ತುಮಕೂರು(ಅ.22): ಕುಣಿಗಲ್‌ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದ ನೀರಿಗಾಗಿ ನಾಗಮಂಗಲ ಮತ್ತು ಕುಣಿಗಲ್‌ ಎರಡು ತಾಲೂಕಿನ ರೈತರು ಹಾಗೂ ಜನಪ್ರತಿನಿಧಿಗಳು ಜಟಾಪಟಿ ನಡೆಸಿದರು ನೀರಿನ ಸೂಕ್ಷ್ಮತೆಯ ವಿಚಾರ ಮಂಡ್ಯ ಮತ್ತು ತುಮಕೂರು ಜಿಲ್ಲೆಯ ಅಧಿಕಾರಿಗಳು ಮತ್ತು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಜಲಾಶಯದಿಂದ ನಾಗಮಂಗಲ ತಾಲೂಕಿನ ಹಲವಾರು ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ ಯೋಜನೆಯನ್ನು ಈ ಹಿಂದಿನ ಸರ್ಕಾರ ಪ್ರಾರಂಭ ಮಾಡಿತ್ತು. ಆ ಸಂದರ್ಭದಲ್ಲಿ ರೈತ ಸಂಘ ಹಸಿರು ಸೇನೆಯ ಪದಾಧಿಕಾರಿಗಳು ಸ್ಥಳದಲ್ಲಿ ಪ್ರತಿಭಟನೆ ಮಾಡಿ ಕಾಮಗಾರಿ ಸ್ಥಗಿತಗೊಳಿಸಿದ್ದರು. ಬದಲಾದ ರಾಜಕೀಯ ವಿದ್ಯಮಾನದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ.

ನಾಗಮಂಗಲ ಶಾಕರ ಪಟ್ಟು:

ಈಗ ನಾಗಮಂಗಲ ಶಾಸಕ ಸುರೇಶ್‌ ಗೌಡ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಬೇಕೆಂದು ಅಧಿಕಾರಿಗಳ ಮೇಲೆ ಒತ್ತಡ ತಂದ ಹಿನ್ನೆಲೆಯಲ್ಲಿ ಮಾರ್ಕೋನಹಳ್ಳಿ ಜಲಾಶಯದ ಬಳಿ ನಾಗಮಂಗಲ ವ್ಯಾಪ್ತಿಗೆ ಸೇರಿದ ಪ್ರದೇಶದಲ್ಲಿ 144 ಸೆಕ್ಷನ್‌ ಜಾರಿ ಮಾಡಿ ಕಾಮಗಾರಿಯನ್ನು ಪುನರ್‌ ಆರಂಭಿಸಿದ್ದಾರೆ.

ತುಮಕೂರು: ಹೆಲ್ಮೆಟ್ ಜಾಗೃತಿಗಾಗಿ ಪೊಲೀಸರ ಬೈಕ್ ರ‍್ಯಾಲಿ

ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕುಣಿಗಲ್‌ ಶಾಸಕ ರಂಗನಾಥ್‌ ಭಾನುವಾರ ನಿಷೇಧಿತ ಪ್ರದೇಶಕ್ಕೆ ತೆರಳಿ ಪ್ರತಿಭಟನೆ ನಡೆಸಿ ಎರಡು ಜಿಲ್ಲೆಯ ಅಧಿಕಾರಿಗಳ ಸಮ್ಮುಖದಲ್ಲಿ ನೀರಾವರಿ ಸಲಹಾ ಸಮಿತಿ ನಡೆಯಬೇಕು ಎಂದು ಪಟ್ಟು ಹಿಡಿದ ಕಾರಣದಿಂದ ಸೋಮವಾರ ಮೂರು ಗಂಟೆಗೆ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗಿತ್ತು.

ಈ ಹಿನ್ನೆಲೆಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ್‌ ಪಟೇಲ್‌ ಅವರ ನೇತೃತ್ವದಲ್ಲಿ ಹಲವಾರು ರೈತರು ಸಂಘಟನೆಗೊಂಡು ಜಲಾಶಯ ಬಳಿ ಜಮಾಯಿಸಿದ್ದರು. ಅದರಂತೆ ಕುಣಿಗಲ್‌ ಶಾಸಕ ಡಾ ರಂಗನಾಥ್‌ ಮಾರ್ಕೋನಹಳ್ಳಿ ಜಲಾಶಯದ ಬಳಿ ರೈತರ ಸಭೆ ಮಾಡಿ ಸಮಸ್ಯೆಯನ್ನು ರೈತರಿಗೆ ತಿಳಿ ಹೇಳಿ ನಂತರ ಮೆರವಣಿಗೆ ಹೊರಟರು.

ಜಲಾಶಯಕ್ಕೆ ಬಂದೋಬಸ್ತ್‌:

ಜಲಾಶಯಕ್ಕೆ ತುಮಕೂರು ಜಿಲ್ಲಾ ಪೊಲೀಸರು ಬಂದೋಬಸ್‌್ತ ಮಾಡಿದ್ದ ಹಿನ್ನೆಲೆಯಲ್ಲಿ ರೈತರನ್ನು ತಡೆದು ನಿಲ್ಲಿಸಿದರು. ಕಾಮಗಾರಿ ಘಟನಾ ಸ್ಥಳಕ್ಕೆ ಹೋಗಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದ್‌ ಪಟೇಲ್‌ ಮತ್ತು ಜೆಡಿಎಸ್‌ ಯುವ ಮುಖಂಡ ಜಗದೀಶ್‌ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಇದಕ್ಕೆ ಉತ್ತರಿಸಿದ ಡಿವೈಎಸ್ಪಿ ರಾಮಲಿಂಗೇಗೌಡ ಕುಣಿಗಲ್‌ ತಹಸೀಲ್ದಾರ್‌ ಅಲ್ಲಿಗೆ ಹೋಗಿ ಸಮಸ್ಯೆಯ ಬಗ್ಗೆ ಮಾತನಾಡುತ್ತಾರೆ ಎನ್ನುತ್ತಿದ್ದಂತೆ ಆಕ್ರೋಶಗೊಂಡ ಆನಂದ್‌ ಪಟೇಲ್‌ ರೈತರ ಸಮಸ್ಯೆ ರೈತರಿಗೆ ಗೊತ್ತು ಅವರನ್ನು ಮಾತನಾಡಲು ಬಿಡಿ ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಂಡ್ಯ: ಒಂದು ಲವ್ ಸ್ಟೋರಿ.. ಮೂರು ಸಾವು...!

ನಂತರ ಕುಣಿಗಲ್‌ ಶಾಸಕ ರಂಗನಾಥ್‌ ಅವರನ್ನು ಮಾತ್ರ ನಾಗಮಂಗಲ ಗಡಿಯಲ್ಲಿದ್ದ ಅಧಿಕಾರಿಗಳ ಬಳಿ ಮಾತನಾಡಲು ಕಳುಹಿಸಿ ರೈತ ಸಂಘದ ಪದಾಧಿಕಾರಿಗಳು ಸೇರಿದಂತೆ ರೈತರನ್ನು ತಡೆ ಹಿಡಿದ ಪೊಲೀಸರು ನಿಮ್ಮ ಪರವಾಗಿ ಇಬ್ಬರು ಮಾತನಾಡುತ್ತಾರೆ ಎಂದು ಮನವಿ ಮಾಡಿದ್ದರು. ನಂತರ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಡಿ.ನಾಗರಾಜಯ್ಯ ಹಾಗೂ ಜೆಡಿಎಸ್‌ ಮುಖಂಡ ಜಗದೀಶ್‌ ಅವರನ್ನು ನೀರಾವರಿ ಸಲಹಾ ಸಮಿತಿ ಬಳಿಗೆ ಕಳುಹಿಸಲಾಯಿತು.