊತೆಗೆ ಇಂದೇ ಸ್ಪರ್ಧಿಗಳ ಹೆಸರು ಕೂಡ ಅನೌನ್ಸ್ ಆಗಲಿದೆ.
ಇದಾಗಲೇ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಉದ್ದುದ್ದ ಬೆಳೆಯುತ್ತಲೇ ಹೋಗುತ್ತಿದೆ. 18 ಜನರು ಸ್ಪರ್ಧಿಗಳು ಈ ಬಾರಿ ಬಿಗ್ಬಾಸ್ ಮನೆಯಲ್ಲಿ ಇರಲಿದ್ದಾರೆ ಎಂದು ಹೇಳಲಾಗಿದ್ದರೂ, ಇದಾಗಲೇ 30-40 ಸ್ಪರ್ಧಿಗಳ ಬಗ್ಗೆ ಗಾಳಿ ಸುದ್ದಿ ಹರಡಿವೆ. ಇದಾಗಲೇ ಕೆಲವು ಸ್ಪರ್ಧಿಗಳು ತಾವು ಬಿಗ್ಬಾಸ್ಗೆ ಹೋಗುವುದಿಲ್ಲ ಎಂದೂ ಹೇಳಲಾಗಿದೆ. ಮೊನ್ನೆಯಷ್ಟೇ, ಅಭಿಮಾನಿಗಳ ತಲೆಗೆ ಹುಳು ಬಿಡುವ ಫೋಟೋಗಳನ್ನು ಶೇರ್ ಮಾಡಲಾಗಿತ್ತು. ಆದರೆ ಅವುಗಳನ್ನು ಬ್ಲರ್ ಮಾಡಲಾಗಿತ್ತು. ಇದರಲ್ಲಿ ಇರುವ ಸೆಲೆಬ್ರಿಟಿಗಳು ಯಾರು ಇರಬಹುದು ಎಂದು ಅಭಿಮಾನಿಗಳು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಇವರು ಇರ್ಬೋದಾ, ಅವರು ಇರ್ಬೋದಾ, ಇವನು ಅವನಲ್ಲ, ಇವಳು ಅವಳಲ್ಲ... ಹೀಗೆ ತಮ್ಮದೇ ಆದ ಊಹೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಅಷ್ಟಕ್ಕೂ, ಸ್ಯಾಂಡಲ್ವುಡ್ ಬ್ಯೂಟಿ, ಎವರ್ಗ್ರೀನ್ ತಾರೆ ಪ್ರೇಮಾ, ಜನಪ್ರಿಯ ಟಿ.ವಿ ನಿರೂಪಕ ಹರೀಶ್ ನಾಗರಾಜು, 'ದಾಸ ಪುರಂದರ' ಮತ್ತು 'ಬೃಂದಾವನ'ದಲ್ಲಿ ನಟಿಸಿರುವ ನಟಿ ಅಮೂಲ್ಯ ಭಾರದ್ವಾಜ್, 'ಗಿಚ್ಚಿ ಗಿಲಿಗಿಲಿ ಸೀಸನ್ 3' ರ ರನ್ನರ್ ಅಪ್ ಮಾನಸಾ ತುಕಾಲಿ ಸಂತೋಷ್, ಹಾಸ್ಯನಟ ಹುಲಿ ಕಾರ್ತಿಕ್, 'ಮಗಳು ಜಾನಕಿ' ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿರುವ ಗಾಯಕಿ ಮತ್ತು ನಟಿ ಐಶ್ವರ್ಯಾ ರಂಗರಾಜನ್ ಸಂಭಾವ್ಯ ಪಟ್ಟಿಯಲ್ಲಿದ್ದಾರೆ. ಆ್ಯಂಕರ್ ಸುಕನ್ಯಾ, ಒಲವಿನ ನಿಲ್ದಾಣದ ನಾಯಕ ಅಕ್ಷಯ್ ನಾಯಕ್, ಕನ್ನಡತಿ ಸೀರಿಯಲ್ನಲ್ಲಿ ಹರ್ಷನ ತಂಗಿ ಸುಚಿಯಾಗಿದ್ದ ನಟಿ ಅಮೃತಾ ಮೂರ್ತಿ, ಭೀಮಾ ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿರುವ ಪ್ರಿಯಾ ಶಠಮರ್ಷಣ ಹೆಸರೂ ಕೇಳಿಬರುತ್ತಿವೆ.
ಅದೇ ರೀತಿ, ನಟಿ ಭವ್ಯಾ ಗೌಡ, ನಟ ದೀಪಕ್ ಗೌಡ, ಕನ್ನಡ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಂಗಳೂರಿನ ಪ್ರಖ್ಯಾತ ಅವಳಿ ಸಹೋದರಿಯರಾದ ಅದ್ವಿತಿ ಮತ್ತು ಅಶ್ವಿತಿ ಶೆಟ್ಟಿ , ರೀಲ್ಸ್ ರೇಷ್ಮಾ, ಚಂದ್ರಪ್ರಭಾ, ರಾಘವೇಂದ್ರ, ಜಾಹ್ನವಿ, ಶರ್ಮಿತಾ ಗೌಡ, ತ್ರಿವಿಕ್ರಮ್, ಸುಕೃತಾ ನಾಗ್, ಗೌತಮಿ ಜಾಧವ್, ಮತ್ತು ಶರತ್ ಕುಮಾರ್ ಹೀಗೆ ಹಲವಾರು ಹೆಸರುಗಳು ಸಂಭಾವ್ಯ ಪಟ್ಟಿಯಲ್ಲಿ ಇವೆ. ಆದರೆ ಅಂತಿಮ ಹೆಸರು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಕೆಲವೇ ಗಂಟೆಗಳಲ್ಲಿ ಕುತೂಹಲಕ್ಕೆ ತೆರೆ ಬೀಳಲಿದೆ.
ಬಿಗ್ಬಾಸ್ಗೆ ಕ್ಷಣಗಣನೆ... ಸೀಸನ್ 11ರ ಕುರಿತು ನಟ ವಿಜಯ ರಾಘವೇಂದ್ರ ಮನದಾಳದ ಮಾತೇನು?