ಜಿರಳೆ ಹೆಂಡ್ತಿ ಮೈಮುಟ್ಟಿತು ಅಂತ ಸಿಟ್ಟಲ್ಲಿ ಅದನ್ನೇ ಹಾಲಲ್ಲಿ ಹಾಕಿ ಕುಡಿಯೋದಾ ಜಯಂತ್?
ಜಿರಳೆ ಹೆಂಡ್ತಿ ಮೈಮುಟ್ಟಿತು ಅಂತ ಸಿಟ್ಟಲ್ಲಿ ಅದನ್ನೇ ಹಾಲಲ್ಲಿ ಹಾಕಿ ಕುಡಿಯೋದಾ ಜಯಂತ್? ಲಕ್ಷ್ಮಿ ನಿವಾಸ ನಾಯಕನ ಕ್ಯಾರೆಕ್ಟರ್ಗೆ ಸುಸ್ತಾದ ಪ್ರೇಕ್ಷಕರು!
ಲಕ್ಷ್ಮಿ ನಿವಾಸ ಸೀರಿಯಲ್ ಪ್ರೇಮಿಗಳಿಗೆ ಅದರಲ್ಲಿಯೂ ಮಹಿಳೆಯರಿಗೆ ಜಯಂತ್ ಹೆಸ್ರು ಕೇಳಿದ್ರೇನೇ ಭಯ ಹುಟ್ಟೋಕೆ ಶುರುವಾಗುತ್ತೆ. ತಮ್ಮನ್ನು ಹುಚ್ಚನಂತೆ ಪ್ರೀತಿಸೋ ಗಂಡ ಬೇಕು ಎಂದು ಬಯಸುವ ಹೆಣ್ಣುಮಕ್ಕಳು ಈ ಜಯಂತ್ನನ್ನು ಒಮ್ಮೆ ನೋಡಿಬಿಟ್ಟರೆ ಲೈಫ್ನಲ್ಲಿ ಮದ್ವೆನೇ ಬೇಡಪ್ಪಾ ಎನ್ನುತ್ತಾರೆ. ಅಂಥ ಕ್ಯಾರೆಕ್ಟರ್ ಈತನದ್ದು. ಏಕೆಂದರೆ ಈ ಸೀರಿಯಲ್ ನಾಯಕ ಜಯಂತ್ ಸೈಕೋಪಾತ್ ಎನ್ನುವುದು ಈ ಸೀರಿಯಲ್ ವೀಕ್ಷಕರಿಗೆ ಗೊತ್ತು. ಈತನಿಗೆ ಪತ್ನಿಯ ಮೇಲೆ ಅದೆಷ್ಟು ಪ್ರೀತಿ ಎಂದರೆ ಅದೇ ಮುಳ್ಳಾಗುತ್ತಿದೆ. ಏಕೆಂದರೆ, ಈತನಿಗೆ ಪತ್ನಿಯ ಮೇಲೆ ಇರುವುದು ಕೇವಲ ಪ್ರೀತಿ ಅಲ್ಲ, ಇದು Obsessive Love Disorder. ಇದೇ ಕಾರಣಕ್ಕೆ ಪ್ರತಿ ಕ್ಷಣವೂ ಆತನಿಗೆ ಪತ್ನಿಯ ಮೇಲೆ ಸಂಶಯ. ಹಾಗೆಂದು ಸಂಶಯದ ಪಿಶಾಚಿ ಎಂದಲ್ಲ. ಕೆಲವು ಗಂಡಸರಿಗೆ ಮತ್ತು ಹೆಂಗಸರಿಗೆ ಕೂಡ ಸಂಶಯ ಎನ್ನುವುದು ಇರುತ್ತದೆ. ಪತಿ-ಪತ್ನಿ ಯಾರ ಜೊತೆಯಾದ್ರೂ ನಗುತ್ತಾ ಮಾಡಿದರೆ ಅದನ್ನು ಸಹಿಸುವುದಿಲ್ಲ. ಆದರೆ ಇಲ್ಲಿ ಜಯಂತ್ ಕ್ಯಾರೆಕ್ಟರ್ ಹಾಗಲ್ಲ. ಈತನಿಗೆ ಇರುವುದು ಪ್ರೇಮದ ಗೀಳು. ಪತ್ನಿಗೆ ಏನು ಬೇಕೋ ಎಲ್ಲವನ್ನೂ ಮಾಡುತ್ತಾನೆ. ಆದರೆ ಆಕೆ ಮಾತ್ರ ತನ್ನವಳಾಗಿಯೇ ಇರಬೇಕು ಎನ್ನುವ ಸ್ಥಿತಿ.
ಮನೆಯ ಒಳಗೆ, ಹೊರಗೆ ಎಲ್ಲಾ ಕಡೆಯೂ ಸಿಸಿಟಿವಿ ಹಾಕಿಸಿದ್ದಾನೆ. ಏಕೆಂದರೆ, ತನ್ನ ಪತ್ನಿ ತನಗೆ ಮಾತ್ರ ಸೇರಿದ್ದು. ಯಾರ ಬಳಿಯೂ ಆಕೆ ಮಾತನಾಡಬಾರದು ಎಂದು. ಅಷ್ಟೇ ಏಕೆ, ತನ್ನ ಅಕ್ಕ, ತಮ್ಮ, ಅಣ್ಣ, ಅಪ್ಪ- ಅಮ್ಮ ಯಾರ ಜೊತೆಯೂ ಅವಳು ಮಾತನಾಡಬಾರದು. ಏಕೆಂದರೆ ಪತ್ನಿ ಏನಿದ್ದರೂ ನನಗೊಬ್ಬಳಿಗೇ ಸೀಮಿತ ಎನ್ನುವುದು ಆತನ ಮನಸ್ಥಿತಿ. ಜಾಹ್ನವಿ ಮೇಲಿನ ಪತಿ ಜಯಂತನ ಅತಿಯಾದ ಪ್ರೀತಿ, ಕಾಳಜಿ ವೀಕ್ಷಕರಿಗೆ ಅಸಹನೀಯ ಎನಿಸುತ್ತಿದೆ. ಅದ್ಯಾವ ಮಟ್ಟಿಗೆ ಎಂದರೆ, ಈ ಮಟ್ಟಿಗಿನ ಪ್ರೀತಿ ಉರುಳಾಗುವ ಸಂಭವವೇ ಹೆಚ್ಚು ಎನ್ನುವಷ್ಟರ ಮಟ್ಟಿಗೆ. ಈ ನಡುವೆ ಜಾಹ್ನವಿ ಮಾತ್ರ ಪತಿ ಜಯಂತನ ಪ್ರೀತಿಗೆ ಕರಗಿದ್ದಾಳೆ ನಿಜ. ಆದರೆ, ಅವನ ಈ ಸ್ವಭಾವಕ್ಕೆ ಚಿಂತಿಸುತ್ತಿದ್ದಾಳೆ. ಆದರೂ ಪತಿಯ ಸ್ವಭಾವ ಅವಳಿಗೆ ತಿಳಿಯುತ್ತಲೇ ಇಲ್ಲ.
ಹುಚ್ಚನಂತೆ ಪ್ರೀತಿಸೋ ಗಂಡ ಸಿಗ್ಲಪ್ಪಾ ಅಂತೀರಾ? ದೇವ್ರು ವರ ಕೊಡೋ ಮೊದ್ಲು ಈ ಮಾನಸಿಕ ಸಮಸ್ಯೆ ಅರಿಯಿರಿ!
ಈಗ ಒಂದು ಸ್ಟೆಪ್ ಮುಂದಕ್ಕೆ ಹೋಗಿರೋ ಜಯಂತ್, ಮನುಷ್ಯರ ಮೇಲಷ್ಟೇ ಅಲ್ಲ, ಕ್ರಿಮಿ ಕೀಟಗಳೂ ತನ್ನ ಪತ್ನಿಯನ್ನು ಮುಟ್ಟಬಾರದು ಎನ್ನುತ್ತಿದ್ದಾನೆ! ಜಿರಳೆ ಒಂದು ಜಾಹ್ನವಿಯ ಮೈಮೇಲೆ ಹರಿದಾಡಿತು ಎನ್ನುವ ಕಾರಣಕ್ಕೆ ಅದನ್ನು ಎತ್ತಿ ನನ್ನ ಹೆಂಡತಿ ಮೈಯನ್ನೇ ಮುಟ್ಟುತ್ತಿಯಾ ನೀನು, ತಡಿ ನಿನಗೆ ಪನಿಷ್ಮೆಂಟ್ ಕೊಡುತ್ತೇನೆ ಎಂದು ಅದನ್ನು ಬಿಸಿಯಾಗಿರೋ ಹಾಲಿಗೆ ಹಾಕಿ ಸಾಯಿಸಿದ್ದಾನೆ. ನಂತರ ಅದನ್ನೇ ಕುಡಿದಿದ್ದಾರೆ. ಇದನ್ನು ನೋಡಿ ಜಾಹ್ನವಿ ಶಾಕ್ ಆಗಿದ್ದರೆ, ಅಲ್ಲಿದ್ದವರು ಮಾತ್ರ ಹುಬ್ಬೇರಿಸಿ ಬಿದ್ದೂ ಬಿದ್ದೂ ನಕ್ಕಿದ್ದಾರೆ!
ಅಷ್ಟಕ್ಕೂ ಇದು ನಡೆದಿರುವುದು ಲಕ್ಷ್ಮಿ ನಿವಾಸದ ಸೀರಿಯಲ್ ಸಂತೆಯಲ್ಲಿ ಗೌರಿ- ಗಣೇಶ ಹಬ್ಬದ ನಿಮಿತ್ತ ಚಿತ್ರದುರ್ಗದಲ್ಲಿ ನಡೆದ ಜೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಜಯಂತ್ ತನ್ನ ಕ್ಯಾರೆಕ್ಟರ್ ಪರಿಚಯವನ್ನು ವಿಭಿನ್ನ ರೀತಿಯಲ್ಲಿ ವೀಕ್ಷಕರಿಗೆ ಮಾಡಿಸಿದ್ದಾನೆ. ಅಂದಹಾಗೆ, ಜಯಂತ್ ನಿಜವಾದ ಹೆಸರು ದೀಪಕ್ ಸುಬ್ರಹ್ಮಣ್ಯ. ದಾಸ ಪುರಂದರ ಧಾರಾವಾಹಿಯಲ್ಲಿ ಪುರಂದರದಾಸ ಪಾತ್ರದಲ್ಲಿಅಭಿನಯಿಸುವ ಮೂಲಕ ಕಿರುತೆರೆ ಪ್ರೇಕ್ಷಕರ ಮನೆಮನ ತಲುಪಿದ್ದರು ಇವರು. ಈಗ ‘ಲಕ್ಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಜಯಂತ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಸೈಕೋ ಪತಿಯ ಕ್ಯಾರೆಕ್ಟರ್ ಮಾಡಿದ್ದಾರೆ. ಜಾಹ್ನವಿ ಪಾತ್ರದಲ್ಲಿ ಚಂದನಾ ಅನಂತಕೃಷ್ಣ ಅವರು ನಟಿಸುತ್ತಿದ್ದಾರೆ.
ಲಕ್ಷ್ಮೀ ನಿವಾಸ ಗಣೇಶೋತ್ಸವ ವಿಶೇಷ ಕಾರ್ಯಕ್ರಮ: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಯಶಸ್ವಿಯಾಗಿ ಮುಂದುವರೆಯುತ್ತಿದೆ. ಜೊತೆಗೆ ಟಿಆರ್‌ಪಿಯಲ್ಲಿ ಯಾವತ್ತೂ ಟಾಪ್ 5ರ ಒಳಗೆ ಇರುವ ಸೀರಿಯಲ್. ಇದರಲ್ಲಿ ಎರಡು ಫ್ಯಾಮಿಲಿ ಕಥೆ ಇದೆ. ಇದೀಗ ಲಕ್ಷ್ಮೀ ನಿವಾಸ ಧಾರಾವಾಹಿ ತಂಡದ ಜೊತೆ ಗಣೇಶೋತ್ಸವ ಆಚರಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಈ ವಿಶೇಷ ಕಾರ್ಯಕ್ರಮದ ವಿಡಿಯೋವನ್ನು ವೀಕ್ಷಿಸಿ.