ಬಿಗ್ ಬಾಸ್ ವಿನ್ನರ್‌ಗೆ ಸಿಜೆ ರಾಯ್ ದುರಂತ ಸಾವು ಕಾಡುತ್ತಿದೆ. ಏನೂ ಇಲ್ಲದವನಿಗೆ 50 ಲಕ್ಷ ಕೊಟ್ಟವರು ಈ ನಿರ್ಧಾರ ಮಾಡಿದ್ದೇಕೆ?, ಬದುಕಿನ ಸವಾಲುಗಳು ಗೆದ್ದ ಸಿಜೆ ರಾಯ್ ಈ ನಿರ್ಧಾರ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. 

ಬೆಂಗಳೂರು (ಫೆ.01) ಉದ್ಯಮಿ ಸಿಜೆ ರಾಯ್ ಎದೆಗೆ ಗುಂಡು ಹಾರಿಸಿಕೊಂಡು ದುರಂತ ಅಂತ್ಯ ಕಂಡ ಘಟನೆ ಹಲವರನ್ನು ಬೆಚ್ಚಿ ಬೀಳಿಸಿದೆ. ಸಿಜೆ ರಾಯ್ ಜೊತೆ ಒಡನಾಟವಿದ್ದ, ಹತ್ತಿರದಿದಂ ಬಲ್ಲವರು ಈ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಜರ್ಝರಿತರಾಗಿದ್ದಾರೆ. ಇದೇ ವೇಳೆ ಸಿಜೆ ರಾಯ್‌ನಿಂದ ನೆರವು ಪಡೆದವರು, ಸಂಪರ್ಕ ಹೊಂದಿದವರು ಆಘಾತಗೊಂಡಿದ್ದಾರೆ. ಸಿಜೆ ರಾಯ್ ಮನೋರಂಜನಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು. ಬಿಗ್ ಬಾಸ್ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ವಿಜೇತರಿಗೆ ನಗದು ಬಹುಮಾನ, ಫ್ಲ್ಯಾಟ್ ಸೇರಿದಂತ ಹಲವು ಬಹುಮಾನಗಳನ್ನು ನೀಡಿದ್ದಾರೆ.ಹೀಗೆ ಬಿಗ್ ಬಾಸ್ ಗೆದ್ದು ಸಿಜೆ ರಾಯ್ ನೀಡಿದ 50 ಲಕ್ಷ ರೂಪಾಯಿ ಪಡೆದ ಬಿಗ್ ಬಾಸ್ ವಿನ್ನರ್‌ಗೆ ಇದೀಗ ಸಿಜೆ ರಾಯ್ ದುರಂತ ಸಾವು ಕಾಡುತ್ತಿದೆ. ಹೌದು, ಬಿಗ್ ಬಾಸ್ ಮಲೆಯಾಳಂ ಸೀಸನ್ 5ನೇ ಆವೃತ್ತಿ ಗೆದ್ದ ಅಖಿಲ್ ಮಾರಾರ್ ಇದೀಗ ರಾಯ್ ಸಾವಿನ ಕುರಿತು ಕೆಲ ಪ್ರಶ್ನೆಗಳನ್ನು ಎತ್ತಿದ್ದಾರೆ.

ಬಿಗ್ ಬಾಸ್ ವಿನ್ನರ್ ಹೇಳಿದ್ದೇನು?

ಸಿಜೆ ರಾಯ್ ಸಾವಿನ ಕುರಿತು ಅಖಿಲ್ ಮಾರಾರ್ ಆಘಾತ ವ್ಯಕ್ತಪಡಿಸಿದ್ದು ಮಾತ್ರವಲ್ಲ, ಇದು ಅರಗಿಸಿಕೊಳ್ಳಲು ಸಾಧ್ಯವಾಗದ ಸಾವು ಎಂದಿದ್ದಾರೆ. ನಮಗೆ ಅರಗಿಸಿಕೊಳ್ಳಲಾಗದ ಸತ್ಯಗಳನ್ನು ಜೀವನ ನೀಡುತ್ತದೆ. ನಾವು ಎಷ್ಟೇ ನಿರಾಕರಿಸಿದರೂ, ಸಾವು ಎಂಬ ಪರಮ ಸತ್ಯ ನಮ್ಮನ್ನು ಮತ್ತು ನಮ್ಮ ಪ್ರೀತಿಪಾತ್ರರನ್ನು ಹುಡುಕಿ ಬರುತ್ತದೆ. ಆದರೆ ನಮಗೆ ಅದನ್ನು ಎಂದಿಗೂ ಒಪ್ಪಿಕೊಳ್ಳಲು ಅಥವಾ ಆ ಸತ್ಯವನ್ನು ಅಂಗೀಕರಿಸಲು ಸಾಧ್ಯವಾಗುವುದಿಲ್ಲ. ಅನೇಕ ಸಾವುಗಳು ನಮ್ಮ ಕಣ್ಣ ಮುಂದೆ ಸಂಭವಿಸಿದಾಗ, ಅವೆಲ್ಲವೂ ನಮ್ಮನ್ನು ಬೆಚ್ಚಿಬೀಳಿಸುತ್ತವೆ. ಹಲವು ಸಾವುಗಳ ಬಗ್ಗೆ ಕೇಳಿದಾಗ, 'ಅಯ್ಯೋ, ನಿಜವಾಗಿಯೂ ಶಾಕ್ ಆಯಿತು' ಎಂದೆಲ್ಲಾ ಹೇಳುತ್ತೇವೆ. ನಿಜ ಹೇಳಬೇಕೆಂದರೆ, ಬಾಯಿ ಮಾತಿಗೆ ಹೇಳುವುದು ಹೆಚ್ಚು. ಆದರೆ ನನಗೆ ಅಕ್ಷರಶಃ ಆಘಾತಕಾರಿ, ಶಾಕ್ ಆದ ಸಾವು ಎಂದರೆ ಸಿಜೆ ರಾಯ್ ಅವರ ಸಾವು. ಈ ಹಿಂದೆ ಸುಶಾಂತ್ ಸಿಂಗ್ ಅವರ ಸಾವು ನನಗೆ ಆಘಾತ ನೀಡಿತ್ತು. ಸ್ವಾಭಾವಿಕವಾಗಿದ್ದರೂ ಅಬ್ದುಲ್ ಕಲಾಂ ಸರ್ ಅವರ ಸಾವೂ ನನಗೆ ನೋವುಂಟು ಮಾಡಿತ್ತು. ಇವರೆಲ್ಲರೂ ನೇರವಾಗಿ ನಮ್ಮೊಂದಿಗೆ ಯಾವುದೇ ಸಂಬಂಧವಿಲ್ಲ. ಎಲ್ಲೋ ನಾವು ನೋಡಿದ ಮುಖಗಳು ಅಷ್ಟೇ. ಆದರೆ ಅವರ ಸಾವು ನಮಗೆ ನೋವನ್ನುಂಟು ಮಾಡುತ್ತದೆ.

ಸಿಜೆ ರಾಯ್ ಸಾವು ಯಾಕೆ ಆಘಾತ

ರಾಯ್ ಸಿಜೆ ಸರ್ ಅವರ ಸಾವು ಯಾಕೆ ಆಘಾತ ನೀಡಿತು ಎಂದು ಕೇಳಿದರೆ, ನೇರವಾಗಿ ಅವರಿಗೂ ನನಗೂ ಸಂಬಂಧವಿಲ್ಲ. ಬಿಗ್ ಬಾಸ್ ಫಿನಾಲೆಯ ನಂತರ ನಾನು ಅವರನ್ನು ನೋಡಿಯೂ ಇಲ್ಲ. ಆದರೆ.. ಒಂದು ಕಾಲದಲ್ಲಿ ಏನೂ ಇಲ್ಲದವನ ಖಾತೆಗೆ 50 ಲಕ್ಷ ರೂಪಾಯಿ ಬಹುಮಾನ ನೀಡಿದ ವ್ಯಕ್ತಿ. ಕಳೆದ 18 ವರ್ಷಗಳಿಂದ ವಿವಿಧ ರಿಯಾಲಿಟಿ ಶೋಗಳಲ್ಲಿ ಬಹುಮಾನ ನೀಡಿದ ವ್ಯಕ್ತಿ. ನನ್ನಂತಹ ಅನೇಕರ ಜೀವನದಲ್ಲಿ ಬಹುಮಾನ ನೀಡಿ ಆಶೀರ್ವದಿಸಿ, ಅವರ ಜೀವನದಲ್ಲಿ ದೊಡ್ಡ ಬದಲಾವಣೆ ತಂದ ವ್ಯಕ್ತಿ. ಹಿಂದೆ ಒಂದು ಕ್ರೆಡಿಟ್ ಕಾರ್ಡ್ ತೆಗೆದುಕೊಂಡು ಮರುಪಾವತಿ ಮಾಡಲು ಸಾಧ್ಯವಾಗದೆ ಸಾಲದಲ್ಲಿ ಸಿಲುಕಿದ್ದವನು ನಾನು. ಸಣ್ಣ ಸಾಲ ತೆಗೆದುಕೊಂಡು ಮರುಪಾವತಿ ಮಾಡಲು ಆಗದೆ, ಒಂದು ವರ್ಷದಲ್ಲಿ ಹತ್ತು ಸಾವಿರ ರೂಪಾಯಿ ಕೂಡ ಕಟ್ಟಲಾಗದೆ ಸಾಲದಲ್ಲಿ ಸಿಲುಕಿದ್ದವನು. ಆರ್ಥಿಕವಾಗಿ ದೊಡ್ಡ ಸಮಸ್ಯೆಯಲ್ಲಿದ್ದವನು. ಅಂತಹ ನನ್ನ ಖಾತೆಗೆ 50 ಲಕ್ಷ ರೂಪಾಯಿ ಬಹುಮಾನ ನೀಡಿ, ನನ್ನನ್ನು ಆರ್ಥಿಕವಾಗಿ ಆಶೀರ್ವದಿಸಿ, ಜೀವನದಲ್ಲಿ ದೊಡ್ಡ ಬದಲಾವಣೆಗಳಿಗೆ ಕಾರಣವಾದ ವ್ಯಕ್ತಿ ಸಿಜೆ ರಾಯ್ ಎಂದು ಅಖಿಲ್ ಮಾರಾರ್ ಹೇಳಿದ್ದರೆ.

ಲಕ್ಷ್ಮಿ ದೇವಿಯ ಅನುಗ್ರಹ ಪಡೆದ ದೊಡ್ಡ ವ್ಯಕ್ತಿ ಅವರು. ಈ ವ್ಯಕ್ತಿಯಲ್ಲವೇ ನನ್ನ ಜೀವನದಲ್ಲಿ ಬದಲಾವಣೆ ತಂದಿದ್ದು. ಅಂತಹ ವ್ಯಕ್ತಿ ಯಾವ ಕಾರಣಕ್ಕಾಗಿ ನಿಧನರಾದರು ಎಂದು ತಿಳಿಯಲಾಗದ ಸ್ಥಿತಿ ಎಲ್ಲರಿಗೂ ಇದೆ. ಅಧಿಕಾರಿಗಳ ಕಿರುಕುಳವೋ, ರಾಜಕೀಯ ಒತ್ತಡವೋ, ಬೇರೆ ಯಾವುದೇ ಕಾರಣವೋ, ಅವರಂತಹ ವ್ಯಕ್ತಿ ಒಂದು ಕ್ಷಣದಲ್ಲಿ ತಾನು ಇನ್ನು ಈ ಭೂಮಿಯಲ್ಲಿ ಇರಬಾರದು ಎಂಬ ನಿರ್ಧಾರ ತೆಗೆದುಕೊಳ್ಳಲು ಕಾರಣವೇನಿರಬಹುದು. ವ್ಯಾಪಾರ ಕ್ಷೇತ್ರಕ್ಕೂ ಮತ್ತು ಕಾನ್ಫಿಡೆಂಟ್ ಗ್ರೂಪ್‌ಗೂ ಇದು ದೊಡ್ಡ ನಷ್ಟ. ಅವರ ಕುಟುಂಬದವರ ದೊಡ್ಡ ನೋವಿನಲ್ಲಿ ನಾನೂ ಪಾಲ್ಗೊಳ್ಳುತ್ತೇನೆ ಎಂದು ಬಿಗ್ ಬಾಸ್ ವಿನ್ನರ್ ಅಖಿಲ್ ಹೇಳಿದ್ದಾರೆ.