ಅಪಘಾತದ ಬಳಿಕ ಕುಸ್ತಿ ಬಿಟ್ಟು ಜಾವೆಲಿನ್ ಹಿಡಿದ ಸುಮಿತ್‌ಗೆ ಒಲಿದ ಚಿನ್ನ!
* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಸುಮಿತ್ ಅಂಟಿಲ್
* ಸುಮಿತ್ ಅಂಟಿಲ್ ಹರ್ಯಾಣದ ಸೋನೆಪತ್ ಮೂಲದವರು
* ಕುಸ್ತಿಪಟುವಾಗಿದ್ದ ಸುಮಿತ್, ಇದೀಗ ದೇಶಕ್ಕೆ ಚಿನ್ನ ಗೆದ್ದಿದ್ದಾರೆ
ನವದೆಹಲಿ(ಆ.31): ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ವಿಶ್ವದಾಖಲೆಯ 68.55 ಮೀಟರ್ ದೂರ ಜಾವೆಲಿನ್ ಥ್ರೋ ಮಾಡುವ ಮೂಲಕ ಸುಮಿತ್ ಅಂಟಿಲ್ ದೇಶಕ್ಕೆ ಎರಡನೇ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಕುಸ್ತಿಪಟುವಾಗಿದ್ದ ಸುಮಿತ್, ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವವರೆಗಿನ ಪಯಣವೇ ರಣರೋಚಕವಾದದ್ದು.
ಸುಮಿತ್ ಅಂಟಿಲ್ ಹರ್ಯಾಣದ ಸೋನೆಪತ್ ಮೂಲದವರು. 2015ರಲ್ಲಿ ಬೈಕ್ ಅಪಘಾತದಲ್ಲಿ ತಮ್ಮ ಎಡಗಾಲಿನ ಮಂಡಿ ಕೆಳಗಿನ ಭಾಗವನ್ನು ಕಳೆದುಕೊಂಡರು. ಅಪಘಾತಕ್ಕೂ ಮುನ್ನ ಕುಸ್ತಿಪಟುವಾಗಿದ್ದ ಸುಮಿತ್, ತಮ್ಮ ಗ್ರಾಮದ ಪ್ಯಾರಾ ಅಥ್ಲೀಟ್ ಒಬ್ಬರ ಸಲಹೆಯಂತೆ 2018ರಲ್ಲಿ ಜಾವೆಲಿನ್ ಥ್ರೋ ಆರಂಭಿಸಿದರು. 2019ರಲ್ಲಿ ಇಟಲಿಯ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾ ಪ್ರಿಯಲ್ಲಿ ಬೆಳ್ಳಿ ಗೆದ್ದ ಅವರು, ಅದೇ ವರ್ಷ ಪ್ಯಾರಿಸ್ ಓಪನ್ ಹ್ಯಾಂಡಿಸ್ಪೋರ್ಟ್ ಹಾಗೂ ದುಬೈಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ರಜತ ಪದಕ ಜಯಿಸಿದರು.
ಚಿನ್ನ ಗೆದ್ದ ಸುಮಿತ್‌ಗೆ ದೂರವಾಣಿ ಮೂಲಕ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ!
ನೀರಜ್ ಚೋಪ್ರಾ ಜೊತೆ ಸ್ಪರ್ಧಿಸಿದ್ದ ಸುಮಿತ್ ಅಂಟಿಲ್!
ಸುಮಿತ್ ಇದೇ ವರ್ಷ ಮಾ.5ರಂದು ಪಟಿಯಾಲಾದಲ್ಲಿ ನಡೆದಿದ್ದ ಇಂಡಿಯನ್ ಗ್ರ್ಯಾನ್ ಪ್ರಿ ಅಥ್ಲೆಟಿಕ್ಸ್ ಕೂಟದಲ್ಲಿ ಟೋಕಿಯೋ ಒಲಿಂಪಿಕ್ಸ್ ಚಿನ್ನ ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಜೊತೆ ಸ್ಪರ್ಧಿಸಿದ್ದರು. ಪ್ಯಾರಾ ಅಥ್ಲೀಟ್ ಆದರೂ ಸಾಮಾನ್ಯ ವಿಭಾಗದಲ್ಲಿ ಸ್ಪರ್ಧಿಸಿದ್ದ ಸುಮಿತ್, 66.43 ಮೀ. ದೂರಕ್ಕೆ ಜಾವೆಲಿನ್ ಎಸೆದು 7ನೇ ಸ್ಥಾನ ಪಡೆದಿದ್ದರು.
ಸುಂದರ್ 10ನೇ ತರಗತಿ ಫೇಲಾಗಿದ್ದೇ ವರವಾಯಿತು!
ನವದೆಹಲಿ: ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಎಫ್46 ವಿಭಾಗದಲ್ಲಿ ದೇವೇಂದ್ರ ಝಝಾರಿಯಾ ಬೆಳ್ಳಿ ಪದಕವನ್ನು ಜಯಿಸಿದರೆ, ಇದೇ ವಿಭಾಗದಲ್ಲಿ ಸುಂದರ್ ಸಿಂಗ್ ಗುರ್ಜರ್ ಕಂಚಿನ ಪದಕ ಜಯಿಸಿದ್ದಾರೆ. ಕಲಿಕೆಯಲ್ಲಿ ಹಿಂದುಳಿದಿದ್ದ ಗುರ್ಜರ್‌ಗೆ ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದೇ ಒಂದು ವರದಾನವಾಯಿತು.
ಕಲಿಕೆಯಲ್ಲಿ ಹಿಂದುಳಿದಿದ್ದ ಸುಂದರ್ ಸಿಂಗ್ ಗುರ್ಜರ್ 10ನೇ ತರಗತಿ ಫೇಲಾಗಿದ್ದರು. ಬಳಿಕ ಶಿಕ್ಷಕಿಯ ಸೂಚನೆ ಮೇರೆಗೆ ಕ್ರೀಡೆಯತ್ತ ಆಸಕ್ತಿ ತೋರಿಸಿದರು. ಕುಸ್ತಿ ಪಟು ಆಗಿದ್ದ ಗುರ್ಜರ್ 2015ರಲ್ಲಿ ತನ್ನ ಸ್ನೇಹಿತನ ಮನೆಗೆ ತೆರಳಿದ್ದಾಗ ಲೋಹದ ಹಲಗೆ ಬಿದ್ದು ಎಡಗೈ ಕಳೆದುಕೊಂಡಿದ್ದರು. ನಂತರ ಜಾವೆಲಿನ್ ಎಸೆತ ಅಭ್ಯಾಸ ಮಾಡತೊಡಗಿದರು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ತಡವಾಗಿ ಬಂದಿದ್ದಕ್ಕೆ ಗುರ್ಜರ್‌ಗೆ ಸ್ಪರ್ಧೆಗೆ ಅವಕಾಶ ನಿರಾಕರಿಸಲಾಗಿತ್ತು. 2017 ಹಾಗೂ 2019ರ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಗುರ್ಜರ್ ಚಿನ್ನದ ಪದಕ ಗೆದ್ದಿದ್ದರು.