ಪ್ಯಾರಾಲಿಂಪಿಕ್ಸ್: ಫೈನಲ್‌ಗೆ ಲಗ್ಗೆಯಿಟ್ಟ ಭವಿನಾ ಪಟೇಲ್‌ಗೆ ಶುಭಕೋರಿದ ಪ್ರಧಾನಿ ಮೋದಿ
* ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಫೈನಲ್‌ಗೇರಿದ ಭವಿನಾ ಪಟೇಲ್
* ಭವಿನಾ ಪಟೇಲ್ ಸಾಧನೆಗೆ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ
* ಯಾವುದೇ ಒತ್ತಡಕ್ಕೆ ಒಳಗಾಗದೇ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತಹ ಪ್ರದರ್ಶನ ತೋರಿ
ನವದೆಹಲಿ(ಆ.28): ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ ವೈಯಕ್ತಿಯ ಸಿ4 ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕವನ್ನು ಖಚಿತಪಡಿಸಿದ ಭವಿನಾ ಪಟೇಲ್ ಅವರಿಗೆ ಪ್ರಧಾನಿ ಮೋದಿ ಟ್ವೀಟ್ ಅಭಿನಂದನೆ ಸಲ್ಲಿಸಿದ್ದಾರೆ. ಇದಷ್ಟೇ ಅಲ್ಲದೇ ಚಿನ್ನದ ಪದಕಕ್ಕಾಗಿ ನಡೆಯುವ ಫೈನಲ್ ಪಂದ್ಯಕ್ಕೆ ಮೋದಿ ಶುಭ ಹಾರೈಸಿದ್ದಾರೆ.
ಹೌದು, ಶನಿವಾರ(ಆ.28) ಮುಂಜಾನೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭವಿನಾ ಪಟೇಲ್, ವಿಶ್ವದ ಮೂರನೇ ಶ್ರೇಯಾಂಕಿತೆ ಚೀನಾದ ಆಟಗಾರ್ತಿ ಎದುರು 3-2 ಸೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟರು. ಇದರೊಂದಿಗೆ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಟೇಬಲ್ ಟೆನಿಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಪ್ಯಾರಾ ಅಥ್ಲೀಟ್ ಎನ್ನುವ ಹಿರಿಮೆಗೆ ಭವಿನಾ ಪಾತ್ರರಾಗಿದ್ದಾರೆ. ಭವಿನಾ ಫೈನಲ್ ಪ್ರವೇಶಿಸುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರಲಾರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ಟ್ವೀಟ್ ಮೂಲಕ ಭವಿನಾಗೆ ಶುಭ ಹಾರೈಸಿದ್ದಾರೆ.
ಟೋಕಿಯೋ ಪ್ಯಾರಾಲಿಂಪಿಕ್ಸ್: ಟಿಟಿಯಲ್ಲಿ ಫೈನಲ್ ಪ್ರವೇಶಿಸಿ ಭವಿನಾ ಪಟೇಲ್, ಚಿನ್ನಕ್ಕೆ ಇನ್ನೊಂದೇ ಹೆಜ್ಜೆ
ಅಭಿನಂದನೆಗಳು ಭವಿನಾ ಪಟೇಲ್. ನೀವು ತುಂಬಾ ಚೆನ್ನಾಗಿ ಆಡಿದಿರಿ. ನಾಳೆ ನಡೆಯಲಿರುವ ಫೈನಲ್‌ನಲ್ಲಿ ನೀವು ಯಶಸ್ವಿಯಾಗಲಿ ಎಂದು ಇಡೀ ದೇಶ ಪ್ರಾರ್ಥಿಸುತ್ತಿದೆ ಹಾಗೂ ಚಿಯರ್ ಮಾಡಲಿದೆ. ಯಾವುದೇ ಒತ್ತಡಕ್ಕೆ ಒಳಗಾಗದೇ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತಹ ಪ್ರದರ್ಶನ ತೋರಿ. ನಿಮ್ಮ ಸಾಧನೆ ಇಡೀ ದೇಶಕ್ಕೆ ಸ್ಪೂರ್ತಿಯಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
34 ವರ್ಷದ ಭವಿನಾ ಪಟೇಲ್ ಅವರು 12 ತಿಂಗಳ ಮಗುವಾಗಿದ್ದಾಗ ಪೋಲಿಯೋ ಸೋಂಕಿಗೆ ಒಳಗಾಗಿ ಕಾಲಿನ ಸ್ವಾದೀನ ಕಳೆದುಕೊಂಡಿದ್ದರು. ಭವಿನಾ ಪಟೇಲ್ ಗುಜರಾತಿ ಮೆಶಾನಾ ಜಿಲ್ಲೆಯ ಸುಂದಿಯಾ ಎನ್ನುವ ಊರಿನವರಾಗಿದ್ದಾರೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭವಿನಾ ವಿಶ್ವದ ನಂ.1 ಶ್ರೇಯಾಂಕಿತ ಆಟಗಾರ್ತಿ ಚೀನಾದ ಯಿಂಗ್ ಝೋ ಅವರನ್ನು ಎದುರಿಸಲಿದ್ದಾರೆ.
ಭವಿನಾ ಪಟೇಲ್ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲದೇ ಹಲವು ಕ್ರೀಡಾತಾರೆಯರು ಹಾಗೂ ಸೆಲಿಬ್ರಿಟಿಗಳು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿ, ಫೈನಲ್ ಪಂದ್ಯಕ್ಕೆ ಶುಭಹಾರೈಸಿದ್ದಾರೆ.