Paralympics ಅಭಿನವ್ ಬಿಂದ್ರಾ ಆತ್ಮಕತೆ ಓದಿ ಶೂಟರ್ ಆದ ಅವನಿ ಲೇಖರಾ!
* ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಅವನಿ ಹಿಂದಿದೆ ರೋಚಕ ಕಹಾನಿ
* ಅಭಿನವ್ ಬಿಂದ್ರಾ ಆತ್ಮಕಥೆ ಓದಿ ಸ್ಪೂರ್ತಿ ಪಡೆದಿದ್ದ ಅವನಿ
* ಅವನಿಗೆ ರಾಜಸ್ಥಾನ ಸರ್ಕಾರ 3 ಕೋಟಿ ರು. ಬಹುಮಾನ
ಟೋಕಿಯೋ(ಆ.31): ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎನ್ನುವ ದಾಖಲೆಯನ್ನು 19 ವರ್ಷದ ಅವನಿ ಲೇಖರಾ ಬರೆದಿದ್ದಾರೆ. ಸೋಮವಾರ ನಡೆದ ಮಹಿಳೆಯರ 10 ಮೀ. ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ 249.6 ಅಂಕ ಪಡೆದು ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇದು ನೂತನ ಪ್ಯಾರಾಲಿಂಪಿಕ್ ದಾಖಲೆಯೂ ಹೌದು. ಕಾರು ಅಪಘಾತದಲ್ಲಿ ಕಾಲು ಕಳೆದುಕೊಂಡ ಬಳಿಕ ಪ್ಯಾರಾಲಿಂಪಿಕ್ಸ್ ಆಗಿ ಚಿನ್ನ ಗೆಲ್ಲಲು ಶೂಟರ್ ಅಭಿನವ್ ಬಿಂದ್ರಾ ಆತ್ಮಕಥೆ ಕಾರಣ..!
ಹೌದು, ರಾಜಸ್ಥಾನದ ಜೈಪುರಲ್ಲಿ 2001ರಲ್ಲಿ ಜನಿಸಿದ ಅವನಿ ಲೇಖರ 2012ರಲ್ಲಿ ನಡೆದ ಕಾರು ಅಪಘಾತದಲ್ಲಿ ಬೆನ್ನು ಮೂಳೆಗೆ ತೀವ್ರ ಗಾಯವಾಗಿ ಪಾಶ್ರ್ವವಾಯು ಪೀಡಿತರಾಗಿದ್ದರು. ಮಾನಸಿಕವಾಗಿ ಕುಗ್ಗಿಹೋದ ಅವನಿ ಒಲಿಂಪಿಕ್ಸ್ ಚಿನ್ನ ವಿಜೇತ ಅಭಿನವ್ ಬಿಂದ್ರಾರ ಜೀವನಚರಿತ್ರೆ ಓದಿ ಕ್ರೀಡೆಯತ್ತ ಮುಖ ಮಾಡಿದರು. ಮೊದಲು ಆರ್ಚರಿ ಅಭ್ಯಾಸ ಮಾಡಿದರೂ ಬಳಿಕ ಶೂಟಿಂಗ್ ಕಲಿಯಲು ಶುರುವಿಟ್ಟರು. 2017ರಲ್ಲಿ ಯುಎಇಯಲ್ಲಿ ನಡೆದ ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ ಅವನಿ ಬೆಳ್ಳಿ ಗೆದ್ದುಕೊಂಡರು. 2019ರಲ್ಲಿ ಕ್ರೊವೇಷಿಯಾದಲ್ಲಿ ಹಾಗೂ 2021ರಲ್ಲಿ ಯುಎಇಯಲ್ಲಿ ನಡೆದ ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ ಬೆಳ್ಳಿಗೆ ಮುತ್ತಿಟ್ಟರು. ಅವನಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿದ್ದಾರೆ.
ಟೋಕಿಯೋ ಪ್ಯಾರಾಲಿಂಪಿಕ್ಸ್: ಚಿನ್ನದ ಪದಕ ಬೇಟೆಯಾಡಿದ ಅವನಿ..!
ಅವನಿಗೆ ರಾಜಸ್ಥಾನ ಸರ್ಕಾರ 3 ಕೋಟಿ ರು. ಬಹುಮಾನ
ಜೈಪುರ: ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಸಾಧನೆ ಮಾಡಿದ ರಾಜಸ್ಥಾನದ ಕ್ರೀಡಾಪಟುಗಳಿಗೆ ಅಲ್ಲಿನ ಸರ್ಕಾರ ನಗದು ಬಹುಮಾನ ಘೋಷಿಸಿದೆ. ಚಿನ್ನ ಗೆದ್ದ ಅವನಿ ಲೇಖರಾಗೆ 3 ಕೋಟಿ ರು. ಬೆಳ್ಳಿ ಗೆದ್ದ ದೇವೇಂದ್ರ ಝಾಝರಿಯಾಗೆ 2 ಕೋಟಿ ರು., ಕಂಚು ಗೆದ್ದ ಸುಂದರ್ ಸಿಂಗ್ ಗುರ್ಜರ್‌ಗೆ 1 ಕೋಟಿ ರು. ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ಆಶೋಕ್ ಗೆಹಲೋತ್ ಘೋಷಿಸಿದ್ದಾರೆ. ಇದೇ ವೇಳೆ ಭಾನುವಾರ ಹೈಜಂಪ್‌ನಲ್ಲಿ ಬೆಳ್ಳಿ ಗೆದ್ದಿದ್ದ ನಿಶಾದ್ ಕುಮಾರ್‌ಗೆ ಹಿಮಾಚಲ ಸರ್ಕಾರ 1 ಕೋಟಿ ರು. ಬಹುಮಾನ ಘೋಷಿಸಿದೆ.