ದ ಬೀಸ್ಟ್; ಬಲು ಜೋರು ಅಮೆರಿಕ ಅಧ್ಯಕ್ಷರ ಕಾರಿನ ದರ್ಬಾರು
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕಾರ್ ಕ್ರೇಜ್ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಅವರು ಬಳಸುವ ಕಾರಂತೂ ಇಡೀ ಭೂಮಿಯಲ್ಲಿ ಎಲ್ಲೇ ಹುಡುಕಿದರೂ ಅಂಥದ್ದು ಮತ್ತೊಂದಿರಲಾರದು. ಹೌದು, ದ ಬೀಸ್ಟ್ ಹೆಸರಿನ ಕಾರು, ಹಲವಾರು ವೈಶಿಷ್ಠ್ಯಗಳನ್ನು ಹೊತ್ತಿದೆ. ಇದೀಗ ಫೆಬ್ರವರಿ 24, 25 ರಂದು ಟ್ರಂಪ್ ಭಾರತ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೀಸ್ಟ್ ಕೂಡಾ ಭಾರತಕ್ಕೆ ಬರುತ್ತಿದೆ. ಇದರ ಕೆಲ ವೈಶಿಷ್ಠ್ಯಗಳನ್ನಿಲ್ಲಿ ಕೊಡಲಾಗಿದೆ.
ಅಮೆರಿಕ ಅಧ್ಯಕ್ಷರ ಕಾರು ಬೀಸ್ಟ್ ಬಗ್ಗೆ ಬಹುತೇಕ ವಿಷಯಗಳು ರಾಜರಹಸ್ಯವೇ. ಹಾಗಿದ್ದೂ ಒಂದಿಷ್ಟು ವಿಷಯಗಳು ಲೀಕ್ ಆಗಿವೆ. ಇಷ್ಟೇ ವಿಷಯಗಳು ಸಾಕು, ಓದಿದವರು ಹುಬ್ಬೇರಿಸಲು. ಹೀಗೆ ಸಾರ್ವಜನಿಕವಾದ ಸಂಗತಿಗಳು ಯಾವುವು ನೋಡೋಣ ಬನ್ನಿ....
1. ಇದುವರೆಗೂ ಅಮೆರಿಕ ಅಧ್ಯಕ್ಷರು ಬಳಸಿದ ಕಾರಿನಂತಲ್ಲದೆ, ಬೀಸ್ಟ್ ಬಹಳವೇ ವಿಭಿನ್ನವಾಗಿದೆ. ನೋಡಲು ಕಾರ್‌ನಂತೆಯೇ ಇದ್ದರೂ ಸಾಮಾನ್ಯ ಕಾರುಗಳಿಗೂ ಈ ಬೀಸ್ಟ್‌ಗೂ ಅಜಗಜಾಂತರ. ಹೆಸರಿಗೆ ತಕ್ಕುದಾದ ಕೆಲಸ ನಿರ್ವಹಿಸುವ ಸಾಮರ್ಥ್ಯ ಇದರದ್ದು. ಹೆವಿ ಡ್ಯೂಟಿ ಕಮರ್ಷಿಯಲ್ ವಾಹನಗಳಲ್ಲಿ ಬಳಸುವ ಡೀಸೆಲ್ ಇಂಜಿನ್, ಟ್ರಾನ್ಸ್‌ಮಿಶನ್‌ಗಳನ್ನು ಬಳಸಲಾಗಿದೆ.
ವಾಟ್ಸಪ್‌ನಲ್ಲಿ 3 ಹಿಡನ್ ಫೀಚರ್: ನೋಡಿ ನೀವೂ ಹೇಳ್ತೀರಾ ಏನ್ ಸೂಪರ್ ಗುರೂ!...
2. 1910ರಿಂದಲೂ ಅಮೆರಿಕದ ಅಧ್ಯಕ್ಷರು ಕ್ಯಾಡಿಲಾಕ್ ಕಂಪನಿಯ ವಾಹನಗಳನ್ನೇ ಬಳಸುವುದು. ಹಾಗಿದ್ದೂ, 2018ರ ಮಾಡೆಲ್ ಬೀಸ್ಟ್ ಅವೆಲ್ಲವುಗಳಿಗಿಂತ ಹೆಚ್ಚು ವಿಭಿನ್ನವಾಗಿದೆ. ಶಸ್ತ್ರಸಜ್ಜಿತವಾದ, ಒಳಗೆ ಬಹಳ ಸ್ಥಳಾವಕಾಶವುಳ್ಳ ಐಶಾರಾಮಿ ಕಾರು ಇದಾಗಿದೆ. ಮುಂಭಾಗದಲ್ಲಿಅಶ್ರುವಾಯು ಗ್ರೆನೇಡ್ ಲಾಂಚರ್, ರಾತ್ರಿ ವೇಳೆಯೂ ಕಾರ್ಯ ನಿರ್ವಹಿಸುವ ಕ್ಯಾಮೆರಾಗಳಿರುತ್ತವೆ.
3. ಈ ಕಾರಿನ ಕಿಟಕಿಗಳನ್ನು ನಮ್ಮ ನಿಮ್ಮೆಲ್ಲರ ಕಾರುಗಳಂತೆ ಏರಿಸಿ ಇಳಿಸಲು ಬರುವುದಿಲ್ಲ. ಚಾಲಕನ ಬಾಗಿಲಿನ ಕಿಟಕಿಯನ್ನು ಅನಿವಾರ್ಯವೆಂದರೆ 3 ಇಂಚು ಕೆಳಗಿಳಿಸಬಹುದು. ಅದರ ಹೊರತಾದ ಇನ್ಯಾವುದೇ ಕಿಟಕಿಗಳನ್ನು ತೆರೆಯುವುದು ಸಾಧ್ಯವಿಲ್ಲ. ಈ ಕಿಟಕಿಗಳಿಗೆ 5 ಪದರದ ಗಾಜನ್ನು ಹಾಗೂ ಪಾಲಿಕಾರ್ಬೊನೇಟ್ ಶೀಟ್‌ನ್ನು ಬಳಸಲಾಗಿದೆ. ಇನ್ನು ಬಾಗಿಲುಗಳಂತೂ ಭದ್ರ ಕೋಟೆಯ ಹೆಬ್ಬಾಗಿಲೇ ಸರಿ. ಬೋಯಿಂಗ್ 757 ವಿಮಾನದಲ್ಲಿ ಬಳಸುವ 8 ಇಂಚಿನಷ್ಟು ದಪ್ಪದ ಬಾಗಿಲುಗಳಿದ್ದು, ಕೆಮಿಕಲ್ ವೆಪನ್ ನಿರೋಧಕ ವ್ಯವಸ್ಥೆ ಹೊಂದಿದೆ. ಯಾವ ಬಾಗಿಲುಗಳಿಗೂ ಕೀಹೋಲ್ ಇಲ್ಲ. ಈ ಬಾಗಿಲುಗಳನ್ನು ಹೇಗೆ ತೆರೆಯುವುದು ಎಂಬುದು ಸೀಕ್ರೆಟ್ ಸರ್ವೀಸ್‌ಗೆ ಮಾತ್ರ ತಿಳಿದಿರುತ್ತದೆ. ಇಡೀ ಭೂಮಿಯಲ್ಲೇ ಬೀಸ್ಟನ್ನು ಮೀರಿಸುವ ವಾಹನ ಮತ್ತೊಂದು ಇಲ್ಲ ಎಂದರೆ ಅತಿಶಯೋಕ್ತಿಯಲ್ಲ.
4. ಅಮೆರಿಕ ಅಧ್ಯಕ್ಷರ ಕಾರು ಚಲಾಯಿಸುವವರಿಗೆ ಸೇನೆಯೇ ತರಬೇತಿ ನೀಡುತ್ತದೆ. ಎಂಥದೇ ಪರಿಸ್ಥಿತಿ ಬಂದರೂ ಎದೆಗುಂದದೇ ಎದುರಿಸುವ ತರಬೇತಿ ನೀಡಲಾಗಿರುತ್ತದೆ. ಕಾರನ್ನು 180 ಡಿಗ್ರಿಗೆ ಸುಯ್ಯೆಂದು ತಿರುಗಿಸುವ, ಎದುರಾಳಿಗಳ ದಿಕ್ಕು ತಪ್ಪಿಸುವ ತಾಕತ್ತು ಇವರದು. ಚಾಲಕನ ಕ್ಯಾಬಿನ್‌ನಲ್ಲಿ ಅತ್ಯುತ್ತಮ ಸಂವಹನ ವ್ಯವಸ್ಥೆ ಹಾಗೂ ಜಿಪಿಎಸ್ ಟ್ರ್ಯಾಕಿಂಗ್ ಸಿಸ್ಟಂ ಇದೆ. ದೇಶದ ಉಪಾಧ್ಯಕ್ಷರು ಮತ್ತು ಪೆಂಟಗನ್ ಜತೆಗೆ ಅಧ್ಯಕ್ಷರಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಸಂವಹನ ವ್ಯವಸ್ಥೆ ಇರುತ್ತದೆ.
ಸಾಯಲು ಸಜ್ಜಾದ ನಕ್ಷತ್ರ: ಭೂಮಿಗೇನು ಕಾದಿದೆ ಗಂಡಾಂತರ?...
5. ಸಾಮಾನ್ಯರ ಕಾರುಗಳಿಗೇ ಪಂಕ್ಚರ್‌ರಹಿತ ಟಯರ್‌ಗಳನ್ನು ಈಗ ಅಳವಡಿಸಲಾಗಿರುತ್ತದೆ. ಅಂದ ಮೇಲೆ ಅಮೆರಿಕ ಅಧ್ಯಕ್ಷರ ಕಾರಿನ ಟಯರುಗಳು ಇನ್ನೂ ವಿಶೇಷವಾಗಿರಬೇಕಲ್ಲವೇ? ಟಯರ್ ಸ್ಫೋಟಗೊಂಡರೂ ಕಾರು ಚಲಿಸುವಂಥ ವ್ಯವಸ್ಥೆ ಇದೆ. ಸ್ಟೀಲ್, ಟೈಟಾನಿಯಂ, ಅಲ್ಯುಮಿನಿಯಂ ಮತ್ತು ಸೆರಾಮಿಕ್ಸ್ ಸೇರಿಸಿ ತಯಾರಿಸಿದ ಲೋಹದಿಂದ ಕಾರಿನ ಬಾಡಿ ಸಿದ್ಧವಾಗಿದೆ. ಇಡೀ ಕಾರು ಗುಂಡು ನಿರೋಧಕ ವ್ಯವಸ್ಥೆ ಹೊಂದಿದೆ.
6. ಮುಂಬದಿಯಲ್ಲಿ ಚಾಲಕ ಹಾಗೂ ಅಮೆರಿಕ ಅಧ್ಯಕ್ಷರ ಮುಖ್ಯ ಸೀಕ್ರೆಟ್ ಸರ್ವೀಸ್ ಏಜೆಂಟ್ ಕುಳಿತುಕೊಳ್ಳುತ್ತಾರೆ. ಹಿಂಬದಿಯಲ್ಲಿ ಅಮೆರಿಕ ಅಧ್ಯಕ್ಷರ ಹೊರತಾಗಿಯೂ ನಾಲ್ಕು ಜನರು ಕುಳಿತುಕೊಳ್ಳಲು ಸೀಟ್ ವ್ಯವಸ್ಥೆ ಇದೆ. ಅಧ್ಯಕ್ಷರಿಗೆ ಕಾರಿನೊಳಗೇ ಗಾಜಿನ ಕ್ಯಾಬಿನ್ ಇದ್ದು, ಎಮರ್ಜೆನ್ಸಿ ಎಂದರೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಇದೆ. ಪ್ಯಾನಿಕ್ ಬಟನ್ ಇದೆ. ಅಷ್ಟೇ ಅಲ್ಲದೆ, ಟ್ರಂಪ್ ರಕ್ತದ ಮಾದರಿಯನ್ನು ಹೊಂದಿದ ಹಲವು ಬಾಟಲ್‌ಗಳು ಇದರೊಳಗಿರುವ ರೆಫ್ರಿಜರೇಟರ್‌ನಲ್ಲಿ ಸದಾ ಲಭ್ಯವಿರುತ್ತವೆ.
7. ದ ಬೀಸ್ಟ್ ಜೊತೆಗೆ ಬರುವ ಬೆಂಗಾವಲು ವಾಹನಗಳಲ್ಲಿ ಅಣ್ವಸ್ತ್ರ, ರಾಸಾಯನಿಕ ಅಥವಾ ಜೈವಿಕ ಸೇರಿದಂತೆ ಯಾವುದೇ ರೀತಿಯ ದಾಳಿ ನಡೆಸಿದರೂ ಪ್ರತಿದಾಳಿ ನಡೆಸುವ ವ್ಯವಸ್ಥೆ ಹಾಗೂ ಯೋಧರನ್ನು ಹೊಂದಿದ ಟ್ರಕ್, ಸ್ಯಾಟಲೈಟ್ ಕಮ್ಯೂನಿಕೇಶನ್ ಸಾಧಿಸಬಲ್ಲ ಎಸ್‌ಯುವಿ, ಡ್ರೋನ್‌ಗಳನ್ನು ಗುರುತಿಸುವ ವಾಹನ, ಸಂವಹನ ವ್ಯವಸ್ಥೆಗಳನ್ನು ಯಾವುದೇ ಕ್ಷಣದಲ್ಲಿ ಜಾಮ್‌ಗೊಳಿಸುವ ಸಾಮರ್ಥ್ಯದ ವಾಹನ, ಅಧ್ಯಕ್ಷರ ವೈದ್ಯರು, ಸೇನಾಧಿಕಾರಿಗಳು, ಭದ್ರತಾ ಸಿಬ್ಬಂದಿಗಳನ್ನೊಳಗೊಂಡ ವಾಹನಗಳಿರುತ್ತವೆ.
8. ಬೀಸ್ಟ್‌ನ ಹೊಟ್ಟೆ ತೆರೆದರೆ ಅಲ್ಲಿ ಬೆಂಕಿ ತಣಿಸುವ, ಆಮ್ಲಜನಕ ಸಪ್ಲೈ ಮಾಡುವ ಟ್ಯಾಂಕ್‌ಗಳಿವೆ. ಶಾಟ್‌ಗನ್‌ಗಳು, ಗ್ರೆನೇಡ್ ಲಾಂಚರ್ಸ್, ಟಿಯರ್ ಗ್ಯಾಸ್ ಕ್ಯಾನಿಸ್ಟರ್ಸ್ ಮುಂತಾದವುಗಳ ಶೇಖರಣೆ ಇದೆ. ಪಂಪ್-ಆ್ಯಕ್ಷನ್ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಅತ್ಯಾಧುನಿಕ ಗನ್‌ಗಳು, ಅಶ್ರುವಾಯು ಫಿರಂಗಿಗಳು ಇರುತ್ತವೆ.
9. ಬೀಸ್ಟ್ ಎಂಬುದು ಏಕೈಕ ಕಾರ್ ಅಲ್ಲ. ನೋಡಲು ಬೀಸ್ಟ್‌ನಂತೆಯೇ ಇರುವ ಹಲವು ಕಾರ್‌ಗಳು ಅಮೆರಿಕದ ಸೀಕ್ರೆಟ್ ಸರ್ವಿಸ್ ಬಳಿ ಇವೆ. ಆದರೆ, ಅವೆಲ್ಲವೂ ಕೆಲಸಕಾರ್ಯಗಳಲ್ಲಿಯೂ ಬೀಸ್ಟ್‌ಗೆ ಸಮವೇ ಎಂಬುದು ದೊಡ್ಡ ರಹಸ್ಯವಾಗಿದೆ. ಮತ್ತೆ ಕೆಲವನ್ನು ವಿದೇಶಿ ವಿಐಪಿಗಳು ವಾಷಿಂಗ್ಟನ್‌ಗೆ ಬಂದಾಗ ಬಳಕೆಗೆ ತೆಗೆಯಲಾಗುತ್ತದೆ. ಕೆಲವೊಮ್ಮೆ ಅಧ್ಯಕ್ಷರು ಶೆವರ್ಲೆಟ್ ಅಥವಾ ಪ್ರಿವೋಸ್ಟ್ ಬಸ್ ಕೂಡಾ ಬಳಸುವುದಿದೆ. ಇವು ಕೂಡಾ ಸಂಪೂರ್ಣ ಶಸ್ತ್ರಸಜ್ಜಿತ ಹಾಗೂ ಗುಂಡು ನಿರೋಧಕ.
10. ಬೀಸ್ಟ್‌ನಲ್ಲಿ ಇಷ್ಟೆಲ್ಲ ವ್ಯವಸ್ಥೆ ಅಳವಡಿಸಿದ್ದರಿಂದ ಇದು 9 ಟನ್‌ನಷ್ಟು ಭಾರವಿದ್ದು, ಇತರೆ ಕಾರುಗಳಷ್ಟು ವೇಗವಾಗಿ ಓಡಲಾರದು. ಇದು ಗಂಟೆಗೆ 97 ಕಿಲೋಮೀಟರ್‌ನಷ್ಟು ವೇಗವಾಗಿ ಮಾತ್ರ ಚಲಿಸಬಲ್ಲದು. ಅಮೆರಿಕ ಅಧ್ಯಕ್ಷರು ಜಗತ್ತಿನ ಯಾವ ಮೂಲೆಗೇ ಹೋದರೂ ಅಲ್ಲಿಗೆ ಹೋಗುತ್ತದೆ ಬೀಸ್ಟ್. ಸೀಕ್ರೆಟ್ ಸರ್ವೀಸ್ ಬಳಿ ಈ ಕಾರನ್ನು ಸಾಗಿಸಲು ಮಿಲಿಟರಿ ಟ್ರಾನ್ಸ್‌ಪೋರ್ಟ್ ಏರ್‌ಕ್ರಾಫ್ಟ್ ಇದೆ.