Asianet Suvarna News Asianet Suvarna News

ಪ್ಯಾರಿಸ್ ಒಲಿಂಪಿಕ್ಸ್‌: ಫೈನಲ್ ಪ್ರವೇಶಿಸಿ ಇತಿಹಾಸ ಬರೆದ ವಿನೇಶ್ ಫೋಗಟ್

ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

Paris Olympics Vinesh Phogat Beats Yusneylis Guzman enters final kvn
Author
First Published Aug 6, 2024, 10:46 PM IST | Last Updated Aug 7, 2024, 9:03 AM IST

ಪ್ಯಾರಿಸ್: ಭಾರತದ ತಾರಾ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್‌ ಮಹಿಳೆಯರ 50 ಕೆ.ಜಿ ಪ್ರಿಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಕ್ಯೂಬಾದ ಯುಸ್‌ನೈಲೆಸ್‌ ಗುಜ್ಮನ್‌ ಎದುರು ದಿಟ್ಟ ಹೋರಾಟ ತೋರಿದ ವಿನೇಶ್ ಇದೀಗ ಫೈನಲ್ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿನೇಶ್ ಫೋಗಟ್ ಇದೀಗ ದೇಶಕ್ಕೆ 4ನೇ ಒಲಿಂಪಿಕ್ ಪದಕ ಖಚಿತಪಡಿಸಿಕೊಂಡಿದ್ದಾರೆ. ಕಳೆದೆರಡು ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲೇ ಮುಗ್ಗರಿಸಿದ್ದ ವಿನೇಶ್ ಫೋಗಟ್ ಕೊನೆಗೂ ಒಲಿಂಪಿಕ್ಸ್‌ನಲ್ಲಿ ಪದಕದ ಬರ ನೀಗಿಸಿಕೊಂಡಿದ್ದಾರೆ. ಕ್ಯೂಬಾ ಕುಸ್ತಿಪಟು ಎದುರು ವಿನೇಶ್ 5-0 ಅಂತರದಲ್ಲಿ ಜಯ ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಇದರೊಂದಿಗೆ ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.

ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಹಾಗೂ ವಿಶ್ವ ನಂ.1 ಕುಸ್ತಿಪಟುವಾಗಿದ್ದ ಜಪಾನಿನ ಯ್ಯೂ ಸುಸುಕಿ ವಿರುದ್ದ 3-2 ಅಂತರದಲ್ಲಿ ರೋಚಕ ಗೆಲುವು ಸಾಧಿಸಿದ್ದ ಫೋಗಟ್, ಕ್ವಾರ್ಟರ್‌ ಫೈನಲ್‌ನಲ್ಲಿ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದರು. ಉಕ್ರೇನ್‌ನ ಮೂರು ಬಾರಿ ಕಾಮನ್‌ವೆಲ್ತ್ ಗೇಮ್ಸ್‌ ಚಿನ್ನದ ಪದಕ ವಿಜೇತೆ ಒಕ್ಸಾನಾ ಲಿವೀಚ್‌ ಎದುರು 7-5 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮೀಸ್‌ಗೆ ಲಗ್ಗೆಯಿಟ್ಟಿದ್ದರು. 

ವಿನೇಶ್ ಫೋಗಟ್ 2016ರ ರಿಯೋ ಒಲಿಂಪಿಕ್ಸ್‌ ಹಾಗೂ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲೇ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿದ್ದರು. ವಿನೇಶ್ ಫೋಗಟ್ ಈ ವರ್ಷಾರಂಭದಲ್ಲಿ ನಡೆದ ಏಷ್ಯನ್ ಒಲಿಂಪಿಕ್ ಕ್ವಾಲಿಫೈಯರ್‌ನಲ್ಲಿ 50 ಕೆ.ಜಿ. ವಿಭಾಗದಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.

ಭಾರತಕ್ಕೆ 4ನೇ ಒಲಿಂಪಿಕ್ಸ್ ಪದಕ ಖಚಿತ:

ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಇದುವರೆಗೂ ಭಾರತದ ಶೂಟರ್‌ಗಳು ಮೂರು ಕಂಚಿನ ಪದಕ ಜಯಿಸಿದ್ದರು. ಇದೀಗ ಕುಸ್ತಿ ಮೂಲಕ ಮೊದಲ ಹಾಗೂ ಒಟ್ಟಾರೆ 4ನೇ ಪದಕ ಖಚಿತವಾಗಿದೆ. 
 

Latest Videos
Follow Us:
Download App:
  • android
  • ios