Asianet Suvarna News Asianet Suvarna News

ಬೀದಿಯಲ್ಲಿ ಪ್ರತಿಭಟಿಸಿದಳು, ಮೃಗದಂತೆ ಎಳೆದಾಡಿದರು: ವಿನೇಶ್ ಫೊಗಾಟ್, ನೀನು ಹೆಣ್ಣಲ್ಲ, ಹೆಣ್ಣು ಹುಲಿ!

ದೆಹಲಿಯ ಬೀದಿ ಬದಿ ಕುಳಿತು ನ್ಯಾಯ ಕೇಳಿದ್ದ  ವಿನೇಶ್ ಫೋಗಾಟ್ ಇದೀಗ ಕೆಚ್ಚೆದೆಯ ಹೋರಾಟದ ಮೂಲಕ ಕುಸ್ತಿಯಲ್ಲಿ ಭಾರತಕ್ಕೆ ಪದಕ ಖಚಿತಪಡಿಸಿದ್ದಾರೆ. ಫೈನಲ್ ಪ್ರವೇಶಿಸಿರುವ ವಿನೇಶ್ ಫೋಗಾಟ್ ಯಶೋಗಾಥೆ ಇಲ್ಲಿದೆ.

Wrestler vinesh phogat confirms medal in Paris Olympics despite many hurdles ckm
Author
First Published Aug 6, 2024, 11:36 PM IST | Last Updated Aug 6, 2024, 11:36 PM IST

ಸುದರ್ಶನ್, ಕ್ರೀಡಾಪತ್ರಕರ್ತ

ಅಬ್ಬಾ..ಎಂಥಾ ಆತ್ಮಸ್ಥೈರ್ಯ ಅದು..! ಅವಳು ತನ್ನವರಿಗಾಗಿ ಕಣ್ಣೀರಿಟ್ಟಳು.. ಬೀದಿಯಲ್ಲಿ ಕುಳಿತು ಪ್ರತಿಭಟಿಸಿದಳು.. ಆಕೆಯನ್ನು ಮೃಗದಂತೆ ಹಿಡಿದು ಎಳೆದಾಡಿದರು.. ಆಕೆ ಕೈ ಮುಗಿದಳು.. ಅದೇ ಹೆಣ್ಣು.. ಅದೇ ಹೆಣ್ಣು ಹುಲಿ ಇವತ್ತು ಪ್ಯಾರಿಸ್ ಒಲಿಂಪಿಕ್ಸ್’ನ ಕುಸ್ತಿ ಕಣದಲ್ಲಿ ದೇಶಕ್ಕೆ ಪದಕ  ಗೆದ್ದುಕೊಟ್ಟಿದ್ದಾಳೆ.

ಆ ಪ್ರತಿಭಟನೆ, ಆ ನೋವು, ಆ ಹತಾಶೆ, ಆ ಆಕ್ರೋಶ.. ಒಲಿಂಪಿಕ್ಸ್ ಅಖಾಡಕ್ಕಿಳಿದ ಮೇಲೆ ಇದಾವುದೂ ಆಕೆಯನ್ನು ಅಧೀರಳನ್ನಾಗಿಸಲಿಲ್ಲ.. ಆಕೆ ಯೋಧೆಯಂತೆ ಹೋರಾಡಿದಳು.. 

ಕುಸ್ತಿ ಕಣದ ‘ಲೇಡಿ ಬಾಹುಬಲಿ’, ಟೋಕಿಯೊ ಒಲಿಂಪಿಕ್ಸ್’ನ ಚಿನ್ನದ ಪದಕ ವಿಜೇತೆ, ಜಪಾನ್’ನ ಯೂಯಿ ಸುಸಾಕಿಯನ್ನು ಪ್ರೀ ಕ್ವಾರ್ಟರ್ ಫೈನಲ್’ನಲ್ಲಿ ಹೊಸಕಿ ಹಾಕಿದ ವಿನೇಶ್ ಫೊಗಾಟ್, ಕ್ವಾರ್ಟರ್ ಫೈನಲ್’ನಲ್ಲಿ ಉಕ್ರೇನ್’ನ ಕುಸ್ತಿಪಟುವನ್ನು ಮಕಡಾ ಮಲಗಿಸಿ ಸೆಮಿಫೈನಲ್, ಅಲ್ಲಿಂದ ಕ್ಯೂಬಾದ ಪ್ರತಿಸ್ಪರ್ಧಿ ಗುಜ್ಮನ್ ವಿರುದ್ಧ ಗೆದ್ದು ಫೈನಲ್ ತಲುಪಿದ್ದಾಳೆ. ಒಲಿಂಪಿಕ್ಸ್ ಫೈನಲ್ ತಲುಪಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ವಿನೇಶ್ ಫೊಗಾಟ್. ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಚಿನ್ನ ಅಥವಾ ಬೆಳ್ಳಿ ಖಚಿತ. ಏನೇ ಗೆದ್ದರೂ ಅದು ಚರಿತ್ರೆ. 

ರಕ್ತ ಚೆಲ್ಲಿದರೂ ಪದಕ ಗೆಲ್ಲಲಾಗಲಿಲ್ಲ..ಚಿಂತೆ ಬೇಡ, ಮುಂದಿನ ಬಾರಿ ಚಿನ್ನ ನಿನ್ನದೇ ‘ಲಕ್ಷ್ಯ’

ಪ್ರೀ ಕ್ವಾರ್ಟರ್ ಫೈನಲ್’ನಲ್ಲಿ ಯೂಯಿ ಸುಸಾಕಿ ವಿರುದ್ಧದ ವಿನೇಶ್ ವಿಜಯದ ಬಗ್ಗೆ ಇಡೀ ಜಗತ್ತೇ ಮಾತನಾಡುತ್ತಿದೆ, ಅಚ್ಚರಿ ಪಡುತ್ತಿದೆ. ಕಾರಣವೂ ಇದೆ.  

ವಿನೇಶ್ ಫೊಗಾಟ್ ಹಾಕಿದ ಪಟ್ಟುಗಳಿಗೆ ಮಣ್ಣು ಮುಕ್ಕಿದ ಯೂಯಿ ಸುಸಾಕಿ ಇದ್ದಾಳಲ್ಲಾ.. ಆಕೆ ಅದೆಂಥಾ ಬಲಶಾಲಿ ಎಂದರೆ, ಕಳೆದ 14 ವರ್ಷಗಳಲ್ಲಿ ಆ ಹೆಣ್ಣು ಸೋತಿರುವುದು ಕೇವಲ ಮೂರೇ ಮೂರು ಪಂದ್ಯಗಳನ್ನು. ಅದೂ ತನ್ನದೇ ದೇಶದ ಯೂಕಿ ಐರಿಯ ಎದುರು. ಆಕೆಯನ್ನು ಬಿಟ್ಟರೆ ಸುಸಾಕಿಯನ್ನು ಸೋಲಿಸಿದ ಮತ್ತೊಬ್ಬ ಕುಸ್ತಿಪಟು ಈ ಜಗತ್ತಿನಲ್ಲೇ ಇಲ್ಲ.

ಟೋಕಿಯೊ ಒಲಿಂಪಿಕ್ಸ್’ನಲ್ಲಿ ಒಂದೇ ಒಂದು ಅಂಕವನ್ನು ಎದುರಾಳಿಗೆ ಬಿಟ್ಟುಕೊಡದೆ ಸ್ವರ್ಣ ಪದಕ ಗೆದ್ದಿದ್ದವಳು ಈ ಸುಸಾಕಿ. ಅಂಥಾ ವೀರವನಿತೆಯ ವಿರುದ್ಧ, ಜಗತ್ತಿನ ನಂ.1 ಕುಸ್ತಿಪಟುವಿನ ವಿರುದ್ಧ ವಿನೇಶ್ ಫೊಗಾಟ್ ಗೆದ್ದು ಬೀಗಿದ ಪರಿ ನಿಜಕ್ಕೂ ಅದ್ಭುತ.

ಭಾರತೀಯ ಕುಸ್ತಿ ಫೆಡರೇಶನ್’ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತಲ್ಲಾ.. ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟಿಸಿದ್ದ ಕುಸ್ತಿಪಟುಗಳಲ್ಲಿ ಈ ವಿನೇಶ್ ಫೊಗಟ್ ಕೂಡ ಒಬ್ಬಳು. ದೆಹಲಿಯ ಬೀದಿ ಬದಿ ಕುಳಿತು ನ್ಯಾಯ ಕೇಳಿದ್ದ ಕುಸ್ತಿಪಟುಗಳನ್ನು “ಇವರು ದೇಶಕ್ಕೆ ಹೆಮ್ಮೆ ತಂದ ಕ್ರೀಡಾಪಟುಗಳು” ಎಂಬುದನ್ನೂ ನೋಡದೆ ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳಲಾಗಿತ್ತು. 

ಒಲಿಂಪಿಕ್ಸ್ ಅಖಾಡಕ್ಕೆ ಕಾಲಿಟ್ಟಾಗ ವಿನೇಶ್ ಫೊಗಾಟ್ ಮೇಲೆ ಇದ್ದ ಒತ್ತಡ ಅಷ್ಟಿಷ್ಟಲ್ಲ. ಒಂದು ವೇಳೆ ಸೆಮಿಫೈನಲ್ ಪ್ರವೇಶಿಸಲಾಗದೆ ಸೋತಿದ್ದರೆ..? ಈ ಹೆಣ್ಣು ಮಗಳು ಅದೆಷ್ಟು ಟೀಕೆ, ನಿಂದನೆಗಳನ್ನು ಸಹಿಸಿಕೊಳ್ಳಬೇಕಿತ್ತೋ ಗೊತ್ತಿಲ್ಲ.. 

ಪ್ರಿಯ ಸಹೋದರಿ,

ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ದೇಶದ ಸ್ವರ್ಣ ಪದಕದ ಕನಸಿಗೆ ಇನ್ನು ಎರಡು ಹೆಜ್ಜೆಗಳಷ್ಟೇ ಬಾಕಿ.. Go for Gold🇮🇳

ಪ್ಯಾರಿಸ್ ಒಲಿಂಪಿಕ್ಸ್‌: ಫೈನಲ್ ಪ್ರವೇಶಿಸಿ ಇತಿಹಾಸ ಬರೆದ ವಿನೇಶ್ ಫೋಗಟ್
 

Latest Videos
Follow Us:
Download App:
  • android
  • ios