ಟೋಕಿಯೋ ಪ್ಯಾರಾಲಿಂಪಿಕ್ಸ್: ಟಿಟಿಯಲ್ಲಿ ಫೈನಲ್ ಪ್ರವೇಶಿಸಿ ಭವಿನಾ ಪಟೇಲ್, ಚಿನ್ನಕ್ಕೆ ಇನ್ನೊಂದೇ ಹೆಜ್ಜೆ
* ಪ್ಯಾರಾಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಭವಿನಾ ಪಟೇಲ್
* ಮಹಿಳೆಯರ ವೈಯಕ್ತಿಯ ಸಿ4 ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಭವಿನಾ
* ಚಿನ್ನದ ಪದಕಕ್ಕಾಗಿ ಭವಿನಾ ಭಾನುವಾರ ಚೀನಾ ಆಟಗಾರ್ತಿ ಎದುರು ಪೈಪೋಟಿ
ಟೋಕಿಯೋ(ಆ.28): ಇಲ್ಲಿ ನಡೆಯುತ್ತಿರುವ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭವಿನಾ ಪಟೇಲ್ ಫೈನಲ್ ಪ್ರವೇಶಿಸುವ ಮೂಲಕ ಪದಕ ಖಚಿತಪಡಿಸಿಕೊಂಡಿದ್ದಷ್ಟೇ ಅಲ್ಲದೇ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಭವಿನಾ ಪಟೇಲ್ ಮಹಿಳೆಯರ ವೈಯಕ್ತಿಯ ಸಿ4 ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಖಚಿತಪಡಿಸಿದ್ದ ಭವಿತಾ ಇದೀಗ ಇಂದು(ಆ.28) ಮುಂಜಾನೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತೆ ಹಾಗೂ 2016ರ ರಿಯೋ ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಚೀನಾದ ಝಾಂಗ್ ಮಿಯಾ ಅವರನ್ನು 3-2 ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿ ನೂತನ ಇತಿಹಾಸ ರಚಿಸಿದ್ದಾರೆ.
ಈ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಮೊದಲ ಟೇಬಲ್ ಟೆನಿಸ್ ಪಟು ಎಂಬ ಕೀರ್ತಿಗೂ 34 ವರ್ಷದ ಭವಿನಾ ಪಾತ್ರರಾಗಿದ್ದಾರೆ. ಈ ಹಿಂದಿನ ಮುಖಾಮುಖಿಯಲ್ಲಿ ಚೀನಾ ಆಟಗಾರ್ತಿ ಎದುರು 11-0 ಸೋಲು-ಗೆಲುವಿನ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದ ಭವಿನಾ ಸೆಮಿಫೈನಲ್‌ನಲ್ಲಿ ದೈತ್ಯ ಸಂಹಾರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲ ಗೇಮ್‌ನಲ್ಲಿ ಚೀನಾ ಆಟಗಾರ್ತಿ ಮೇಲುಗೈ ಸಾಧಿಸಿದ್ದರು, ಆ ಬಳಿಕ ಭವಿನಾ ಮಿಂಚಿನ ಪ್ರದರ್ಶನ ತೋರಿದರು. 7-11, 11-7, 11-4, 9-11, 11-8 ಅಂಕಗಳ ಸಹಿತ 3-2 ಅಂತರದಲ್ಲಿ ಗೆದ್ದು ಭವಿನಾ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ಪ್ಯಾರಾಲಿಂಪಿಕ್ಸ್ ಟಿಟಿ: ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಭವಿನಾ ಪಟೇಲ್
ಇದೀಗ ಆಗಸ್ಟ್ 29ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭವಿನಾ ವಿಶ್ವದ ನಂ.1 ಆಟಗಾರ್ತಿ ಚೀನಾದ ಯಿಂಗ್ ಝೋ ಎದುರು ಚಿನ್ನದ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.
18ನೇ ನಿಮಿಷದಲ್ಲಿ ವಿಶ್ವ ನಂ.5ಗೆ ಶಾಕ್:
ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ 2016ರ ರಿಯೋ ಪ್ಯಾರಾಲಿಂಪಿಕ್ಸ್ ಚಾಂಪಿಯನ್, ವಿಶ್ವ ನಂ.5 ಸರ್ಬಿಯಾದ ಬೋರಿಸ್ಲೇವಾ ಪೆರಿಕ್ ರಾಂಕೋವಿಕ್ ವಿರುದ್ಧ ಭವಿನಾ 11-5, 11-6, 11-7 ಅಂತರದಲ್ಲಿ ಸುಲಭವಾಗಿ ಜಯ ಸಾಧಿಸಿದರು. 18ನೇ ನಿಮಿಷದಲ್ಲಿ ಪಂದ್ಯ ಮುಗಿಸಿದ ಭವಿನಾ, ಸರ್ಬಿಯಾ ಆಟಗಾರ್ತಿಗೆ ಆಘಾತ ನೀಡಿದರು.