ಪ್ಯಾರಾಲಿಂಪಿಕ್ಸ್‌ನಲ್ಲಿ ಮತ್ತೊಂದು ಪದಕ ಗೆದ್ದ ಅವನಿ ಲೇಖರಾ
* ಮತ್ತೊಂದು ಪದಕ ಬೇಟೆಯಾಡಿದ ಅವನಿ ಲೇಖರಾ
* ಪ್ಯಾರಾಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಅಥ್ಲೀಟ್
* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 12ಕ್ಕೆ ಏರಿಕೆ
ಟೋಕಿಯೋ(ಸೆ.03): ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳಾ ಯುವ ಶೂಟರ್ ಅವನಿ ಲೇಖರಾ ಮತ್ತೊಂದು ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಹೌದು, 50 ಮೀಟರ್ ರೈಫಲ್ 3 ಪೊಸಿಷನ್ ಶೂಟಿಂಗ್ ಸ್ಪರ್ಧೆಯಲ್ಲಿ ಅವನಿ ಲೇಖರಾ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಫೈನಲ್ ಸ್ಪರ್ಧೆಯಲ್ಲಿ 445.9 ಅಂಕಗಳನ್ನು ಗಳಿಸುವ ಮೂಲಕ ಕಂಚಿನ ಪದಕ ಜಯಿಸಿದ್ದಾರೆ. ಈ ಮೊದಲು ಅವನಿ ಲೇಖರಾ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು. ಇದರೊಂದಿಗೆ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ 2 ಪದಕ ಗೆದ್ದ ಭಾರತದ ಮೊದಲ ಮಹಿಳಾ ಪ್ಯಾರಾಥ್ಲೀಟ್ ಎನ್ನುವ ಗೌರವಕ್ಕೆ ಅವನಿ ಪಾತ್ರರಾಗಿದ್ದಾರೆ.
Paralympics ಅಭಿನವ್ ಬಿಂದ್ರಾ ಆತ್ಮಕತೆ ಓದಿ ಶೂಟರ್ ಆದ ಅವನಿ ಲೇಖರಾ!
ಕೇವಲ 19 ವರ್ಷದ ರಾಜಸ್ಥಾನ ಮೂಲದ ಅವನಿ, 2012ರಲ್ಲಿ ಕಾರು ಅಪಘಾತಕ್ಕೆ ಒಳಗಾಗಿ ಬೆನ್ನುಮೂಳೆ ಜರ್ಝರಿತವಾಗಿತ್ತು. ಬಳಿಕ ಪಾರ್ಶ್ವವಾಯುವಿಗೆ ಒಳಗಾಗಿದ್ದ ಅವನಿ, 2008 ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಅವರ ಆತ್ಮಕತೆಯನ್ನು ಓದಿ ಕ್ರೀಡೆಯತ್ತ ಆಸಕ್ತರಾಗಿದ್ದರು.
ಅವನಿ ಲೇಖರಾ ಅವರು ಚಿನ್ನದ ಪದಕ ಗೆಲ್ಲುತ್ತಿದ್ದಂತೆಯೇ ಈ ಪ್ಯಾರಾಥ್ಲೀಟ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.