ಬಿಗ್‌ ಬಾಸ್‌ ಕನ್ನಡ ಸೀಸನ್ 12 ಶೋನಲ್ಲಿ‌ ರಕ್ಷಿತಾ ಶೆಟ್ಟಿ ವಿರುದ್ಧ ರಿಷಾ ಗೌಡ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ಜಗಳ ಆಡಿದ್ದಾರೆ. ನಾನು ಹೇಳಿದ್ದನ್ನು ರಕ್ಷಿತಾ ಬೇರೆ ಥರ ಮಾತಾಡಿದ್ದಾಳೆ ಎಂದು ರಾಶಿಕಾ ಅವರು ಕೂಗಾಡಿದರು. ಇದೇ ವಿಚಾರಕ್ಕೆ ಕೆಲವರು ರಕ್ಷಿತಾರನ್ನು ವಿರೋಧಿಸಿದರು. 

ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ನಾನು ಹೇಳಿದ ಮಾತನ್ನು ರಕ್ಷಿತಾ ಸರಿಯಾಗಿ ರಘು ಬಳಿ ಹೇಳಿಲ್ಲ, ಬೆಂಕಿ ಹಚ್ಚಿದ್ದಾರೆ ಎಂದು ರಾಶಿಕಾ ಶೆಟ್ಟಿ, ರಿಷಾ ಗೌಡ, ಅಶ್ವಿನಿ ಗೌಡ ಅವರು ಮಾತನಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ರಕ್ಷಿತಾರಿಂದ ಜಗಳ ಆಯ್ತು ಎಂದು ಅಶ್ವಿನಿ ಟೀಂ ವಾದ ಮಾಡಿದೆ.

ಸಂಭಾಷಣೆ ಏನು?

ರಕ್ಷಿತಾ: ರಾಶಿಕಾ ಅವರೇ, ಅಡುಗೆ ಮಾಡಬೇಕು.

ರಘು: ಪಾತ್ರೆ ತೊಳೆಯಬೇಕು

ರಕ್ಷಿತಾ: ಪಾತ್ರೆ ತೊಳೆಯುತ್ತೇನೆ ( ಅಶ್ವಿನಿ ಗೌಡ ಬಳಿ ಅಡುಗೆ ಮಾಡಲ್ಲ ಅಂತ ರಾಶಿಕಾ ಪಿಸುದನಿಯಲ್ಲಿ ಹೇಳಿದರು)

ರಾಶಿಕಾ: ನಾನು ಪಾತ್ರೆ ತೊಳೆಯುತ್ತೇನೆ, ಟಾಸ್ಕ್‌ ಆಡಿ ಈಗ ಅಡುಗೆ ಮಾಡೋಕೆ ಕಷ್ಟ.

ರಕ್ಷಿತಾ: ಅವರು ಅಡುಗೆ ಮಾಡಲ್ವಂತೆ, ಈಗ ಅಡುಗೆ ಆಗಲ್ಲ.

ರಾಶಿಕಾ ಅವರು ರಘು ಬಳಿ ಬಂದು, “ನಾನು ಹೇಳಿದ್ದೊಂದು, ನೀನು ಹೇಳೋದೊಂದು” ಎಂದು ಕೂಗಿ ಅದನ್ನು ದೊಡ್ಡ ವಿಷಯ ಮಾಡಿದರು.

ರಾಶಿಕಾ ಶೆಟ್ಟಿ: ನನಗೆ ಅಡುಗೆ ಮಾಡಲು ಕಷ್ಟ ಎಂದಿದ್ದಾರೆ.

ರಕ್ಷಿತಾ ಅವರು ನನಗೆ ಅಡುಗೆ ಆಗಲ್ಲ, ಜಾಹ್ನವಿ, ಮಲ್ಲಮ್ಮ ಕೂಡ ಅಡುಗೆ ಮಾಡಲ್ಲ ಎಂದಿದ್ದಾರೆ.

ಅಶ್ವಿನಿ ಗೌಡ ಅವರು ಆಗ ನಾನು ಅಡುಗೆ ಮಾಡ್ತೀನಿ ಎಂದಿದ್ದಾರೆ.

ರಕ್ಷಿತಾ ಅವರು ಬೆಳಗ್ಗೆಯೇ ಅಡುಗೆ ಮಾಡಲ್ಲ ಅಂತ ಹೇಳಬೇಕು, ಅದನ್ನು ಬಿಟ್ಟು ಅವರಿಗೆ ಎಲ್ಲದಕ್ಕೂ ಜನ ಬೇಕು ಎಂದು ಹೇಳಿದ್ದಾರೆ, ಆಗ ಸೂರಜ್‌ ಕೂಡ ರಾಶಿಕಾ ಪರವಾಗಿ ಮಾತನಾಡಿದ್ದಾರೆ.

ಪ್ರತಿ ಬಾರಿ ಡಿಪೆಂಡೆನ್ಸಿ ಅಂತ ಹೇಳಬೇಡ, ಎಲ್ಲದಕ್ಕೂ ಮಧ್ಯೆ ಮಾತನಾಡಬೇಡ ಎಂದು ರಾಶಿಕಾ ಕೂಗಾಡಿದ್ದಾರೆ. ಅದಾದ ಬಳಿಕ ಅಶ್ವಿನಿ ಗೌಡ ಅವರು, “ಎಲ್ಲದಕ್ಕೂ ಮಾತನಾಡೋಕೆ ಬಂದ್ರೆ ಅಷ್ಟೇ, ನಿನ್ನೆ ರಾತ್ರಿಯಿಂದ ನೋಡ್ತಿದೀನಿ” ಎಂದು ಕೂಗಾಡಿದ್ದಾರೆ.

ಸೂರಜ್‌ ಅವರು, “ಎಲ್ಲದನ್ನೂ ಕೂಗಿ ಹೇಳಬೇಕು ಎನ್ನೋದಿಲ್ಲ. ಪಕ್ಕದಲ್ಲಿ ಹೋಗಿ ಕೇಳಬಹುದು” ಎಂದು ರಕ್ಷಿತಾಗೆ ಹೇಳಿದ್ದಾರೆ.

ಅಶ್ವಿನಿ ಗೌಡ ಅವರು, ರಾಶಿಕಾ ಬಳಿ ಹೋಗಿ, “ನಾವು ಎಲ್ಲದಕ್ಕೂ ಮಾತನಾಡೋದು ಬೇಡ, ಅವಳು ಯಾವ ಲೆವೆಲ್‌ಗೆ ಬೇಕಿದ್ರೂ ಹೋಗಿ ಮಾತನಾಡಬಹುದು” ಎಂದು ಹೇಳಿದ್ದಾರೆ.

ಆಮೇಲೆ ರಕ್ಷಿತಾ ಬಳಿ ಹೋಗಿ, “ನಮಗೂ ಗೌರವ ಇದೆ, ನಿನಗಿಂತ ಜಾಸ್ತಿ ನಮಗೆ ಗೌರವ ಇರುತ್ತದೆ. ನೀನು ಜಗಳ ಅಡುವಾಗ ಒಂದಿಷ್ಟು ಪದಗಳನ್ನು ಬಳಸುತ್ತೀಯಾ” ಎಂದು ಹೇಳಿದ್ದಾರೆ.

“ನೀನು ದೊಡ್ಡವರು ಅಂತ ನೋಡೋದಿಲ್ಲ, ಏನು ಬೇಕಿದ್ರೂ ಮಾತನಾಡ್ತೀಯಾ” ಎಂದು ರಿಷಾ ಗೌಡ ಕೂಡ, ರಕ್ಷಿತಾಗೆ ಕ್ಲಾಸ್‌ ತಗೊಂಡಿದ್ದಾರೆ.

ಆಮೇಲೆ ಗಿಲ್ಲಿ ನಟ, ರಘು ಅವರು ಗಾರ್ಡನ್‌ ಏರಿಯಾ ಬಳಿ ಮಾತನಾಡಿಕೊಂಡಿದ್ದಾರೆ. “ನಮ್ಮ ಕೈಗೆ ಪೆಟ್ಟಾಗಿದೆ, ನಾವು ಅಡುಗೆ ಮಾಡ್ತೀವಿ ಎಂದು ನಿನ್ನೆ ರಾತ್ರಿಯೇ ಅವರಿಬ್ಬರು ಹೇಳಿದ್ದರು. ಅವರವರು ಅವರ ಕೆಲಸವನ್ನು ಮಾಡಿದ್ರೆ ಏನೂ ಪೆಂಡಿಂಗ್‌ ಇರೋದಿಲ್ಲ” ಎಂದು ರಘು ಅವರು ಹೇಳಿದ್ದಾರೆ. ಆಗ ಗಿಲ್ಲಿ ನಟ ಅವರು, “ಈಗ ಅಡುಗೆ ಮಾಡೋಕೆ ಆಗೋದಿಲ್ಲ ಎಂದ್ರಾ?” ಎಂದಿದ್ದಾರೆ.

ಚಂದ್ರಪ್ರಭ ಹಾಗೂ ಅಭಿಷೇಕ್‌ ಶ್ರೀಕಾಂತ್‌ ಕೂಡ, ರಕ್ಷಿತಾ ಎಲ್ಲ ಕೆಲಸ ಮಾಡ್ತಾರೆ, ಅವಳನ್ನು ಎಲ್ಲರೂ ಯೂಸ್‌ ಮಾಡಿಕೊಳ್ತಿದ್ದಾರೆ ಎಂದು ಮಾತನಾಡಿಕೊಂಡಿದ್ದಾರೆ.

ಆಮೇಲೆ ಗಿಲ್ಲಿ ನಟ ಅವರು ಕ್ಯಾಂಟೀನ್‌ಗೆ ಬಂದು, ರಾಶಿಕಾ ಕೈಗೆ ಪೆಟ್ಟಾಗಿದೆ ಎಂದು ಅಣುಕಿಸಿದ್ದಾರೆ. ಆಗ ಅಶ್ವಿನಿ ಅವರು, “ನಿನಗೆ ಈ ಮನೆಯಲ್ಲಿ ಯಾರಿಗೆ ಏನೇ ಆದರೂ ಕೂಡ ಸಮಸ್ಯೆ ಆಗೋದಿಲ್ಲ, ಬೇಸರ ಆಗೋದಿಲ್ಲ” ಎಂದು ಹೇಳಿದ್ದಾರೆ.

ಕಿಚ್ಚನ ಪಂಚಾಯಿತಿ ದಿನ ರಾಶಿಕಾ ಅವರು ಅಡುಗೆ ಮಾಡೋದಿಲ್ಲ ಎಂದು ಹೇಳಿದ ವಿಡಿಯೋ ಪ್ಲೇ ಆಗಬೇಕು. ಆಗ ಆಟ ಶುರುವಾಗುವುದು.