ಪ್ಯಾರಾಲಿಂಪಿಕ್ಸ್: ಕನ್ನಡಿಗ ಕೋಚ್ ಸತ್ಯನಾರಾಯಣ ಗರಡಿಯಲ್ಲಿ ಪಳಗಿದ ಪ್ರತಿಭೆ ತಂಗವೇಲು..!
* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ರಜತ ಪದಕ ಗೆದ್ದ ಪ್ಯಾರಾಥ್ಲೀಟ್ ತಂಗವೇಲು
* ತಂಗವೇಲು ಯಶಸ್ಸಿನ ಹಿಂದಿದೆ ಕನ್ನಡಿಗ ಕೋಚ್ ಕೈವಾಡ
* 2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಹೈಜಂಪ್‌ನಲ್ಲಿ ದೇಶಕ್ಕೆ ಮೊತ್ತ ಮೊದಲ ಚಿನ್ನಗೆದ್ದಿದ್ದ ತಂಗವೇಲು
ಟೋಕಿಯೋ(ಸೆ.01): ರಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ತಮಿಳುನಾಡು ಮೂಲದ ಹೈಜಂಪ್ ಪ್ಯಾರಾಥ್ಲೀಟ್ ಮರಿಯಪ್ಪನ್ ತಂಗವೇಲು, ಇದೀಗ ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.
ಅಮ್ಮನ ಕನಸುಗಳನ್ನು ಸಾಕಾರಗೊಳಿಸುವ ಆಸೆ ಹೊತ್ತ ಮರಿಯಪ್ಪನ್ ತಂಗವೇಲು ಹೆಜ್ಜೆ ಇರಿಸಿದ್ದು, ಬೆಂಗಳೂರಿನ ಸಾಯ್ ಕೇಂದ್ರಕ್ಕೆ. ಇಲ್ಲಿ ಕನ್ನಡಿಗ, ರಾಷ್ಟ್ರೀಯ ಕೋಚ್ ಸತ್ಯನಾರಾಯಣರ ಗರಡಿಯಲ್ಲಿ ಪಳಗಿದ ತಂಗವೇಲು 2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಹೈಜಂಪ್‌ನಲ್ಲಿ ದೇಶಕ್ಕೆ ಮೊತ್ತ ಮೊದಲ ಚಿನ್ನ ತಂದುಕೊಟ್ಟರು. ಪದ್ಮಶ್ರೀ, ಅರ್ಜುನ ಹಾಗೂ ಖೇಲ್ ರತ್ನ ಪ್ರಶಸ್ತಿ ಪಡೆದಿರುವ ತಂಗವೇಲು ಈ ಬಾರಿ ಭಾರತದ ಧ್ವಜಧಾರಿಯಾಗಿದ್ದರು. ಆದರೆ ಕೋವಿಡ್ ಸಂಪರ್ಕ ಹಿನ್ನೆಲೆಯಲ್ಲಿ ಅವಕಾಶ ತಪ್ಪಿಸಿಕೊಂಡಿದ್ದರು.
ತಂಗವೇಲು ಸಾಧನೆಗೆ ಅಡ್ಡಿಯಾದ ಮಳೆ
ಟೋಕಿಯೋ: ಮಳೆಯ ನಡುವೆಯೇ ಹೈಜಂಪ್ ಟಿ42 ಸ್ಪರ್ಧೆಗಳು ಆರಂಭಗೊಂಡವು. ಇವು ಕ್ರೀಡಾಪಟುಗಳಿಗೆ ಸಾಕಷ್ಟು ತೊಂದರೆಯನ್ನುಂಟು ಮಾಡಿತು. ಈ ಬಗ್ಗೆ ಮರಿಯಪ್ಪನ್ ತಂಗವೇಲು ಸಹ ಬೇಸರ ವ್ಯಕ್ತ ಪಡಿಸಿದ್ದಾರೆ. ಮಳೆಯಿಂದಾಗಿ ನಾನು ಅತ್ಯುತ್ತಮವಾದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಪ್ಯಾರಾಲಿಂಪಿಕ್ಸ್: ಬೆಳ್ಳಿ ಗೆದ್ದ ತಂಗವೇಲುಗೆ ತಮಿಳ್ನಾಡು ಸರ್ಕಾರದಿಂದ 2 ಕೋಟಿ ಬಹುಮಾನ
2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 1.89 ಮೀಟರ್ ಎತ್ತರ ಪೂರ್ಣಗೊಳಿಸಿದ್ದ ತಂಗವೇಲು, ಮಳೆಯ ಕಾರಣ ಟೋಕಿಯೋದಲ್ಲಿ ತಮ್ಮದೆ ದಾಖಲೆಯನ್ನು ಸರಿಗಟ್ಟಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಮರಿಯಪ್ಪನ್ 1.86 ಮೀಟರ್ ಜಿಗಿಯುವ ಮೂಲಕ ಬೆಳ್ಳಿ ಪದಕ ಜಯಿಸಿದರು. ಸ್ಯಾಮ್ ಕೊನೆಯ ಅವಕಾಶದಲ್ಲಿ 1.88 ಮೀ. ಪೂರ್ಣಗೊಳಿಸಿ ಚಿನ್ನಕ್ಕೆ ಮುತ್ತಿಟ್ಟರು.